TOP NEWS

SIR: ಮತದಾರರ ಪಟ್ಟಿ ಅಪ್‌ಡೇಟ್: ಜೂನ್ 30ರಿಂದ ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು; ಅಕ್ಟೋಬರ್‌ನಲ್ಲಿ ಫೈನಲ್ ಲಿಸ್ಟ್!

karnataka election commissioner statement about SIR

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಚುನಾವಣಾ ಆಯೋಗ ಸಜ್ಜಾಗಿದೆ. ಈ ಬಾರಿ ಹೈಟೆಕ್ ಸ್ಪರ್ಶದೊಂದಿಗೆ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಅಕ್ಟೋಬರ್ 7ರಂದು (SIR) ಪರಿಷ್ಕೃತ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಈ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿರುತ್ತಾರೆ.

ಪರಿಷ್ಕರಣೆಯ ಮಹತ್ವದ ಹಂತಗಳು: ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಜೂನ್ 20ರಿಂದಲೇ ಚಾಲನೆ ಸಿಗಲಿದ್ದು, ಮೊದಲ ಹಂತದಲ್ಲಿ ಸಿಬ್ಬಂದಿಗೆ ತರಬೇತಿ ಹಾಗೂ ಫಾರಂಗಳ ಮುದ್ರಣ ನಡೆಯಲಿದೆ. ಅಸಲಿ ಕೆಲಸ ಜೂನ್ 30ರಿಂದ ಆರಂಭವಾಗಲಿದ್ದು, ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಪ್ರತಿಯೊಬ್ಬರ ಮನೆಗೂ ಭೇಟಿ ನೀಡಲಿದ್ದಾರೆ. ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಕ್ಯೂಆರ್ ಕೋಡ್ ವಿಶೇಷತೆ ಹಾಗೂ ಸಾರ್ವಜನಿಕರ ಜವಾಬ್ದಾರಿ: ಈ ಬಾರಿಯ ವಿಶೇಷವೆಂದರೆ, ಗಣತಿ ಅರ್ಜಿಯಲ್ಲಿ ಪ್ರತಿ ಮತದಾರರಿಗೂ ವೈಯಕ್ತಿಕ ಕ್ಯೂಆರ್ ಕೋಡ್ ನೀಡಲಾಗುತ್ತಿದೆ. ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಎರಡು ಅರ್ಜಿಗಳನ್ನು (ಸೆಟ್) ನೀಡುತ್ತಾರೆ. ಅದರಲ್ಲಿ ಒಂದನ್ನು ನೀವು ಭರ್ತಿ ಮಾಡಿ ಅವರಿಗೆ ವಾಪಸ್ ನೀಡಬೇಕು, ಇನ್ನೊಂದನ್ನು ನಿಮ್ಮ ಮುಂದಿನ ದಾಖಲೆಗಾಗಿ ಸುರಕ್ಷಿತವಾಗಿಟ್ಟುಕೊಳ್ಳಬೇಕು. ವಿಶೇಷವಾಗಿ 2002ರ ಪಟ್ಟಿಯಲ್ಲಿರುವವರ ವಿವರಗಳನ್ನು ಈ ಬಾರಿ ಕಡ್ಡಾಯವಾಗಿ ಮರುಪರಿಶೀಲನೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

ಮ್ಯಾಪಿಂಗ್‌ನಲ್ಲಿ ಕರ್ನಾಟಕ ಮುಂದು: ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ರಾಜ್ಯವು ಶೇ. 86ರಷ್ಟು ಪ್ರಗತಿ ಸಾಧಿಸಿದೆ. ಕೊಡಗು ಜಿಲ್ಲೆ ಶೇ. 96ರಷ್ಟು ಸಾಧನೆ ಮಾಡಿದ್ದರೆ, ಚಿತ್ತಾಪುರ ಕ್ಷೇತ್ರವು ಶೇ. 99ರಷ್ಟು ಕೆಲಸ ಮುಗಿಸಿ ದಾಖಲೆ ಬರೆದಿದೆ. ಈ ಕಾರ್ಯದ ಪ್ರಗತಿ ಪರಿಶೀಲಿಸಲು ಇಂದು ಸಂಜೆ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಪಾರದರ್ಶಕತೆಗೆ ಹೆಚ್ಚಿನ ಒತ್ತು: ಒಟ್ಟು 25,284 ಬಿಎಲ್‌ಎಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ‘ಮತದಾರರ ಸಹಾಯ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ. ರಾಜಕೀಯ ಪಕ್ಷಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುವಂತೆ ಆಯೋಗ ಕ್ರಮ ಕೈಗೊಂಡಿದೆ.

ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬ? ‘SIR’ ಕಾರ್ಯದ ನಡುವೆ ಸಿಬ್ಬಂದಿ ಕೊರತೆಯ ಆತಂಕ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣಾ ಕಣ ಸಜ್ಜಾಗುವುದು ಮತ್ತಷ್ಟು ವಿಳಂಬವಾಗುವ ಮುನ್ಸೂಚನೆ ಸಿಕ್ಕಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಮುಂದಿಟ್ಟುಕೊಂಡು, ಚುನಾವಣೆಯನ್ನು ಮುಂದೂಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಆಡಳಿತಾತ್ಮಕ ಅಡಚಣೆಗಳ ನೆಪ:
ಸದ್ಯ ರಾಜ್ಯಾದ್ಯಂತ ಮತದಾರರ ಪಟ್ಟಿ ಅಪ್‌ಡೇಟ್ ಮಾಡುವ ಕೆಲಸ ಆರಂಭ ಆಗುತ್ತದೆ, ಬಹುತೇಕ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ಮಾನವ ಸಂಪನ್ಮೂಲದ ಕೊರತೆ ಎದುರಾಗಲಿದೆ ಎಂಬುದು ಸರ್ಕಾರದ ವಾದ. ಈ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಕ್ರಿಯೆಯನ್ನು ಮುಂದಕ್ಕೆ ತಳ್ಳುವುದು ಸರ್ಕಾರದ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ: ಮತದಾರರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ಜಿಬಿಎ ವ್ಯಾಪ್ತಿಯ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಚುನಾವಣಾ ಆಯೋಗ ಮತ್ತು ಸರ್ಕಾರ ನಿರ್ಧರಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳ ಲಭ್ಯತೆ ಇಲ್ಲದಿರುವುದರಿಂದ ಹೆಚ್ಚಿನ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲು ತಯಾರಿ ನಡೆದಿದೆ. ಈ ಹೊಸ ಬೆಳವಣಿಗೆಯಿಂದಾಗಿ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಈಗ ‘SIR’ ಕರಿನೆರಳು ಬೀರಿದಂತಾಗಿದೆ.

ದೇಶದ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ: ಕರ್ನಾಟಕದ 5.5 ಕೋಟಿ ಮತದಾರರ ವಿವರ ಮರುಪರಿಶೀಲನೆ

ಭಾರತೀಯ ಚುನಾವಣಾ ಆಯೋಗವು ದೇಶದ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಮುಂದಾಗಿದ್ದು, 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ’ (SIR Phase-III) ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಸುಮಾರು 36.73 ಕೋಟಿ ಮತದಾರರ ವಿವರಗಳನ್ನು ಮರುಪರಿಶೀಲಿಸುವ ಬೃಹತ್ ಗುರಿಯನ್ನು ಆಯೋಗ ಹಾಕಿಕೊಂಡಿದೆ.

ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು: ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ. ಇವರಿಗೆ ಸಹಕರಿಸಲು ರಾಜಕೀಯ ಪಕ್ಷಗಳ ವತಿಯಿಂದ 3.42 ಲಕ್ಷ ಏಜೆಂಟ್‌ಗಳು ಕೂಡ ಸಾಥ್ ನೀಡಲಿದ್ದಾರೆ. ಈ ಪ್ರಕ್ರಿಯೆಯ ಮೂಲಕ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ಒಂದೇ ಹೆಸರಿನ ನಕಲಿ ಗುರುತಿನ ಚೀಟಿಗಳನ್ನು ರದ್ದುಪಡಿಸುವುದು ಮತ್ತು ಹೊಸದಾಗಿ ಮತದಾನದ ಹಕ್ಕು ಪಡೆದ ಯುವಕರನ್ನು ಪಟ್ಟಿಗೆ ಸೇರಿಸುವ ಕೆಲಸ ನಡೆಯಲಿದೆ.

ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳ ಅಂಕಿಅಂಶ: ಈ ಅಭಿಯಾನದ ವ್ಯಾಪ್ತಿಗೆ ಬರುವ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಅಂದರೆ 9.86 ಕೋಟಿ ಮತದಾರರನ್ನು ಹೊಂದಿದೆ. ಕರ್ನಾಟಕದಲ್ಲಿ 5.55 ಕೋಟಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದರೆ, ಆಂಧ್ರಪ್ರದೇಶದಲ್ಲಿ 4.16 ಕೋಟಿ ಹಾಗೂ ತೆಲಂಗಾಣದಲ್ಲಿ 3.39 ಕೋಟಿ ಮತದಾರರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.48 ಕೋಟಿ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಸಾರಿಗೆ ನೌಕರರ ವೇತನ ಸಮರ: ಮೇ 20ರಿಂದ ಬಸ್‌ ಸಂಚಾರ ಸ್ತಬ್ಧ; ಮುಷ್ಕರ ಹತ್ತಿಕ್ಕಲು ಸರ್ಕಾರದ ‘ಆಪರೇಷನ್ ಖಾಸಗಿ’ ಸಿದ್ಧ!

Leave a Reply

Your email address will not be published. Required fields are marked *