NEET-UG: ಏಳು ದಿನಗಳಲ್ಲಿ ನೀಟ್‌ ಮರುಪರೀಕ್ಷೆ ದಿನಾಂಕ ನಿಗದಿ

NEET UG Exam will be rescheduled with in 10 days

ನವದೆಹಲಿ: ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಲ್ಲಿ ತಲ್ಲಣ ಮೂಡಿಸಿದ್ದ ನೀಟ್ (NEET-UG 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತವಾಗಿ ರದ್ದುಗೊಳಿಸಿದ್ದು, ಮರು ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ಏಳರಿಂದ ಹತ್ತು ದಿನಗಳ ಒಳಗಾಗಿ ಮರು ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಅನಾಮಧೇಯ ಕೊಟ್ಟಿದ್ದ ಆ ಸುಳಿವು

ಈ ಬೃಹತ್ ಹಗರಣವು ಬೆಳಕಿಗೆ ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿರುವ ಅಭಿಷೇಕ್ ಸಿಂಗ್ ಅವರು, ಮೇ 7ರ ರಾತ್ರಿ ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ಸುಳಿವಿನಿಂದ ತನಿಖೆ ಆರಂಭವಾಯಿತು ಎಂದು ತಿಳಿಸಿದ್ದಾರೆ. ಪರೀಕ್ಷೆ ನಡೆಯುವ ಮುನ್ನವೇ ವಾಟ್ಸಾಪ್ ಮೂಲಕ ರವಾನೆಯಾಗಿದ್ದ ಪಿಡಿಎಫ್ ದಾಖಲೆಯಲ್ಲಿದ್ದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಯೊಂದಿಗೆ ಸಂಪೂರ್ಣವಾಗಿ ತಾಳೆಯಾಗಿದ್ದವು. ಈ ಗಂಭೀರ ಲೋಪದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಪ್ರತಿಯೊಬ್ಬ ಆರೋಪಿಯನ್ನು ಪತ್ತೆಹಚ್ಚಿ ಜೈಲಿಗಟ್ಟಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

7 ದಿನಗಳ ಒಳಗೆ ಮರುಪರೀಕ್ಷೆ ದಿನಾಂಕ ನಿಗದಿ

ಪರೀಕ್ಷೆ ರದ್ದತಿಯಿಂದ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಆತಂಕ ಮೂಡಿದ್ದರೂ, ಅಕ್ರಮದ ನಡುವೆ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಮರು ಪರೀಕ್ಷೆ ನಡೆಸಲಾಗುತ್ತಿದೆ. ಮರು ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಅಥವಾ ಭದ್ರತಾ ಲೋಪಗಳು ಉಂಟಾಗದಂತೆ ಎನ್‌ಟಿಎ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದೆ. ಪ್ರವೇಶ ಪತ್ರಗಳು ಮತ್ತು ಪರೀಕ್ಷಾ ಕೇಂದ್ರಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ಮುಂದಿನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಸದ್ಯಕ್ಕೆ ಪರೀಕ್ಷಾ ವೇಳಾಪಟ್ಟಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಅಭ್ಯಾಸವನ್ನು ಮುಂದುವರಿಸಬೇಕು ಎಂದು ಎನ್‌ಟಿಎ ಮನವಿ ಮಾಡಿದೆ. ಅಧಿಕೃತ ಮಾಹಿತಿಗಾಗಿ ಸಂಸ್ಥೆಯ ಜಾಲತಾಣವನ್ನು ನಿಯಮಿತವಾಗಿ ಗಮನಿಸುತ್ತಿರಲು ಸೂಚಿಸಲಾಗಿದೆ. ಮುಂದಿನ ಒಂದು ವಾರದ ಅವಧಿಯು ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಲಿದ್ದು, ನ್ಯಾಯಯುತವಾಗಿ ಪರೀಕ್ಷೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮರುಪರೀಕ್ಷೆಗೆ ಶುಲ್ಕ ಕಟ್ಟಬೇಕಾ? ವಿದ್ಯಾರ್ಥಿಗಳ ಗೊಂದಲಕ್ಕೆ ಇಲ್ಲಿದೆ ಉತ್ತರ

Leave a Reply

Your email address will not be published. Required fields are marked *