TOP NEWS

Soujanya Case: ಸೌಜನ್ಯ ಕೊಲೆ ಪ್ರಕರಣ: ಎಸ್‌ಐಟಿಗೆ ಮುಚ್ಚಿದ ಲಕೋಟೆ ನೀಡಿದ ಹೋರಾಟಗಾರ ಜಯಂತ್ ಟಿ, ತನಿಖೆಗೆ ಹೊಸ ತಿರುವು!

New Turn in Soujanya Case Activist Jayanth T Hands Over Sealed Envelope to SIT

ಮಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಅಪಾರ ಚರ್ಚೆಗೆ ಗ್ರಾಸವಾಗಿರುವ, ಕೋಟ್ಯಂತರ ಜನರ ಮನಸ್ಸಿನಲ್ಲಿ ನೋವು ಹಾಗೆಯೇ ಉಳಿದಿರುವ ಸೌಜನ್ಯ (Soujanya Case) ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಈ ಕುರಿತು ಮರುತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡವು (SIT) ತನ್ನ ತನಿಖೆಯ ವೇಗವನ್ನು ಹೆಚ್ಚಿಸಿದ್ದು, ಮಂಗಳೂರಿನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆಗೆ ಹೊಸ ದಿಕ್ಕು ತೋರಿಸುವಂತ ಘಟನೆಯೊಂದು ನಡೆದಿದ್ದು, ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು ನೇರವಾಗಿ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮುಚ್ಚಿದ ಲಕೋಟೆಯೊಂದನ್ನು ಹಸ್ತಾಂತರಿಸಿದ್ದಾರೆ.

ಮಂಗಳೂರಿನಲ್ಲಿ ಎಸ್‌ಐಟಿ ಕಚೇರಿಗೆ ಹೋದ ಸಂದರ್ಭದಲ್ಲಿ ಪ್ರಮುಖ ತನಿಖಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಆ ಸಮಯದಲ್ಲಿ ಕಚೇರಿಯಲ್ಲಿ ಲಭ್ಯವಿರಲಿಲ್ಲ. ಇದರಿಂದ ಹಿಂದೆಹರಿಯದ ಜಯಂತ್ ಟಿ ಅವರು ನೇರವಾಗಿ ಪೊಲೀಸ್ ಕಮಿಷನರ್ ಅವರ ಕಚೇರಿಗೆ ತೆರಳಿ, ಅಲ್ಲಿನ ಅಧಿಕಾರಿಗಳ ಮೂಲಕ ಆ ಮುಚ್ಚಿದ ಲಕೋಟೆಯನ್ನು ತಲುಪಿಸಿ, ಅದರ ಗಂಭೀರತೆಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಅನೇಕ ಜನರ ಹೆಸರು ಕೊಟ್ಟಿದ್ದೇನೆ ಎಂದ ಜಯಂತ್

ಲಕೋಟೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿದ ಸಾಮಾಜಿಕ ಹೋರಾಟಗಾರ ಜಯಂತ್ ಟಿ, ಈ ಪ್ರಕರಣದ ರಹಸ್ಯ ಭೇದಿಸಲು ನೆರವಾಗುವ ಕೆಲವು ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ತಾವು ನೀಡಿದ ಮುಚ್ಚಿದ ಲಕೋಟೆಯ ಒಳಗಡೆ ಒಂದಿಷ್ಟು ಅನುಮಾನಾಸ್ಪದ ವ್ಯಕ್ತಿಗಳ ಹೆಸರುಗಳ ಸ್ಪಷ್ಟ ಪಟ್ಟಿ ಇದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ವ್ಯಕ್ತಿಗಳಿಗೆ ಸೌಜನ್ಯಳ ಮೇಲೆ ನಡೆದ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಬಗ್ಗೆ ಸಂಪೂರ್ಣ ಹಾಗೂ ಸ್ಪಷ್ಟ ಮಾಹಿತಿ ಇರುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲದೆ, ಈ ಕೃತ್ಯದಲ್ಲಿ ಅವರೂ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರಬಹುದು ಎಂಬ ಬಲವಾದ ಶಂಕೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಈ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಕೂಡಲೇ ವಶಕ್ಕೆ ಪಡೆದು ಅಥವಾ ಸಾಕ್ಷಿಗಳನ್ನಾಗಿ ಇಲ್ಲವೇ ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಿ ಕೂಲಂಕಷವಾಗಿ ವಿಚಾರಣೆ ನಡೆಸಬೇಕು ಎಂದು ಜಯಂತ್ ಟಿ ಒತ್ತಾಯಿಸಿದ್ದಾರೆ. ಇಷ್ಟು ವರ್ಷಗಳ ಹಿಂದೆ ನಡೆದ ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು, ಸಿಐಡಿ ಹಾಗೂ ಸಿಬಿಐ ತಂಡಗಳು ನಡೆಸಿದ್ದರೂ ಸಹ, ಈ ಲಕೋಟೆಯಲ್ಲಿರುವ ಹೊಸ ಹೆಸರುಗಳನ್ನಾಗಲಿ ಅಥವಾ ವ್ಯಕ್ತಿಗಳನ್ನಾಗಲಿ ಹಿಂದಿನ ಯಾವುದೇ ತನಿಖಾ ಏಜೆನ್ಸಿಗಳು ವಿಚಾರಣೆಗೊಳಪಡಿಸಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಸಂಗತಿಯಾಗಿದೆ.‌

ತೀವ್ರ ಕುತೂಹಲ ಮೂಡಿಸಿದ ಕೇಸ್

ಪ್ರಸ್ತುತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿರುವ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮುಂದುವರಿದಿದೆ. ಈ ಹೊಸ ಸುಳುವುಗಳು ಮತ್ತು ವ್ಯಕ್ತಿಗಳ ಹೆಸರುಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ತನಿಖೆ ನಡೆಸಿದರೆ ಮಾತ್ರ ಸೌಜನ್ಯ ಕೊಲೆಯ ನಿಜವಾದ ಅಪರಾಧಿಗಳು ಯಾರೆಂಬ ಅಸಲಿ ಸತ್ಯ ಮುಕ್ತವಾಗಿ ಹೊರಬರಲಿದೆ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಎಸ್‌ಐಟಿ ಮರುತನಿಖೆ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ರೀತಿ ಮುಚ್ಚಿದ ಲಕೋಟೆ ಸಲ್ಲಿಕೆಯಾಗಿರುವುದು ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ನ್ಯಾಯಕ್ಕಾಗಿ ಕಾಯುತ್ತಿರುವ ಸೌಜನ್ಯ ಕುಟುಂಬ ಹಾಗೂ ಹೋರಾಟಗಾರರಿಗೆ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ವಿವಾದ: ‘ಸಿಬಿಐಗೆ ಬರೆಯಲಿ, ರಾಷ್ಟ್ರಪತಿಗಳಿಗೂ ಬರೆಯಲಿ’ – ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು!

Leave a Reply

Your email address will not be published. Required fields are marked *