ಬೆಂಗಳೂರು: ನೀವು ಕಷ್ಟಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟ ಹಣ ನಿಮ್ಮ ಅರಿವಿಲ್ಲದೆಯೇ ರಾತ್ರೋರಾತ್ರಿ ಮಾಯವಾದರೆ ಎಂಥವರಿಗಾದರೂ ದಿಗಿಲಾಗುವುದು ಸಹಜ. ಇಂತಹ ಸೈಬರ್ ವಂಚನೆ ನಡೆದಾಗ ಹಳೇ ದಿನಗಳಲ್ಲಿ ಗ್ರಾಹಕರು ಬ್ಯಾಂಕುಗಳ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಹೋಗುತ್ತಿದ್ದರು. ಬ್ಯಾಂಕುಗಳು ತಪ್ಪು ನಿಮ್ಮದೇ ಎಂದು ಜಾರಿಕೊಳ್ಳುತ್ತಿದ್ದವು. ಆದರೆ ಇನ್ಮುಂದೆ ಡಿಜಿಟಲ್ ಪೇಮೆಂಟ್ ವಲಯದಲ್ಲಿ ಗ್ರಾಹಕರಿಗೆ ಸಿಂಹಸ್ವಪ್ನವಾಗಿದ್ದ ಆನ್‌ಲೈನ್ ಲೂಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಐತಿಹಾಸಿಕ ಬ್ರೇಕ್ ಹಾಕಿದೆ. ಜೂನ್ 24 ರಂದು ಹೊರಡಿಸಲಾದ ಹೊಸ ‘ಬಾಧ್ಯತಾ ತಿದ್ದುಪಡಿ ನಿಯಮಾವಳಿ’ಗಳ ಪ್ರಕಾರ, ಆನ್‌ಲೈನ್ ಬ್ಯಾಂಕಿಂಗ್ ವಂಚನೆಗೊಳಗಾದ ಸಂತ್ರಸ್ತರಿಗೆ ಆರ್‌ಬಿಐ ತನ್ನದೇ ನಿಧಿಯಿಂದ ನೇರವಾಗಿ ಧನಸಹಾಯ ಮಾಡಲಿದೆ.
ಈ ಹೊಸ ಡಿಜಿಟಲ್ ರಕ್ಷಣಾ ಕವಚವು ಬರುವ 2027ರ ಜನವರಿ 1 ರಿಂದ ಜಾರಿಗೆ ಬರಲಿದ್ದು, ಪ್ರಮುಖ ವಾಣಿಜ್ಯ ಬ್ಯಾಂಕುಗಳ ಗ್ರಾಹಕರಿಗೆ ಇದು ಅನ್ವಯಿಸಲಿದೆ (ಸಣ್ಣ ಫೈನಾನ್ಸ್ ಹಾಗೂ ಪೇಮೆಂಟ್ಸ್ ಬ್ಯಾಂಕುಗಳನ್ನು ಹೊರತುಪಡಿಸಿ). ಯುಪಿಐ, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ನಡೆಯುವ ಎಲ್ಲಾ ಡಿಜಿಟಲ್ ವ್ಯವಹಾರಗಳು ಹೊಸ ನಿಯಮದಡಿ ಬರಲಿವೆ. ಇನ್ನು ಮುಂದೆ ವಂಚನೆ ನಡೆದಾಗ ಗ್ರಾಹಕನ ನಿರ್ಲಕ್ಷ್ಯ ಇತ್ತೆಂದು ಬ್ಯಾಂಕುಗಳು ಸುಮ್ಮನೆ ಕಲ್ಪಿಸಿಕೊಳ್ಳುವಂತಿಲ್ಲ, ಅದನ್ನು ಲಿಖಿತವಾಗಿ ಸಾಬೀತುಪಡಿಸುವ ಹೊಣೆ ಬ್ಯಾಂಕುಗಳದ್ದೇ ಆಗಿರುತ್ತದೆ. ಬ್ಯಾಂಕಿನ ಸರ್ವರ್ ಅಥವಾ ಸಿಸ್ಟಂ ದೋಷದಿಂದ ಹಣ ನಷ್ಟವಾಗಿದ್ದರೆ ಗ್ರಾಹಕರು ದೂರು ನೀಡದಿದ್ದರೂ ಪೂರ್ತಿ ಹಣ ಮರುಪಾವತಿಯಾಗಲಿದೆ. ಅದೇ ರೀತಿ ಥರ್ಡ್ ಪಾರ್ಟಿ ಆ್ಯಪ್‌ಗಳ ಲೋಪದಿಂದ ಮೋಸ ನಡೆದಿದ್ದರೆ, 5 ದಿನದೊಳಗೆ ದೂರು ನೀಡಿದರೆ ಗ್ರಾಹಕರಿಗೆ ಯಾವುದೇ ನಷ್ಟವಿರುವುದಿಲ್ಲ.
ನಿಮ್ಮದೇ ತಪ್ಪಿನಿಂದ ಒಟಿಪಿ ಶೇರ್ ಆಗಿದ್ದರೂ ಸಿಗಲಿದೆ ಬಿಗ್ ರಿಲೀಫ್!
ಹೊಸ ನಿಯಮಾವಳಿಯ ಅತ್ಯಂತ ಮಹತ್ವದ ಹಾಗೂ ಆಶಾದಾಯಕ ಬದಲಾವಣೆ ಎಂದರೆ, ಗ್ರಾಹಕರು ತಮ್ಮದೇ ತಿಳಿವಳಿಕೆ ಕೊರತೆಯಿಂದ ವಂಚನೆಗೊಳಗಾಗಿದ್ದರೂ ಅವರಿಗೆ ಆರ್‌ಬಿಐ ಆಸರೆಯಾಗಲಿದೆ. ಉದಾಹರಣೆಗೆ, ನೀವು ಯಾವುದೋ ಆಸೆಗಣ್ಣಿನ ಲಿಂಕ್ ಒತ್ತಿ ಅಥವಾ ಒಟಿಪಿ (OTP) ಹಂಚಿಕೊಂಡು ಗರಿಷ್ಠ 50,000 ರೂಪಾಯಿವರೆಗೆ ಹಣ ಕಳೆದುಕೊಂಡಿದ್ದರೂ, ನಿಮ್ಮ ನಿವ್ವಳ ನಷ್ಟದ ಶೇಕಡಾ 85 ರಷ್ಟು ಹಣ ಅಥವಾ ಗರಿಷ್ಠ 25,000 ರೂಪಾಯಿಗಳನ್ನು ಮರಳಿ ಪಡೆಯಬಹುದು. ಆದರೆ ಈ ವಿಶೇಷ ಸೌಲಭ್ಯವು ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ಲಭ್ಯವಿರಲಿದ್ದು, ವಂಚನೆ ನಡೆದ 5 ದಿನಗಳ ಒಳಗಾಗಿ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ (ಅಥವಾ 1930 ಹೆಲ್ಪ್‌ಲೈನ್) ಮತ್ತು ಸಂಬಂಧಪಟ್ಟ ಬ್ಯಾಂಕಿಗೆ ಕಡ್ಡಾಯವಾಗಿ ದೂರು ನೀಡಿರಬೇಕಾಗುತ್ತದೆ.
ಒಂದು ಸರಳ ಲೆಕ್ಕಾಚಾರ: ನೀವು ಸೈಬರ್ ವಂಚನೆಯಿಂದ 40,000 ರೂ. ಕಳೆದುಕೊಂಡಿದ್ದು, ಬ್ಯಾಂಕು ಅದರಲ್ಲಿ 15,000 ರೂ.ಗಳನ್ನು ಪತ್ತೆಹಚ್ಚಿ ವಾಪಸ್ ತಂದಿದ್ದರೆ, ನಿಮ್ಮ ನಿವ್ವಳ ನಷ್ಟ 25,000 ರೂ. ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಹೊಸ ನಿಯಮದ ಪ್ರಕಾರ ಆ ನಿವ್ವಳ ನಷ್ಟದ ಶೇಕಡಾ 85 ರಷ್ಟು ಅಂದರೆ 21,250 ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನಿಮಗೆ ನೀಡಲಾಗುತ್ತದೆ.
ಈ ಪರಿಹಾರದ ಹಣ ಕೊಡುವವರು ಯಾರು?
ಈ ಹೊಸ ಕ್ರಾಂತಿಕಾರಿ ನಿಯಮದಲ್ಲಿ ರಿಸರ್ವ್ ಬ್ಯಾಂಕ್ ಕೇವಲ ಆದೇಶ ಹೊರಡಿಸದೇ, ಪರಿಹಾರದ ಬಿಲ್ ಅನ್ನು ತಾನೇ ಹಂಚಿಕೊಳ್ಳಲು ಮುಂದಾಗಿದೆ. ಸಣ್ಣ ಮಟ್ಟದ ಆನ್‌ಲೈನ್ ವಂಚನೆಗಳ ನಷ್ಟದಲ್ಲಿ ಶೇಕಡಾ 65 ರಷ್ಟು ದೊಡ್ಡ ಮೊತ್ತವನ್ನು ಸ್ವತಃ ಆರ್‌ಬಿಐ ಭರಿಸಲಿದ್ದು, ಶೇಕಡಾ 10 ರಷ್ಟು ಹಣವನ್ನು ನಿಮ್ಮ ಬ್ಯಾಂಕ್ ಮತ್ತು ಬಾಕಿ ಶೇಕಡಾ 10 ರಷ್ಟು ಮೊತ್ತವನ್ನು ವಂಚಕನ ಖಾತೆಗೆ ಹಣ ವರ್ಗಾವಣೆಯಾದ (Beneficiary) ಬ್ಯಾಂಕ್ ಭರಿಸಲಿವೆ. ಈ ವಿಶೇಷ ಪರಿಹಾರ ಹಂಚಿಕೆ ಯೋಜನೆಯು ನಿಯಮ ಜಾರಿಯಾದ ಮೊದಲ ಒಂದು ವರ್ಷದ ಅವಧಿಗೆ ಮಾತ್ರ ಚಾಲ್ತಿಯಲ್ಲಿರಲಿದೆ.
ಇದರ ಜೊತೆಗೆ ಇನ್ಮುಂದೆ ಸಾರ್ವಜನಿಕರು ದೂರು ನೀಡಲು ಬ್ಯಾಂಕುಗಳು 24 ಗಂಟೆಯೂ ಕೆಲಸ ಮಾಡುವ ಟೋಲ್-ಫ್ರೀ ಸಂಖ್ಯೆ, ಉಚಿತ ಎಸ್‌ಎಮ್‌ಎಸ್ ಮತ್ತು ಆ್ಯಪ್ ಲಿಂಕ್‌ಗಳ ವ್ಯವಸ್ಥೆ ಕಲ್ಪಿಸಬೇಕು. ವಂಚನೆಯ ದೂರು ದಾಖಲಾದ ತಕ್ಷಣ ತನಿಖೆ ಬಾಕಿ ಇರುವಾಗಲೇ ಬ್ಯಾಂಕುಗಳು ನಿಮ್ಮ ಖಾತೆಗೆ ತಾತ್ಕಾಲಿಕವಾಗಿ ಆ ಹಣವನ್ನು ಜಮೆ ಮಾಡಬೇಕು (Shadow Reversal) ಮತ್ತು ಇದಕ್ಕೆ ಯಾವುದೇ ಬಡ್ಡಿ ವಿಧಿಸುವಂತಿಲ್ಲ. ಅಲ್ಲದೆ, 500 ರೂಪಾಯಿಗಿಂತ ಹೆಚ್ಚಿನ ಎಲ್ಲಾ ಡಿಜಿಟಲ್ ಟ್ರಾನ್ಸಾಕ್ಷನ್‌ಗಳಿಗೆ ಬ್ಯಾಂಕುಗಳು ಉಚಿತ ಎಸ್‌ಎಮ್‌ಎಸ್ ಅಲರ್ಟ್‌ಗಳನ್ನು ಕಡ್ಡಾಯವಾಗಿ ಕಳುಹಿಸಬೇಕು ಮತ್ತು ಇದಕ್ಕೆ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕ ಕಡಿತಗೊಳಿಸುವಂತಿಲ್ಲ ಎಂದು ಆರ್‌ಬಿಐ ಕಟ್ಟುನಿಟ್ಟಾಗಿ ಹೇಳಿದೆ. ಒಟ್ಟಿನಲ್ಲಿ, ಡಿಜಿಟಲ್ ವಹಿವಾಟಿನಲ್ಲಿ ವಂಚನೆ ನಡೆದ ತಕ್ಷಣ ಎಷ್ಟು ವೇಗವಾಗಿ ದೂರು ನೀಡುತ್ತೀರೋ, ಅಷ್ಟು ವೇಗವಾಗಿ ನಿಮ್ಮ ಹಣ ಸುರಕ್ಷಿತವಾಗಿ ನಿಮ್ಮ ಕೈ ಸೇರಲಿದೆ.
ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ಭಾರಿ ಇಳಿಕೆ ಕಂಡ ಚಿನ್ನದ ದರ
