ಚೆನ್ನೈ: ಭಾರಿ ನಿರೀಕ್ಷೆ ಮೂಡಿಸಿದ್ದ ಸೂರ್ಯ ಮತ್ತು ತ್ರಿಶಾ ಅಭಿನಯದ ತಮಿಳು ಥ್ರಿಲ್ಲರ್ ಸಿನಿಮಾ ‘ಕರುಪ್ಪು’ ಇಂದು (ಮೇ 14) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ನೋಡಲು ಬೆಳ್ಳಂಬೆಳಿಗ್ಗೆ ಚಿತ್ರಮಂದಿರಗಳ (Kollywood) ಮುಂದೆ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆ ಎದುರಾಗಿದೆ. ಚಿತ್ರದ ಮೊದಲ ದಿನದ ಬೆಳಗಿನ ಪ್ರದರ್ಶನಗಳನ್ನು ಯಾವುದೇ ಸ್ಪಷ್ಟ ಕಾರಣ ನೀಡದೆ ಚಿತ್ರತಂಡ ರದ್ದುಗೊಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿ ನೀಡಿದ ನಿರ್ಮಾಪಕರು
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಸ್.ಆರ್. ಪ್ರಭು ಅವರು ಇಂದು ನಸುಕಿನ ಜಾವ 1 ಗಂಟೆಯ ಸುಮಾರಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಅನಿರೀಕ್ಷಿತ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಬೆಳಿಗ್ಗೆ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿ ಕ್ಷಮೆಯಾಚಿಸಿದ್ದಾರೆ. ಆದರೆ ಈ ಅಸ್ಪಷ್ಟ ಹೇಳಿಕೆಯಿಂದ ತೃಪ್ತರಾಗದ ಸೂರ್ಯ ಅಭಿಮಾನಿಗಳು, ನಿರ್ಮಾಪಕರ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ದೂರದ ಊರುಗಳಿಂದ ಮೊದಲ ಪ್ರದರ್ಶನ ನೋಡಲು ಬಂದಿದ್ದ ಜನರು, ಕೇವಲ ತಮಿಳುನಾಡು ಮಾತ್ರವೋ ಅಥವಾ ಕೇರಳದಲ್ಲೂ ಶೋ ರದ್ದಾಗಿದೆಯೇ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಹಲವರು ಕೆಲಸಕ್ಕೆ ರಜೆ ಹಾಕಿ ಬಂದಿದ್ದು, ಮಧ್ಯಾಹ್ನದ ಶೋಗಳಾದರೂ ನಡೆಯುತ್ತವೆಯೇ ಎಂದು ಸ್ಪಷ್ಟನೆ ನೀಡುವಂತೆ ನಿರ್ಮಾಪಕರನ್ನು ಒತ್ತಾಯಿಸಿದ್ದಾರೆ.
Due to unavoidable reasons 9am shows will be cancelled for Karuppu. Our sincere apologies to everyone!
— SR Prabu (@prabhu_sr) May 13, 2026
ಅನುಮತಿ ನೀಡಿದ್ದ ಸಿಎಂ
ವಿಶೇಷವೆಂದರೆ, ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಈ ಚಿತ್ರದ 9 ಗಂಟೆಯ ಪ್ರದರ್ಶನಕ್ಕೆ ವಿಶೇಷ ಅನುಮತಿ ನೀಡಿದ್ದರು. ಇದಕ್ಕಾಗಿ ಎರಡು ದಿನಗಳ ಹಿಂದೆಯಷ್ಟೇ ಚಿತ್ರತಂಡವು ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿತ್ತು. ಸರ್ಕಾರದ ಅನುಮತಿ ಸಿಕ್ಕಿದ್ದರೂ ಸಹ ತಾಂತ್ರಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೆ ಪ್ರದರ್ಶನ ಘೋಷಿಸಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರವನ್ನು ಡ್ರೀಮ್ ವಾರಿಯರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಸದ್ಯ ಬಿಡುಗಡೆಯ ಮೊದಲ ದಿನವೇ ಎದುರಾದ ಈ ಗೊಂದಲಗಳು ಚಿತ್ರದ ಮೇಲೆ ತುಸು ಪರಿಣಾಮ ಬೀರುವ ಸಾಧ್ಯತೆ ಇದೆ. ಸಂಜೆಯ ಹೊತ್ತಿಗೆ ಪರಿಸ್ಥಿತಿ ಸುಧಾರಿಸಿ ಎಲ್ಲಾ ಕಡೆ ಪ್ರದರ್ಶನ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ತ್ರಿಷಾ-ಸೂರ್ಯ ಅಭಿನಯದ ಕುರುಪ್ಪು ಬೆಳಗಿನ ಶೋಗೆ ಸಿಎಂ ವಿಜಯ್ ಒಪ್ಪಿಗೆ
