ಹೈದರಾಬಾದ್: ಚಿಕಿತ್ಸೆಯ ನೆಪದಲ್ಲಿ ಬೀದಿ ನಾಯಿಗಳನ್ನು ಹಿಡಿದು ತಂದು, ಅವುಗಳ ರಕ್ತವನ್ನು (Crime) ಬಲವಂತವಾಗಿ ತೆಗೆದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ದಂಧೆಯೊಂದು ಹೈದರಾಬಾದ್ನ ಶೇಕ್ಪೇಟ್ನ ಖಾಸಗಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಕೇಂದ್ರದ ಮಾಜಿ ಸಚಿವೆ ಮತ್ತು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ ಅವರು ನೀಡಿದ ದೂರಿನ ಮೇರೆಗೆ ಈ ಕರಾಳ ಕೃತ್ಯ ಬಯಲಾಗಿದೆ.
ಏನಿದು ಅಕ್ರಮ ದಂಧೆ?
ಆಸ್ಪತ್ರೆಯ ಆಡಳಿತ ಮಂಡಳಿಯು ಬೀದಿ ನಾಯಿಗಳನ್ನು ರಕ್ಷಣೆ ಮತ್ತು ಚಿಕಿತ್ಸೆಯ ನೆಪದಲ್ಲಿ ಕರೆತಂದು, ಆಸ್ಪತ್ರೆಯ ಆವರಣದಲ್ಲಿ ಬಂಧಿಸಿಡುತ್ತಿತ್ತು. ನಂತರ, ಅವುಗಳ ರಕ್ತವನ್ನು ಬಲವಂತವಾಗಿ ತೆಗೆದು ಸಂಗ್ರಹಿಸುತ್ತಿತ್ತು. ಆಸ್ಪತ್ರೆಗೆ ಬರುವ ಸಾಕು ನಾಯಿಗಳ ಮಾಲೀಕರನ್ನು ಗುರಿಯಾಗಿಸಿಕೊಂಡು ಈ ದಂಧೆಕೋರರು ಭಯ ಹುಟ್ಟಿಸುತ್ತಿದ್ದರು. ಸಾಕು ನಾಯಿಗಳಿಗೆ ಯಾವುದೇ ರೋಗ ಇಲ್ಲದಿದ್ದರೂ, ಸುಳ್ಳು ವೈದ್ಯಕೀಯ ವರದಿ ನೀಡಿ ಅವುಗಳಿಗೆ ಅನಿಮಿಯಾ (ರಕ್ತಹೀನತೆ) ಇದೆ ಎಂದು ನಂಬಿಸುತ್ತಿದ್ದರು. ಬಳಿಕ, ಸಂಗ್ರಹಿಸಿಟ್ಟಿದ್ದ ಬೀದಿ ನಾಯಿಗಳ ರಕ್ತವನ್ನು ಸಾಕು ನಾಯಿಗಳಿಗೆ ವರ್ಗಾಯಿಸಿ, ಒಂದು ಪ್ಯಾಕೆಟ್ ರಕ್ತಕ್ಕೆ ಬರೋಬ್ಬರಿ 18,000 ರಿಂದ 25,000 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು.
ಪ್ರಾಣಿಗಳ ಜೀವದೊಂದಿಗೆ ಚೆಲ್ಲಾಟ
ಪದೇ ಪದೇ ರಕ್ತ ತೆಗೆದಿದ್ದರಿಂದ ಹಲವು ಬೀದಿ ನಾಯಿಗಳು ಅನಿಮಿಯಾದಿಂದ ಬಳಲಿ ಸಾವನ್ನಪ್ಪಿವೆ. ಅಷ್ಟೇ ಅಲ್ಲದೆ, ಈ ರೀತಿ ಕಲುಷಿತ ಅಥವಾ ಅಗತ್ಯವಿಲ್ಲದ ರಕ್ತವನ್ನು ಪಡೆದ ಹಲವು ಸಾಕು ನಾಯಿಗಳು ಕೂಡ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿವೆ. ಲಾಭದ ಹಸಿವಿಗಾಗಿ ಪ್ರಾಣಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಆಸ್ಪತ್ರೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಅಕ್ರಮ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಣಿ ದಯಾ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ: ಚಿಕಿತ್ಸೆ ನೆಪದಲ್ಲಿ 7 ಲಕ್ಷ ವಸೂಲಿ, ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಗಂಭೀರ ಆರೋಪ
