TOP NEWS

Sanjay Dutt: ಕೆಡಿ ಸಿನಿಮಾ ಹಾಡಿನ ವಿವಾದ, ಕ್ಷಮೆ ಕೇಳಿದ ಸಂಜತ್‌ ದತ್

Sanjay Dutt apologises after Sarke Chunar Teri Sarke row

ನವದೆಹಲಿ: ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ: ದಿ ಡೆವಿಲ್’ನ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಮತ್ತು ಅಶ್ಲೀಲ ಸಾಹಿತ್ಯವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ, ನಟ ಸಂಜಯ್ ದತ್ (Sanjay Dutt) ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಲಿಖಿತ ಕ್ಷಮಾಪಣೆ ಸಲ್ಲಿಸಿದ್ದಾರೆ. ಈ ಹಾಡು ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಹಿಳೆಯರ ಅಸಭ್ಯ ಚಿತ್ರಣವಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಚಿತ್ರತಂಡಕ್ಕೆ ಸಮನ್ಸ್ ಜಾರಿ ಮಾಡಿತ್ತು.

ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಸಂಜು ಬಾಬಾ

ವಿವಾದ ಹೆಚ್ಚಾಗುತ್ತಿದ್ದಂತೆ, ಈ ಹಾಡನ್ನು ಯೂಟ್ಯೂಬ್ ಮತ್ತು ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿತ್ತು. ಪ್ರಕರಣದ ವಿಚಾರಣೆಗಾಗಿ ಸಂಜಯ್ ದತ್ ಅವರು ತಮ್ಮ ವಕೀಲರೊಂದಿಗೆ ದೆಹಲಿಯಲ್ಲಿರುವ ರಾಷ್ಟ್ರೀಯ ಮಹಿಳಾ ಆಯೋಗದ ಕಚೇರಿಗೆ ಹಾಜರಾದರು. ಈ ವೇಳೆ ಹಾಡಿನಿಂದ ಉಂಟಾದ ಅನಗತ್ಯ ನೋವಿಗೆ ನಟ ವಿಷಾದ ವ್ಯಕ್ತಪಡಿಸಿದರು. ಆಯೋಗವು ಎತ್ತಿದ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸಿದ ಅವರು, ತಿದ್ದಿಕೊಳ್ಳುವ ಕ್ರಮವಾಗಿ ಬುಡಕಟ್ಟು ಸಮುದಾಯದ 50 ಬಾಲಕಿಯರ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಘೋಷಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ತಾವು ಭಾಗವಹಿಸುವ ಯಾವುದೇ ಸಿನಿಮಾಗಳ ಒಪ್ಪಂದದಲ್ಲಿ ಕಡ್ಡಾಯವಾಗಿ ಕಾನೂನು ಪರಿಶೀಲನಾ ನಿಯಮಗಳನ್ನು (legal due diligence clauses) ಸೇರಿಸುವುದಾಗಿ ಸಂಜಯ್ ದತ್ ಭರವಸೆ ನೀಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಗೌರವಯುತವಾದ ಚಿತ್ರಣವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ಆಯೋಗಕ್ಕೆ ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಪಡೆದಿದ್ದ ಮತ್ತೊಬ್ಬ ನಟಿ ನೋರಾ ಫತೇಹಿ ಅವರು ಸದ್ಯ ವಿದೇಶದಲ್ಲಿ ಇರುವುದರಿಂದ, ವಿಚಾರಣೆಗೆ ಹಾಜರಾಗಲು ಹೊಸ ದಿನಾಂಕವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬರಲಿದೆಯಂತೆ ತ್ರಿ ಈಡಿಯಟ್ಸ್‌ ಸೀಕ್ವೆಲ್‌

Leave a Reply

Your email address will not be published. Required fields are marked *