ರಾಜಸ್ಥಾನ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಈಗ ಯಾವುದೋ ಕ್ರೈಂ ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆ. ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಈ ಜಾಲದ ತನಿಖೆ ಈಗ ದೌಸಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿದ್ದು, ಅಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಗತಿ ಬಿವಾಲ್ ಎಂಬಾಕೆ ದಿಢೀರ್ ನಾಪತ್ತೆಯಾಗಿರುವುದು ಹೊಸ ಸಂಚಲನ ಮೂಡಿಸಿದೆ. ಈಕೆಯ ತಂದೆ ಮಾಂಗಿಲಾಲ್ ಬಿವಾಲ್ ಮತ್ತು ಚಿಕ್ಕಪ್ಪ ದಿನೇಶ್ ಬಿವಾಲ್ ಅವರನ್ನು ಪತ್ರಿಕೆ ಸೋರಿಕೆ ಹಗರಣದಲ್ಲಿ ಸಿಬಿಐ ಈಗಾಗಲೇ ಬಂಧಿಸಿದೆ. ಈ ಬಂಧನವಾದ ಬೆನ್ನಲ್ಲೇ ಪ್ರಗತಿ ಕಾಲೇಜಿಗೆ ರಜೆ ಅರ್ಜಿ ನೀಡಿ ಕಣ್ಮರೆಯಾಗಿದ್ದು, ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ.
ದಾಖಲೆ ನೋಡಿ ಬೆಚ್ಚಿ ಬಿದ್ದ ಸಿಬಿಐ
ಬಿವಾಲ್ ಕುಟುಂಬದ ಸದಸ್ಯರ ಶೈಕ್ಷಣಿಕ ದಾಖಲೆಗಳನ್ನು ಗಮನಿಸಿದಾಗ ಸಿಬಿಐ ಬೆಚ್ಚಿಬಿದ್ದಿದೆ. ಒಂದೇ ಕುಟುಂಬದ ಅರ್ಧ ಡಜನ್ಗೂ ಹೆಚ್ಚು ಸದಸ್ಯರು ದೇಶದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪ್ರಗತಿ ದೌಸಾದಲ್ಲಿ ಓದುತ್ತಿದ್ದರೆ, ಆಕೆಯ ಸಹೋದರ ವಿಕಾಸ್ ಸವಾಯಿ ಮಾಧೋಪುರದಲ್ಲಿ, ಸೋದರ ಸಂಬಂಧಿಗಳಾದ ಸಾನಿಯಾ ಜೈಪುರದಲ್ಲಿ, ಪಾಲಕ್ ಮುಂಬೈನಲ್ಲಿ ಹಾಗೂ ಗುಂಜನ್ ಬನಾರಸ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಇಷ್ಟು ಮಂದಿ ಸೀಟು ಪಡೆದಿರುವುದು ಕೇವಲ ಅವರ ಪ್ರತಿಭೆಯೋ ಅಥವಾ ತಂದೆ-ಚಿಕ್ಕಪ್ಪ ನಡೆಸುತ್ತಿದ್ದ ಪತ್ರಿಕೆ ಸೋರಿಕೆ ದಂಧೆಯ ಫಲವೋ ಎಂಬುದು ಈಗ ತನಿಖೆಯ ಮುಖ್ಯ ವಿಷಯವಾಗಿದೆ. ಇದೇ ಕಾರಣಕ್ಕೆ ಇಡೀ ಕುಟುಂಬದ ಶೈಕ್ಷಣಿಕ ಹಿನ್ನೆಲೆಯನ್ನು ಸಿಬಿಐ ಜಾಲಾಡುತ್ತಿದೆ.
ಆರೋಪಿಗಳ ಮನೆಯಲ್ಲಿ ಸಿಬಿಐ ಶೋಧ
ಇತ್ತೀಚೆಗೆ ಜೈಪುರದ ಜಮವಾರಮಗಢದಲ್ಲಿರುವ ಬಿವಾಲ್ ಸಹೋದರರ ಮನೆ ಮತ್ತು ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದ ಸಿಬಿಐಗೆ ಅಚ್ಚರಿ ಕಾದಿತ್ತು. ದಾಳಿಯ ವೇಳೆ ಮನೆಯಲ್ಲಿ ಯಾವುದೇ ಪುರುಷ ಸದಸ್ಯರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳೆಯರನ್ನು ಅಧಿಕಾರಿಗಳು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದಾರೆ. ಶೋಧದ ವೇಳೆ ಕೆಲವು ಐಷಾರಾಮಿ ವಾಹನಗಳು ಮತ್ತು ಹಗರಣಕ್ಕೆ ಸಂಬಂಧಿಸಿದ ಎನ್ನಲಾದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಈ ವರ್ಷ ನೀಟ್ ಬರೆದಿರುವ ದಿನೇಶ್ ಬಿವಾಲ್ ಮಗ ರಿಷಿ ಕೂಡ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
ಈ ಹಗರಣದ ವ್ಯಾಪ್ತಿ ಈಗ ರಾಜಸ್ಥಾನವನ್ನೂ ಮೀರಿ ಮಹಾರಾಷ್ಟ್ರದವರೆಗೂ ಹಬ್ಬಿದೆ. ಅತ್ಯಂತ ಪೈಪೋಟಿಯಿಂದ ಕೂಡಿದ ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮ್ಯಾನಿಪುಲೇಟ್ ಮಾಡಿರುವ ಬೃಹತ್ ಶಿಕ್ಷಣ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಎಂಬಿಬಿಎಸ್ ವಿದ್ಯಾರ್ಥಿನಿಯ ನಾಪತ್ತೆಯೊಂದಿಗೆ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ರಾಜಸ್ಥಾನದ ಇತಿಹಾಸದಲ್ಲೇ ಅತಿದೊಡ್ಡ ಶಿಕ್ಷಣ ಹಗರಣವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ತನಿಖೆ ತೀವ್ರಗೊಂಡಂತೆ ಇನ್ನೂ ಅನೇಕ ಪ್ರಭಾವಿಗಳ ಮತ್ತು ವಿದ್ಯಾರ್ಥಿಗಳ ಪಾತ್ರ ಹೊರಬರುವ ನಿರೀಕ್ಷೆಯಿದೆ.
ನೀಟ್ ಹಗರಣ, ರಾಜಸ್ಥಾನದಲ್ಲಿ ಬಿಜೆಪಿ ನಾಯಕನ ಬಂಧನ
ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್ (NEET-UG) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ರಾಜಸ್ಥಾನದ ಜಮ್ವಾ ರಾಮಗಢದ ಬಿಜೆಪಿ ಕಾರ್ಯಕರ್ತ ದಿನೇಶ್ ಬಿವಾಲ್ ಮತ್ತು ಆತನ ಸಹೋದರ ಮಾಂಗಿಲಾಲ್ ಬಿವಾಲ್ ಎಂಬುವವರನ್ನು ಸಿಬಿಐ ವಶಕ್ಕೆ ಪಡೆದಿದ್ದು, ಈ ಬೆಳವಣಿಗೆಯು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು (SOG) ಮೊದಲು ಇವರನ್ನು ವಶಕ್ಕೆ ಪಡೆದಿತ್ತು, ನಂತರ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿರುವ ಸಿಬಿಐಗೆ ಇವರನ್ನು ಹಸ್ತಾಂತರಿಸಲಾಗಿದೆ. ತನಿಖಾ ಸಂಸ್ಥೆಗಳ ಮಾಹಿತಿ ಪ್ರಕಾರ, ಈ ಸಹೋದರರು ಸಿಕಾರ್ ಮೂಲದ ಕನ್ಸಲ್ಟೆನ್ಸಿ ನಡೆಸುವ ರಾಕೇಶ್ ಮಾಂಡ್ವಾರಿಯಾ ಎಂಬುವವನ ಮೂಲಕ ಸುಮಾರು 30 ಲಕ್ಷ ರೂಪಾಯಿ ನೀಡಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದರು ಎನ್ನಲಾಗಿದೆ. ಆರಂಭದಲ್ಲಿ ತಮ್ಮ ಕುಟುಂಬದ ಮಕ್ಕಳಿಗಾಗಿಯೇ ಈ ಪತ್ರಿಕೆಯನ್ನು ಪಡೆದಿದ್ದ ಇವರು, ನಂತರ ಆ ಹಣವನ್ನು ವಾಪಸ್ ಪಡೆಯುವ ಹಾಗೂ ಲಾಭ ಮಾಡುವ ಉದ್ದೇಶದಿಂದ ಇತರ ವಿದ್ಯಾರ್ಥಿಗಳಿಗೂ ಪತ್ರಿಕೆಯನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೇ ಕುಟುಂಬದ ಇತರ ಸದಸ್ಯರು ಈಗಾಗಲೇ ವೈದ್ಯಕೀಯ ಸೀಟು ಪಡೆದಿರುವ ಬಗ್ಗೆಯೂ ಸಿಬಿಐ ಈಗ ಹದ್ದಿನ ಕಣ್ಣಿಟ್ಟಿದೆ.
ದಿನೇಶ್ ಬಿವಾಲ್ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಜಮ್ವಾ ರಾಮಗಢ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿಯ ಸಂದರ್ಭದಲ್ಲೂ ಅವರು ಮುಂಚೂಣಿಯಲ್ಲಿದ್ದರು ಎನ್ನಲಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್, ರಾಜಸ್ಥಾನದ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರೊಂದಿಗೆ ದಿನೇಶ್ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಪರೀಕ್ಷಾ ಅಕ್ರಮದ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ.
ಈ ಜಾಲವು ಕೇವಲ ರಾಜಸ್ಥಾನಕ್ಕೆ ಸೀಮಿತವಾಗದೆ ಹಲವು ರಾಜ್ಯಗಳಿಗೆ ಹಬ್ಬಿದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪರೀಕ್ಷೆ ನಡೆಯುವ ಒಂದು ತಿಂಗಳ ಮುಂಚೆಯೇ ಈ ತಂಡಕ್ಕೆ ಪ್ರಶ್ನೆ ಪತ್ರಿಕೆಯ ಮಾಹಿತಿ ಇತ್ತು ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ. ಈ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ 2026ರ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಮುಂದಿನ ದಿನಗಳಲ್ಲಿ ಈ ಹಗರಣದಲ್ಲಿ ಇನ್ನೂ ಹಲವು ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ.
