ಬೆಂಗಳೂರು: ನಗರದ ಸೌಂದರ್ಯ ಹಾಳುಗೆಡವಿ ಎಲ್ಲಾದರೂ ಅನಧಿಕೃತ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕಿದರೆ ನಾನೇ ಖುದ್ದಾಗಿ ಕೇಸ್ ದಾಖಲಿಸಲು ಸೂಚಿಸುತ್ತೇನೆ” ಎಂದು ಹಿಂದೆ ಉಪಮುಖ್ಯಮಂತ್ರಿಯಾಗಿದ್ದ, ಪ್ರಸ್ತುತ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದ್ದರು. ಆದರೆ, ಜೂನ್ 3ರಂದು ನೆರವೇರಲಿರುವ ಅವರದೇ ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭದ ಜೋಶ್‌ನಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ತಮ್ಮದೇ ನಾಯಕನ ಆದೇಶಕ್ಕೆ ಕವಡೆ ಕಾಸಿನ ಕೀಮ್ಮತ್ತು ನೀಡಿಲ್ಲ. ವರಿಷ್ಠರ ಸೂಚನೆ ಹಾಗೂ ಡಿಕೆಶಿಯವರ ಕಡಕ್ ಆದೇಶಗಳನ್ನು ಸಂಪೂರ್ಣವಾಗಿ ಮರೆತಿರುವ ಅಭಿಮಾನಿ ಬಳಗ, ರಾಜಧಾನಿಯ (Bengaluru) ತುಂಬಾ ಬ್ಯಾನರ್ ಹಾವಳಿ ಸೃಷ್ಟಿಸಿ ನಾಯಕರಿಗೇ ಮುಜುಗರ ತಂದಿಟ್ಟಿದೆ.
ಬೇಸರ ವ್ಯಕ್ತಪಡಿಸಿದ ಸಾರ್ವಜನಿಕರು
ಹಿಂದೆ ತಮ್ಮ ಜನ್ಮದಿನದ ಸಂದರ್ಭದಲ್ಲೂ ಬೆಂಗಳೂರಿನ ಅಂದ ಕೆಡಿಸುವ ಯಾವುದೇ ಫ್ಲೆಕ್ಸ್ ಅಳವಡಿಸದಂತೆ ಡಿ.ಕೆ. ಶಿವಕುಮಾರ್ ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಆದರೆ, ಈ ಮಹತ್ವದ ಸುಮುಹೂರ್ತದ ನೆಪದಲ್ಲಿ ಇಡೀ ಬೆಂಗಳೂರು ಈಗ ಫ್ಲೆಕ್ಸ್‌ಗಳ ಸಾಮ್ರಾಜ್ಯವಾಗಿ ಮಾರ್ಪಟ್ಟಿದೆ. ನಗರದ ಪ್ರಮುಖ ಜಂಕ್ಷನ್‌ಗಳು, ಸಿಗ್ನಲ್‌ಗಳು, ರಾಜಭವನದ ಆಸುಪಾಸು ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯುದ್ದಕ್ಕೂ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಫುಟ್‌ಪಾತ್ ಹಾಗೂ ರಸ್ತೆಗಳ ಅಂಚನ್ನು ಒತ್ತುವರಿ ಮಾಡಿಕೊಂಡು ಅಳವಡಿಸಲಾಗಿರುವ ಈ ಬ್ಯಾನರ್‌ಗಳು ವಾಹನ ಸವಾರರ ಗಮನ ಬೇರೆಡೆ ಸೆಳೆಯುತ್ತಿದ್ದು, ಅಪಘಾತಗಳಿಗೆ ಮುನ್ನುಡಿ ಬರೆಯುವಂತಿವೆ ಎಂದು ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಾಗರಿಕರ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲೂ ಸ್ಫೋಟಗೊಂಡಿದ್ದು, ಅಕ್ರಮ ಫ್ಲೆಕ್ಸ್‌ಗಳ ಚಿತ್ರ ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಸರ್ಕಾರದ ಧೋರಣೆಯನ್ನು ಪ್ರಶ್ನಿಸುತ್ತಿದ್ದಾರೆ. “ನಿಯಮ ಮತ್ತು ಕಾಯ್ದೆಗಳು ಏನಿದ್ದರೂ ಕೇವಲ ಜನಸಾಮಾನ್ಯರಿಗೆ ಮಾತ್ರವೇ? ರಾಜಕೀಯ ಶಕ್ತಿಗಳಿಗೂ ಮತ್ತು ಅವರ ಚೇಲಾಗಳಿಗೂ ಕಾನೂನು ಅನ್ವಯಿಸುವುದಿಲ್ಲವೇ?” ಎಂದು ನೆಟ್ಟಿಗರು ಆಡಳಿತ ಮಂಡಳಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಸರ್ಕಾರದ ಆಡಳಿತದ ಆರಂಭದ ಸಡಗರ ಒಂದೆಡೆಯಾದರೆ, ಸಾರ್ವಜನಿಕ ನಿಯಮಗಳ ಈ ಬಹಿರಂಗ ಉಲ್ಲಂಘನೆ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬರಹಗಾರ ರಾಜೀವ ಹೆಗಡೆ, “ಇದರಲ್ಲಿ ಭಾವಿ ಸಿಎಂ ಡಿ.ಕೆ.ಶಿವಕುಮಾರ್ ಅವರ ತಪ್ಪೇನೂ ಇಲ್ಲ. ಆದರೆ ಚೇಲಾಗಳು ಮಾಡುವ ಇಂತಹ ಮೂರ್ಖತನದ ಕೆಲಸಗಳಿಂದ ಅವರ ನಾಯಕರಿಗೇ ಸಾರ್ವಜನಿಕವಾಗಿ ಮುಜುಗರ ಎದುರಾಗುತ್ತದೆ ಎನ್ನುವ ಕನಿಷ್ಠ ಜ್ಞಾನವೂ ಇವರಿಗಿಲ್ಲ. ಡಿಕೆಶಿ ಹಲವು ಬಾರಿ ಈ ಫ್ಲೆಕ್ಸ್ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದ್ದನ್ನು ನಾನು ನೋಡಿದ್ದೇನೆ. ಆದರೆ ಪಕ್ಷಾತೀತವಾಗಿ ಬೆಳೆದುಬಂದಿರುವ ಈ ಬ್ಯಾನರ್ ಹಾವಳಿ ದಿನನಿತ್ಯ ಸವಾರರಿಗೆ ನರಕ ದರ್ಶನ ಮಾಡಿಸುತ್ತಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಲೇವಡಿ
ಇದೇ ವಿಷಯವಾಗಿ ಎ.ಎನ್.ಸಚ್ಚಿದಾನಂದ ಎಂಬುವವರು ಫೇಸ್‌ಬುಕ್ ಪೋಸ್ಟ್ ಮೂಲಕ ಲೇವಡಿ ಮಾಡಿದ್ದು, “ಸಾಹಸ ಮತ್ತು ಥ್ರಿಲ್ ಅನುಭವಿಸಬೇಕಾದವರು ತಡಮಾಡದೆ ಎಂ.ಜಿ. ರೋಡ್‌ಗೆ ಬನ್ನಿ! ಬೆಂಗಳೂರಿನ ಹೃದಯಭಾಗದಲ್ಲಿ ಜಿಬಿಎ ಹಾಗೂ ರಾಜಕಾರಣಿಗಳ ಜಂಟಿ ಆಶ್ರಯದಲ್ಲಿ ಉಚಿತವಾಗಿ ‘ಸಮ್ಮರ್ ಅಡ್ವೆಂಚರ್ ಕ್ಯಾಂಪ್’ ಆಯೋಜಿಸಲಾಗಿದೆ. ಇಲ್ಲಿ ನಿಮಗೆ ದಿಢೀರನೆ ಎದುರಾಗುವ ಮಹಾನ್ ನಾಯಕರ ಕಟೌಟ್‌ಗಳು, ಕಣ್ಣಿಗೆ ಚುಚ್ಚುವ ಕೋಲುಗಳ ಹರ್ಡಲ್ ರೇಸ್ ಮತ್ತು ಫುಟ್‌ಪಾತ್ ಮೇಲೆ ಫ್ಲೆಕ್ಸ್‌ಗಳ ನಡುವೆ ಸಾಗುವ ಸರ್ವೈವಲ್ ಗೇಮ್‌ಗಳ ಅನುಭವ ಸಿಗಲಿದೆ. ಇಷ್ಟೆಲ್ಲಾ ಫ್ರೀಯಾಗಿ ಸಿಗುವಾಗ ವಂಡರ್‌ಲಾ ರೇಂಜ್‌ಗೆ ಖರ್ಚು ಮಾಡುವುದು ಯಾಕೆ? ಜಿಬಿಎ ಅಧಿಕಾರಿಗಳು ನಿದ್ದೆಯಿಂದ ಎಚ್ಚರಗೊಳ್ಳುವವರೆಗೆ ಮಾತ್ರ ಈ ಆಫರ್ ಇರಲಿದೆ” ಎಂದು ಜಿಬಿಎ ಆಡಳಿತದ ನಿಷ್ಕ್ರಿಯತೆಯನ್ನು ತಮಾಷೆ ಮಾಡಿದ್ದಾರೆ.
