ನವದೆಹಲಿ: ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲದ ಪ್ರಮುಖ ಕಿಂಗ್ಪಿನ್ ಮೊಹಮ್ಮದ್ ಸಲೀಂ ಡೋಲಾನನ್ನು (Salim Dola) ಟರ್ಕಿಯಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಮಂಗಳವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದ 59 ವರ್ಷದ ಈತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಮಿತ್ ಶಾ ಪ್ರತಿಕ್ರಿಯೆ
ಸಲೀಂ ಡೋಲಾ ದಸ್ತಗಿರಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಾದಕ ದ್ರವ್ಯ ಜಾಲದ ವಿರುದ್ಧದ ಹೋರಾಟದಲ್ಲಿ ಇದೊಂದು ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ. ಮೋದಿಯವರ ಸರ್ಕಾರವು ಡ್ರಗ್ ಕಾರ್ಟೆಲ್ಗಳನ್ನು ಬೇರುಸಹಿತ ಕಿತ್ತೊಗೆಯಲು ಬದ್ಧವಾಗಿದ್ದು, ನಮ್ಮ ಏಜೆನ್ಸಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಲವನ್ನು ವಿಸ್ತರಿಸಿವೆ. ಡ್ರಗ್ ಮಾಫಿಯಾ ಕಿಂಗ್ಪಿನ್ಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಅವರಿಗೆ ಈಗ ರಕ್ಷಣೆ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಮುಂಬೈನ ಡೊಂಗ್ರಿ ನಿವಾಸಿಯಾದ ಸಲೀಂ ಡೋಲಾ, ಕಳೆದ ಒಂದು ದಶಕದಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಭಾರತದ ಹಲವು ರಾಜ್ಯಗಳಲ್ಲಿ ಮಾದಕ ದ್ರವ್ಯ ಜಾಲವನ್ನು ನಡೆಸುತ್ತಿದ್ದನು. ಈತನ ಮಗ ತಾಹಿರ್ ಮತ್ತು ಸೋದರಳಿಯ ಮುಸ್ತಫಾನನ್ನು ಕಳೆದ ವರ್ಷವಷ್ಟೇ ಯುಎಇಯಿಂದ ಗಡಿಪಾರು ಮಾಡಲಾಗಿತ್ತು. ಇದು ಡೋಲಾನ ಜಾಲವನ್ನು ದುರ್ಬಲಗೊಳಿಸಿತ್ತು. 1998ರಲ್ಲಿ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ 40 ಕೆಜಿ ಮಾದಕ ದ್ರವ್ಯದೊಂದಿಗೆ ಈತ ಸಿಕ್ಕಿಬಿದ್ದಿದ್ದನು. ಅಂದಿನಿಂದಲೂ ಈತ ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ ಗುಪ್ತ ಪ್ರಯೋಗಾಲಯಗಳನ್ನು ಸ್ಥಾಪಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್ ತಯಾರಿಸಿ ಸರಬರಾಜು ಮಾಡುತ್ತಿದ್ದನು.
ಟರ್ಕಿಯಲ್ಲಿ ಸಲೀಂ ಅರೆಸ್ಟ್
ಇತ್ತೀಚೆಗೆ ಮುಂಬೈ ಪೊಲೀಸರು ನಡೆಸಿದ ತನಿಖೆಯಲ್ಲಿ ಸಾಂಗ್ಲಿ ಮತ್ತು ಸೂರತ್ನಿಂದ ಯುಎಇ ಮತ್ತು ಟರ್ಕಿವರೆಗೆ ಹಬ್ಬಿದ್ದ ಡ್ರಗ್ ಜಾಲದ ಹಿಂದೆ ಈತನ ಕೈವಾಡ ಇರುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ಸಿಬಿ ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು. ಸದ್ಯ ದೆಹಲಿ ಎನ್ಸಿಬಿ ವಶದಲ್ಲಿರುವ ಈತನನ್ನು ವಿಚಾರಣೆ ನಡೆಸಿದ ನಂತರ, ಮಹಾರಾಷ್ಟ್ರ ಮತ್ತು ಗುಜರಾತ್ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಲೀಂ ಮಿರ್ಚಿ ನಂತರ ದಾವೂದ್ ಇಬ್ರಾಹಿಂನ ಡ್ರಗ್ ವ್ಯವಹಾರಗಳನ್ನು ಈತನೇ ನಿಭಾಯಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆಗೆ ಯತ್ನ: ಭದ್ರತಾ ಲೋಪದ ಬಗ್ಗೆ ತೀವ್ರ ಆಕ್ರೋಶ
