TOP NEWS

ATM Scam: ಏಟಿಎಂ ಕ್ಯಾಶ್‌ ಬಾಕ್ಸ್‌ಗೆ ಟೇಪ್‌ ಅಂಟಿಸಿ ಗ್ರಾಹಕರಿಗೆ ಪಂಗನಾಮ

new ATM scam fraudsters allegedly tampered

ಪ್ರಯಾಗ್‌ರಾಜ್: ಬ್ಯಾಂಕ್ ಖಾತೆದಾರರನ್ನು ಲೂಟಿ ಮಾಡಲು ಸೈಬರ್ ಕಳ್ಳರು ಹಾಗೂ ಸ್ಥಳೀಯ ವಂಚಕರು ದಿನಕ್ಕೊಂದು ವಿನೂತನ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದೀಗ ಏಟಿಎಂ (ATM Scam) ಯಂತ್ರದ ಒಳಭಾಗವನ್ನೇ ಜಾಣ್ಮೆಯಿಂದ ಟ್ಯಾಂಪರ್ ಮಾಡಿ, ಗ್ರಾಹಕರು ಡ್ರಾ ಮಾಡುವ ಹಣವನ್ನು ಕದಿಯುವ ಸಖತ್ ಡೇಂಜರಸ್ ಸ್ಕ್ಯಾಮ್ ಒಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬ್ಯಾಂಕ್ ಆಫ್ ಬರೋಡಾದ ಏಟಿಎಂ ಕೇಂದ್ರವೊಂದರಲ್ಲಿ ವಂಚಕರು ಈ ಕೃತ್ಯ ಎಸಗಿದ್ದು, ಪ್ರಸ್ತುತ ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಏನಿದು ಘಟನೆ?

ಈ ವಂಚನೆಯ ಜಾಲ ಕೆಲಸ ಮಾಡುವುದು ಹೇಗೆಂದರೆ, ಖದೀಮರು ಮೊದಲು ಗ್ರಾಹಕರ ಸೋಗಿನಲ್ಲಿ ಏಟಿಎಂ ರೂಮ್ ಒಳಗೆ ನುಗ್ಗುತ್ತಾರೆ. ನಂತರ ಯಂತ್ರದಿಂದ ನೋಟುಗಳು ಹೊರಬರುವ ಮುಖ್ಯ ದ್ವಾರಕ್ಕೆ (Cash Tray) ಒಳಗಿನಿಂದ ಯಾರಿಗೂ ಕಾಣಿಸದಂತೆ ಗಟ್ಟಿಯಾದ ಸೆಲ್ಲೋ ಟೇಪ್ ಅಂಟಿಸಿ ಹೊರಟುಹೋಗುತ್ತಾರೆ. ಇದರ ಅರಿವಿಲ್ಲದ ಸಾಮಾನ್ಯ ಗ್ರಾಹಕರು ಎಂದಿನಂತೆ ಹಣ ಡ್ರಾ ಮಾಡಲು ಬಂದು ಕಾರ್ಡ್ ಹಾಗೂ ಪಿನ್ ನಂಬರ್ ಎಂಟ್ರಿ ಮಾಡುತ್ತಾರೆ. ಸ್ಕ್ರೀನ್ ಮೇಲೆ “ಹಣ ಪಡೆದುಕೊಳ್ಳಿ” ಎಂಬ ಮೆಸೇಜ್ ಬಂದರೂ ಸಹ, ಒಳಗಡೆ ಟೇಪ್ ಅಂಟಿಸಿರುವುದರಿಂದ ನೋಟುಗಳು ಹೊರಬರಲಾಗದೆ ಯಂತ್ರದ ಮೂತಿಯಲ್ಲೇ ಸಿಲುಕಿಕೊಳ್ಳುತ್ತವೆ. ಇತ್ತ ಗ್ರಾಹಕರ ಮೊಬೈಲ್‌ಗೆ ಹಣ ಕಡಿತವಾಗಿರುವ ಮೆಸೇಜ್ ಬಂದರೂ ಕೈಗೆ ನಗದು ಸಿಗದ ಕಾರಣ, ಸರ್ವರ್ ದೋಷದಿಂದಾಗಿ ಟ್ರಾನ್ಸಾಕ್ಷನ್ ಫೇಲ್ ಆಗಿದೆ ಎಂದು ಭಾವಿಸಿ ಸುಮ್ಮನೆ ಮನೆಗೆ ಹೊರಟುಬಿಡುತ್ತಾರೆ. ಗ್ರಾಹಕರು ಹೊರಗೆ ಹೋಗುತ್ತಿದ್ದಂತೆ ಹೊಂಚು ಹಾಕಿ ಕಾಯುತ್ತಿದ್ದ ಕಳ್ಳರು ಒಳಗೆ ಬಂದು ಟೇಪ್ ಸರಿಸಿ ಸಿಕ್ಕಿಹಾಕಿಕೊಂಡಿದ್ದ ಹಣವನ್ನು ಎಗರಿಸಿ ಪರಾರಿಯಾಗುತ್ತಿದ್ದರು.

ಆದರೆ, ಇತ್ತೀಚೆಗೆ ಪ್ರಯಾಗ್‌ರಾಜ್‌ನ ಇದೇ ಬ್ಯಾಂಕ್ ಆಫ್ ಬರೋಡಾ ಏಟಿಎಂಗೆ ಬಂದ ಜಾಗೃತ ಗ್ರಾಹಕರೊಬ್ಬರು ಈ ವಂಚನೆಯ ಜಾಲವನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅವರು ಹಣ ವಿತ್‌ಡ್ರಾ ಮಾಡಿದಾಗ ನಗದು ಹೊರಬರಲಿಲ್ಲ. ಖಾತೆಯಿಂದ ಹಣ ಕಟ್‌ ಆಗಿದ್ದರಿಂದ ಅನುಮಾನಗೊಂಡ ಅವರು, ಹಣ ಬರುವ ಕೌಂಟರ್‌ನ ಪ್ಲಾಸ್ಟಿಕ್ ಡಬ್ಬವನ್ನು ಕೊಂಚ ಬಲವಾಗಿ ಎಳೆದು ಪರೀಕ್ಷಿಸಿದ್ದಾರೆ. ಆಗ ಇಡೀ ಬಾಕ್ಸ್ ಓಪನ್ ಆಗಿದ್ದು, ಅದರ ಒಳಗಡೆ ಅವರ ಅಸಲಿ ನೋಟುಗಳು ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಒಳಗಿನಿಂದ ಸೆಲ್ಲೋ ಟೇಪ್ ಹಾಕಿ ಹಣ ಬರದಂತೆ ಬ್ಲಾಕ್ ಮಾಡಿರುವುದೂ ಕಣ್ಣಿಗೆ ಬಿದ್ದಿದೆ. ಈ ಇಡೀ ದೃಶ್ಯವನ್ನು ಅವರು ಮೊಬೈಲ್‌ನಲ್ಲಿ ಶೂಟ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಬಾಧಿತ ಗ್ರಾಹಕರು ಈ ಬಗ್ಗೆ ತಕ್ಷಣವೇ ಬ್ಯಾಂಕ್ ಹಾಗೂ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಈ ಘಟನೆಯು ದೇಶಾದ್ಯಂತ ಇರುವ ಏಟಿಎಂ ಕೇಂದ್ರಗಳ ಭದ್ರತೆ ಹಾಗೂ ಬ್ಯಾಂಕುಗಳ ನಿರಂತರ ಪರಿಶೀಲನಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳ್ಳರ ಈ ಹೊಸ ಐಡಿಯಾದಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಬ್ಯಾಂಕ್ ಅಧಿಕಾರಿಗಳು ಇಂತಹ ವಂಚನೆ ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾಗಿ ಇನ್ಮುಂದೆ ನೀವು ಯಾವುದೇ ಏಟಿಎಂಗೆ ಹೋಗಿ ಹಣ ಡ್ರಾ ಮಾಡುವಾಗ, ಕ್ಯಾಶ್ ಬರುವ ಜಾಗವು ಸರಿಯಾಗಿದೆಯೇ ಅಥವಾ ಅಲ್ಲಿ ಏನಾದರೂ ಪ್ಲಾಸ್ಟಿಕ್, ಟೇಪ್ ಅಂಟಿಸಲಾಗಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದು ನಿಮ್ಮ ಹಣದ ಸುರಕ್ಷತೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಒಂದೇ ಟ್ಯಾಂಕ್‌ನಲ್ಲಿ 27 ಹಾವಿನ ಮರಿಗಳು!

Leave a Reply

Your email address will not be published. Required fields are marked *