ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಬಿರುಸಿನಿಂದ ಸಾಗಿದ್ದು, ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಶಾಸಕರು ಭಾರಿ ಲಾಬಿ ನಡೆಸುತ್ತಿರುವ ಬೆನ್ನಲ್ಲೇ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ (UT Khader) ಅತ್ಯಂತ ಪ್ರಮುಖ ಹೇಳಿಕೆ ನೀಡಿದ್ದಾರೆ. ಹೊಸ ಕ್ಯಾಬಿನೆಟ್‌ನಲ್ಲಿ ತಮಗೆ ಸ್ಥಾನ ನೀಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರ ವಿವೇಚನೆಗೆ ಬಿಟ್ಟದ್ದು. ತಾವಂತೂ ಸಚಿವ ಸ್ಥಾನದ ಆಕಾಂಕ್ಷಿಯಾಗಿ ಹಠ ಹಿಡಿದು ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಗೊಂದಲ ಇಲ್ಲ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್, ಸಚಿವ ಸ್ಥಾನ ಸಿಗುವ ಕುರಿತು ತಾವು ಯಾವುದೇ ಗೊಂದಲಕ್ಕೊಳಗಾಗಿಲ್ಲ ಎಂದಿದ್ದಾರೆ. ಮಂತ್ರಿಗಿರಿಗಾಗಿ ವರಿಷ್ಠರ ಮನೆ ಬಾಗಿಲು ತಟ್ಟಲು ತಾವು ದೆಹಲಿ ವಿಮಾನ ಹತ್ತುತ್ತಿಲ್ಲ; ಅದರ ಬದಲಾಗಿ ತಮ್ಮ ಮಂಗಳೂರು ಕ್ಷೇತ್ರದ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ತಾಯ್ನಾಡಿಗೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮ ರಾಜಕೀಯ ಇತಿಹಾಸವನ್ನು ನೆನಪಿಸಿಕೊಂಡ ಸ್ಪೀಕರ್ ಖಾದರ್, ತಾವು ಎಂದಿಗೂ ಅಧಿಕಾರಕ್ಕಾಗಿ ಅಥವಾ ಯಾವುದೇ ಹುದ್ದೆಗಾಗಿ ಪಕ್ಷದ ಮುಂದೆ ಬೇಡಿಕೆ ಇಟ್ಟವರಲ್ಲ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಈ ಹಿಂದೆ ಪಕ್ಷ ಸಚಿವ ಸ್ಥಾನ ನೀಡಿದಾಗ ಅತ್ಯಂತ ನಿಷ್ಠೆಯಿಂದ ಜವಾಬ್ದಾರಿ ನಿಭಾಯಿಸಿದ್ದೇನೆ. ಕೇವಲ ಶಾಸಕನಾಗಿದ್ದಾಗ ನನ್ನ ಆಡಳಿತ ವೈಖರಿ ನೋಡಿ ‘ಸದನ ವೀರ’ ಪ್ರಶಸ್ತಿ ಒಲಿದು ಬಂದಿತ್ತು. ಸಚಿವನಾಗಿದ್ದಾಗ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ನನ್ನ ರಾಜಕೀಯ ಕಾರ್ಯವೈಖರಿಯನ್ನು ಗಮನಿಸಿಯೇ ಸಿದ್ದರಾಮಯ್ಯನವರು ಹಿಂದೆ ನನ್ನನ್ನು ವಿರೋಧ ಪಕ್ಷದ ಉಪನಾಯಕನನ್ನಾಗಿ ಮಾಡಿದ್ದರು. ಪ್ರಸ್ತುತ ಸ್ಪೀಕರ್ ಸ್ಥಾನದ ಜವಾಬ್ದಾರಿಯನ್ನೂ ಅಷ್ಟೇ ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ನೀಡುವ ಯಾವುದೇ ತೀರ್ಮಾನಕ್ಕೂ ತಲೆಬಾಗಲು ಸಿದ್ಧ ಎಂದಿದ್ದಾರೆ.
ಪಕ್ಷದ ತೀರ್ಮಾನ ಒಪ್ಪುವೆ
ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಅತ್ಯಂತ ಸಂತೋಷ ಹಾಗೂ ಸಮಾಧಾನದಿಂದ ಒಪ್ಪಿಕೊಳ್ಳುವುದಾಗಿ ಹೇಳಿದ ಅವರು, ತಾವು ಅಧಿಕಾರಕ್ಕಾಗಿ ಹಠ ಹಿಡಿಯುವ ರಾಜಕಾರಣಿಯಲ್ಲ. ಸದ್ಯಕ್ಕೆ ತಮಗೆ ದೆಹಲಿ ಪ್ರವಾಸದ ಯಾವುದೇ ಯೋಜನೆಯಿಲ್ಲ, ಕೇವಲ ಜನರ ಸೇವೆಗಾಗಿ ಮಂಗಳೂರಿಗೆ ತೆರಳುತ್ತಿರುವುದಾಗಿ ಹೇಳುವ ಮೂಲಕ ಸಚಿವ ಸ್ಥಾನದ ರೇಸ್‌ನಿಂದ ತಾವು ದೂರ ಇರುವುದಾಗಿ ಬಿಂಬಿಸಿದ್ದಾರೆ.
