TOP NEWS

Chamundi Hills: ಚಾಮುಂಡಿಬೆಟ್ಟದಲ್ಲಿ ಇನ್ಮುಂದೆ ಸಾಮಾನ್ಯ ಭಕ್ತರಿಗೇ ಫಸ್ಟ್ ಪ್ರಿಫರೆನ್ಸ್! ₹300 ವಿಶೇಷ ಟಿಕೆಟ್‌ ರದ್ದು

Mysuru Chamundi hills yathindra Siddaramaiah gives information about ashada days

ಮೈಸೂರು: ಸಾಂಸ್ಕೃತಿಕ ನಗರಿಯ ಐತಿಹಾಸಿಕ ಚಾಮುಂಡಿಬೆಟ್ಟದಲ್ಲಿ (Chamundi Hills) ಮುಂಬರುವ ಜುಲೈ 17 ರಿಂದ ಅತ್ಯಂತ ಸಡಗರದ ಆಷಾಢ ಶುಕ್ರವಾರಗಳ ವಿಶೇಷ ಪೂಜಾ ಮಹೋತ್ಸವಗಳು ಆರಂಭಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾದರು. ಬಳಿಕ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಈ ಬಾರಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಸುಗಮ ದರ್ಶನ ಕಲ್ಪಿಸಲು ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದರು. ಕಳೆದ ಬಾರಿ ಗಣ್ಯರ (ವಿಐಪಿ) ಭರಾಟೆಯಿಂದ ಜನಸಾಮಾನ್ಯರು ಅನುಭವಿಸಿದ್ದ ಸಂಕಷ್ಟವನ್ನು ತಪ್ಪಿಸಲು ಈ ಬಾರಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

₹300 ಟಿಕೆಟ್ ಬಂದ್, ಶಿಫಾರಸು ಪತ್ರಗಳಿಗೆ ನೋ ಎಂಟ್ರಿ! ಸಾಮಾನ್ಯ ಭಕ್ತರು ಸರತಿಯಲ್ಲಿ ಗಂಟೆಗಟ್ಟಲೆ ಕಾಯುವುದನ್ನು ನಿಯಂತ್ರಿಸಲು ಹಾಗೂ ಕ್ಯೂ ವ್ಯವಸ್ಥೆಯನ್ನು ಸುಲಭಗೊಳಿಸಲು ₹300 ಮುಖಬೆಲೆಯ ವಿಶೇಷ ದರ್ಶನ ಟಿಕೆಟ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಕೇವಲ ₹2,000 ಮೌಲ್ಯದ ನೇರ ದರ್ಶನ ಟಿಕೆಟ್‌ಗಳು ಮಾತ್ರ ಚಾಲ್ತಿಯಲ್ಲಿರಲಿವೆ. ಇನ್ನು ರಾಜಕಾರಣಿಗಳು, ಅಧಿಕಾರಿಗಳ ಬೆಂಬಲಿಗರು ಅಥವಾ ಪ್ರಭಾವಿಗಳ ಹೆಸರೇಳಿಕೊಂಡು ಬರುವವರಿಗೆ ವಿಶೇಷ ಆದ್ಯತೆ ಸಿಗುವುದಿಲ್ಲ. ಯಾವುದೇ ರೀತಿಯ ಪ್ರಭಾವಿ ವ್ಯಕ್ತಿಗಳ ಶಿಫಾರಸು ಪತ್ರಗಳನ್ನು ತಂದರೂ ಪ್ರತ್ಯೇಕ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಸಚಿವರು ಕಡಾಖಂಡಿತವಾಗಿ ಹೇಳಿದ್ದಾರೆ. ಇದರೊಂದಿಗೆ ಪರಿಸರ ಮತ್ತು ಧಾರ್ಮಿಕ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಬೆಟ್ಟದ ಆವರಣಕ್ಕೆ ಪ್ಲಾಸ್ಟಿಕ್ ವಸ್ತುಗಳು ಹಾಗೂ ಚಪ್ಪಲಿಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಗಣ್ಯರ ದರ್ಶನಕ್ಕೆ ಮುಂಜಾನೆಯಷ್ಟೇ ಗಡುವು ವಿಐಪಿಗಳ ಓಡಾಟದಿಂದಾಗಿ ಜನಸಾಮಾನ್ಯರ ದರ್ಶನಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಗಣ್ಯರ ಭೇಟಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದೆ. ಆಷಾಢ ಶುಕ್ರವಾರಗಳಂದು ಕೇವಲ ಮುಂಜಾನೆ 5:30 ರಿಂದ ಬೆಳಗ್ಗೆ 9:30 ರವರೆಗೆ ಮಾತ್ರ ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಅವಧಿಯಲ್ಲೂ ಕೇವಲ ಅಧಿಕೃತ ಶಿಷ್ಟಾಚಾರದ (ಪ್ರೋಟೋಕಾಲ್) ವ್ಯಾಪ್ತಿಗೆ ಬರುವ ಗಣ್ಯರನ್ನು ಮಾತ್ರ ಬಿಡಲಾಗುತ್ತದೆ. ಆ ಸಮಯ ಮುಗಿಯುತ್ತಿದ್ದಂತೆಯೇ ಇಡೀ ದಿನ ಸಂಪೂರ್ಣವಾಗಿ ಸಾಮಾನ್ಯ ಭಕ್ತರ ದರ್ಶನಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ.

ಖಾಸಗಿ ವಾಹನ ನಿರ್ಬಂಧ, ಉಚಿತ ಸಾರಿಗೆ ಸೌಲಭ್ಯ ಆಷಾಢ ಮಾಸದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಯಾವುದೇ ರೀತಿಯ ಖಾಸಗಿ ವಾಹನಗಳ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತ ಮಹಲ್ ಅರಮನೆ ಮೈದಾನದ ಬಳಿ ಸಿದ್ಧಪಡಿಸಲಾಗಿರುವ ವಿಶಾಲವಾದ ಪಾರ್ಕಿಂಗ್ ಜಾಗದಲ್ಲೇ ನಿಲ್ಲಿಸಬೇಕಾಗುತ್ತದೆ. ಅಲ್ಲಿಂದ ಭಕ್ತರನ್ನು ಬೆಟ್ಟಕ್ಕೆ ಕರೆದೊಯ್ಯಲು ಮತ್ತು ವಾಪಸ್ ಕರೆತರಲು ಕೆಎಸ್‌ಆರ್‌ಟಿಸಿ ವತಿಯಿಂದ ಉಚಿತ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಈ ಮಹತ್ವದ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಭದ್ರತೆ ಹಾಗೂ ಮೂಲಸೌಕರ್ಯಗಳ ಕುರಿತು ಅಂತಿಮ ಪ್ಲಾನ್ ರೂಪಿಸಿದ್ದಾರೆ.

ಇದನ್ನೂ ಓದಿ: ಶೇ. 15 ರಷ್ಟು ಫುಟ್‌ಪಾತ್ ತೆರವಿಗೆ ನಿರ್ಧಾರ: ಸಚಿವ ಕೃಷ್ಣ ಭೈರೇಗೌಡ

Leave a Reply

Your email address will not be published. Required fields are marked *