TOP NEWS

3 Idiots: ಬರಲಿದೆಯಂತೆ ತ್ರಿ ಈಡಿಯಟ್ಸ್‌ ಸೀಕ್ವೆಲ್‌

Bollywood 3 idiot sequel is coming soon

ಮುಂಬೈ: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಮೆಚ್ಚಿನ ಸಿನಿಮಾಗಳಲ್ಲೊಂದಾದ ‘3 ಈಡಿಯಟ್ಸ್’ (3 Idiots) ಚಿತ್ರದ ಮುಂದುವರಿದ ಭಾಗ (ಸೀಕ್ವೆಲ್) ಬರಲಿದೆ ಎಂಬ ಸುದ್ದಿ ಇದೀಗ ಚಿತ್ರಪ್ರೇಮಿಗಳಲ್ಲಿ ಭಾರಿ ಉತ್ಸಾಹ ಮೂಡಿಸಿದೆ. 2009ರಲ್ಲಿ ತೆರೆಕಂಡು ಭಾರಿ ಯಶಸ್ಸು ಗಳಿಸಿದ್ದ ಈ ಚಿತ್ರದ ಮುಂದುವರಿದ ಭಾಗವನ್ನು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರೇ ನಿರ್ದೇಶಿಸಲಿದ್ದು, ಅಮೀರ್ ಖಾನ್ ಸೇರಿದಂತೆ ಮೂಲ ಚಿತ್ರದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕಥೆ ಸಿದ್ದವಾಗ್ತಿದೆ ಎಂದ ಅಮೀರ್

ಈ ಕುರಿತು ಸ್ವತಃ ಅಮೀರ್ ಖಾನ್ ಅವರೇ ಅಧಿಕೃತ ಸುಳಿವು ನೀಡಿದ್ದಾರೆ. ತಮ್ಮ ನಿರ್ಮಾಣದ ‘ಏಕ್ ದಿನ್’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅಮರ್ ಉಜಾಲಾ ಜೊತೆ ಮಾತನಾಡಿದ ಅಮೀರ್, “ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜತ್ ಜೋಶಿ ಅವರು ‘3 ಈಡಿಯಟ್ಸ್ 2’ ಚಿತ್ರದ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ. ನಾನು ಕಥೆಯನ್ನು ಕೇಳಿದ್ದೇನೆ, ಅದು ತುಂಬಾ ಅದ್ಭುತವಾಗಿದೆ. ಮೊದಲ ಭಾಗದ ಹತ್ತು ವರ್ಷಗಳ ನಂತರದ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ಹಳೆಯ ಹಾಸ್ಯ ಮತ್ತು ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. ಮತ್ತೆ ಫುನ್ಸುಖ್ ವಾಂಗ್ಡು ಪಾತ್ರದಲ್ಲಿ ನಟಿಸಲು ನಾನು ಕಾತರನಾಗಿದ್ದೇನೆ” ಎಂದು ಹಂಚಿಕೊಂಡಿದ್ದಾರೆ. ಸದ್ಯ ಚಿತ್ರಕಥೆಯ ಮೇಲೆ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಮಯದಲ್ಲಿ ಅಮೀರ್ ಖಾನ್ ತಮ್ಮ ಇತರ ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ. ದಾದಾಸಾಹೇಬ್ ಫಾಲ್ಕೆ ಅವರ ಜೀವನಚರಿತ್ರೆಯ ಆಧಾರಿತ ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಮಾಡಬೇಕೆಂದುಕೊಂಡಿದ್ದರಾದರೂ, ಚಿತ್ರಕಥೆಯಲ್ಲಿನ ಕೆಲವು ಸಮಸ್ಯೆಗಳಿಂದಾಗಿ ಆ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಉದ್ಯಮಿ ಅಶ್ನೀರ್ ಗ್ರೋವರ್ ಅವರ ಜೀವನಚರಿತ್ರೆಯಲ್ಲಿ ಅಮೀರ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆಯಾದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.

ಸದ್ಯಕ್ಕೆ ಅಮೀರ್ ಖಾನ್ ತಮ್ಮ ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರವು ಇದೇ ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮದುವೆ ಹೆಸರಲ್ಲಿ ಉದ್ಯಮಿಗೆ 9 ಕೋಟಿ ವಂಚಿಸಿದ ನಟಿ

Leave a Reply

Your email address will not be published. Required fields are marked *