ಬೆಂಗಳೂರು: ನಾಗರಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಗವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು (Big News) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಒಂದೇ ಸೂರಿನಡಿ ತಂದು ಅತ್ಯಂತ ತ್ವರಿತವಾಗಿ ಬಗೆಹರಿಸಲು ಸಚಿವಾಲಯದ ಮಟ್ಟದಲ್ಲಿ ನೂತನವಾಗಿ “ಪ್ರಜಾಸೇವಾ ಇಲಾಖೆ”ಯನ್ನು ಸೃಜಿಸಲಾಗಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಗಾಯತ್ರಿ ಜಿ.ಎನ್ ಅವರು ಜೂನ್ 24 ರಂದು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಕಳೆದ ಜೂನ್ 20 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನೂತನ ಇಲಾಖೆಯನ್ನು ‘ಸಕಾಲ ಮಿಷನ್’ ವ್ಯಾಪ್ತಿಯಡಿ ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಯೋಜನೆಗೆ ಆರ್ಥಿಕ ಇಲಾಖೆಯು ಜೂನ್ 12 ರಂದೇ ಒಪ್ಪಿಗೆ ಸೂಚಿಸಿತ್ತು. ಜನರ ದೂರುಗಳನ್ನು ಕೇವಲ ಅರ್ಜಿಗಳ ರೂಪದಲ್ಲಿ ವಿಲೇವಾರಿ ಮಾಡದೆ, ಅವರ ತೃಪ್ತಿಯ ಮಟ್ಟವನ್ನು (ಫೀಡ್‌ಬ್ಯಾಕ್) ಆಧರಿಸಿ ಇಲಾಖೆಯ ದಕ್ಷತೆಯನ್ನು ಅಳೆಯಲಾಗುತ್ತದೆ. ಆಡಳಿತದಲ್ಲಿ ಅನಗತ್ಯ ವಿಳಂಬ ಮತ್ತು ಜಟಿಲ ನಿಯಮಗಳನ್ನು ಕೈಬಿಟ್ಟು, ಪ್ರಕ್ರಿಯೆಗಳನ್ನು ಸುಲಭಗೊಳಿಸುವುದು ಹಾಗೂ ಸರ್ಕಾರದ ಪ್ರಮುಖ ಯೋಜನೆಯಾದ ‘ಜನಸ್ಪಂದನ’ವನ್ನು ಇನ್ನು ಹೆಚ್ಚು ಬಲಪಡಿಸುವುದು ಈ ಇಲಾಖೆಯ ಮೂಲ ಧ್ಯೇಯವಾಗಿದೆ.
ಯಾವೆಲ್ಲಾ ವಿಭಾಗಗಳು ಇದರಲ್ಲಿ ವಿಲೀನವಾಗಿವೆ?
ಆಡಳಿತಾತ್ಮಕ ಗೊಂದಲಗಳನ್ನು ತಪ್ಪಿಸಲು ಪ್ರಸ್ತುತ ಚಾಲ್ತಿಯಲ್ಲಿದ್ದ ಮೂರು ಪ್ರಮುಖ ವಿಭಾಗಗಳನ್ನು ಅವುಗಳ ಹುದ್ದೆಗಳ ಸಮೇತ ಹೊಸ ಇಲಾಖೆಯೊಳಗೆ ವಿಲೀನಗೊಳಿಸಲಾಗಿದೆ.
- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸಿಆಸುಇ) ಆಡಳಿತ ಸುಧಾರಣಾ ವಿಭಾಗ.
- ಸಿಆಸುಇ ಇ-ಆಡಳಿತದ ಅಡಿಯಲ್ಲಿ ಬರುತ್ತಿದ್ದ ಸಾರ್ವಜನಿಕ ದೂರು ಹಾಗೂ ಕುಂದುಕೊರತೆಗಳ ವಿಭಾಗದ ‘ಎ’ ಮತ್ತು ‘ಬಿ’ ಶಾಖೆಗಳು.
- ಸಕಾಲ ಮಿಷನ್ ವಿಭಾಗ.
ಹುದ್ದೆಗಳ ಮರುಹೊಂದಾಣಿಕೆ ಹಾಗೂ ಕಚೇರಿ ನಿರ್ವಹಣೆ
ಹೊಸ ಇಲಾಖೆಯ ಸುಗಮ ಆಡಳಿತಕ್ಕಾಗಿ ವಿವಿಧ ಇಲಾಖೆಗಳಿಂದ ಒಟ್ಟು 73 ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸರ್ಕಾರದ ಕಾರ್ಯದರ್ಶಿ ಹಾಗೂ ಮಿಷನ್ ನಿರ್ದೇಶಕರ 1 ಹುದ್ದೆ, ಅಪರ ಮಿಷನ್ ನಿರ್ದೇಶಕರ (ಅಪರ ಕಾರ್ಯದರ್ಶಿ) 2 ಹುದ್ದೆಗಳು, ಸರ್ಕಾರದ ಉಪ ಕಾರ್ಯದರ್ಶಿಯ 1 ಹುದ್ದೆ ಒಳಗೊಂಡಿದೆ. ತಹಶೀಲ್ದಾರ್ ಶ್ರೇಣಿಯ ಆಡಳಿತಾಧಿಕಾರಿಗಳ 2 ಹುದ್ದೆಗಳು, ಅಧೀನ ಕಾರ್ಯದರ್ಶಿಯ 4 ಹುದ್ದೆಗಳು ಮತ್ತು ಶಾಖಾಧಿಕಾರಿಗಳ 7 ಹುದ್ದೆಗಳನ್ನು ನಿಯೋಜಿಸಲಾಗಿದೆ. ಇನ್ನು ಕಚೇರಿಯ ಆಂತರಿಕ ಕೆಲಸಗಳಿಗಾಗಿ ಹಿರಿಯ, ಸಹಾಯಕ ಹಾಗೂ ಕಿರಿಯ ಸಹಾಯಕರ 32 ಹುದ್ದೆಗಳು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಹಾಗೂ ದತ್ತಾಂಶ ನಮೂದು ಸಹಾಯಕರ 10 ಹುದ್ದೆಗಳು ಮತ್ತು ವಾಹನ ಚಾಲಕರು ಹಾಗೂ ಗ್ರೂಪ್-ಡಿ ನೌಕರರ 13 ಹುದ್ದೆಗಳು ಇರಲಿವೆ.
ಖಾಯಂ ಹುದ್ದೆಗಳ ಹೊರತಾಗಿ, ತಾಂತ್ರಿಕ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿಗಾಗಿ ಒಟ್ಟು 48 ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಉಸ್ತುವಾರಿಗೆ ತಲಾ ಒಬ್ಬೊಬ್ಬರು ರಾಜ್ಯ ನಿರ್ವಹಣಾ ಸಮಾಲೋಚಕರು, ರಾಜ್ಯ ಐಟಿ ಸಮಾಲೋಚಕರು, ಹೆಚ್ಚುವರಿ ರಾಜ್ಯ ನಿರ್ವಹಣಾ ಸಮಾಲೋಚಕರು ಮತ್ತು ಹೆಚ್ಚುವರಿ ಐಟಿ ಸಮಾಲೋಚಕರು ಇರಲಿದ್ದಾರೆ. ಇನ್ನುಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಒಟ್ಟು 32 ಜಿಲ್ಲಾ ಮಾಹಿತಿ ತಂತ್ರಜ್ಞಾನ (IT) ಸಮಾಲೋಚಕರ ಹುದ್ದೆಗಳು ಇದೇ ಇಲಾಖೆಯಡಿ ಮುಂದುವರಿಯಲಿವೆ. ಈ ಮಹತ್ವದ ಬದಲಾವಣೆಗೆ ತಕ್ಕಂತೆ ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆಗಳು) ನಿಯಮಗಳು 1977 ರ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸೂಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ದೂರುಗಳಿಗೆ ತಂತ್ರಜ್ಞಾನದ ನೆರವಿನೊಂದಿಗೆ ಅತ್ಯಂತ ವೇಗದ ಪರಿಹಾರ ಸಿಗಲಿದೆ.
