ಮಂಗಳೂರು: ಕರಾವಳಿಯ ಬಂಟ್ವಾಳ (Bantwala) ತಾಲೂಕಿನ ಜನರೇ ದಂಗಾಗುವಂತೆ ಮಾಡಿರುವ ಬಿ.ಸಿ. ರೋಡ್ ಬಸ್ ನಿಲ್ದಾಣದ ಯುವತಿ ಲಾವಣ್ಯ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹತ್ಯೆಯ ಹಿಂದಿನ ಅಸಲಿ ಕಾರಣ ಈಗ ಬಯಲಾಗಿದೆ. ಕೊಲೆ ನಡೆದ ಕೇವಲ 24 ಗಂಟೆಯೊಳಗೆ ಆರೋಪಿ ಚೇತನ್‌ನನ್ನು ಹೆಡೆಮುರಿ ಕಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಅವರು ಪ್ರಕರಣದ ನಿಖರ ವಿವರಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.
ಕೊಲೆಗೆ ಅಸಲಿ ಕಾರಣ ಏನು? ಲಾವಣ್ಯ ಮತ್ತು ಚೇತನ್ ನಡುವೆ ಪ್ರೇಮವಿತ್ತು, ಬಳಿಕ ಬ್ರೇಕ್‌ಅಪ್ ಆಗಿದ್ದರಿಂದ ಈ ಕೊಲೆ ನಡೆದಿದೆ ಎಂಬ ಗಾಳಿಸುದ್ದಿಗಳು ಆರಂಭದಲ್ಲಿ ಹರಿದಾಡಿದ್ದವು. ಆದರೆ, ಇದು ಬ್ರೇಕ್‌ಅಪ್ ಕೊಲೆಯಲ್ಲ, ಬದಲಿಗೆ ಏಕಪಕ್ಷೀಯ ಪ್ರೇಮದ (ಒನ್ ಸೈಡ್ ಲವ್) ಭೀಕರ ಅಂತ್ಯ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಚೇತನ್ ಲಾವಣ್ಯಳನ್ನು ಮದುವೆಯಾಗಲು ಬಯಸಿದ್ದ ಹಾಗೂ ಪ್ರೀತಿಸುತ್ತಿದ್ದ. ಆದರೆ, ಆತನ ಈ ಪ್ರಸ್ತಾಪವನ್ನು ಲಾವಣ್ಯ ಸಂಪೂರ್ಣವಾಗಿ ತಿರಸ್ಕರಿಸಿದ್ದಳು. ಇದೇ ಕೋಪದಲ್ಲಿ ಹಂತಕ ಚೇತನ್, ನೂರಾರು ಸಾರ್ವಜನಿಕರು ಓಡಾಡುತ್ತಿದ್ದ ಬಸ್ ನಿಲ್ದಾಣದಲ್ಲೇ ಆಕೆಯ ಮೇಲೆ ತಲ್ವಾರ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಪ್ರಾಣ ತೆಗೆದಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಖಾಕಿ ಬಲೆಯಲ್ಲಿ ಸಿಕ್ಕಿಬಿದ್ದ ಹಂತಕ: ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದರು. ಭರ್ಜರಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿ ಚೇತನ್‌ನನ್ನು ವಶಕ್ಕೆ ಪಡೆದಿದೆ. ಬಂಧನದ ಸಂದರ್ಭದಲ್ಲಿ ತಾನು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆತ ತಿಳಿಸಿದ್ದರಿಂದ, ಸದ್ಯ ಆತನನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚೇತನ್ ಪ್ರಾಣಾಪಾಯದಿಂದ ಪಾರಾಗುತ್ತಿದ್ದಂತೆಯೇ ಆತನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಸತ್ಯಾಸತ್ಯತೆಗಳನ್ನು ಹೊರತರಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
