TOP NEWS

Ranveer Singh: ಕಾಂತಾರ ದೈವದ ಕುರಿತು ಅವಹೇಳನಕಾರಿ ಹೇಳಿಕೆ, ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ ನಟ ರಣವೀರ್ ಸಿಂಗ್

karnataka high xloses ranveer singh kantara case

ಬೆಂಗೂಳೂರು: ಕಳೆದ ವರ್ಷ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವೊಂದರಲ್ಲಿ ‘ಕಾಂತಾರ: ಚಾಪ್ಟರ್-1’ ಚಿತ್ರದ ದೈವಪಾತ್ರವನ್ನು ಅಣಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಕರ್ನಾಟಕ ಹೈಕೋರ್ಟ್‌ಗೆ ನೂತನ ಪ್ರಮಾಣಪತ್ರವನ್ನು ಸಲ್ಲಿಸಿ ಬೇಷರತ್ ಕ್ಷಮೆ ಕೋರಿದ್ದಾರೆ. ಶನಿವಾರ ನಡೆದ ವಿಚಾರಣೆ ವೇಳೆ, ನಟನ ಪರ ವಕೀಲರು ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರಲ್ಲಿ ರಣವೀರ್ ಸಿಂಗ್ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಭರವಸೆ ನೀಡಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ದೂರುದಾರರ ಪರ ವಕೀಲರು, ಇದು ಕೇವಲ ಒಂದು ಕಾನೂನು ಪ್ರಕರಣವಲ್ಲ, ಬದಲಾಗಿ ಒಂದು ಸಮುದಾಯದ ನಂಬಿಕೆಗೆ ಸಂಬಂಧಿಸಿದ ವಿಷಯ ಎಂದು ಪ್ರತಿಪಾದಿಸಿದರು. ಇಂತಹ ವಿಚಾರಗಳಲ್ಲಿ ಸೆಲೆಬ್ರಿಟಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಾಲಯ ಈ ಹಿಂದೆಯೇ ಎಚ್ಚರಿಸಿತ್ತು. ದೂರುದಾರರ ಆಕ್ಷೇಪದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಪೀಠ, ಈವರೆಗೆ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರಲಿಲ್ಲ.

ರಣವೀರ್ ಸಿಂಗ್ ಸಲ್ಲಿಸಿರುವ ನೂತನ ಪ್ರಮಾಣಪತ್ರವನ್ನು ಪರಿಗಣಿಸಿದ ನ್ಯಾಯಾಲಯ, ಮುಂದಿನ ನಾಲ್ಕು ವಾರಗಳ ಒಳಗಾಗಿ ನಟ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಈ ಮೂಲಕ ಪ್ರಕರಣವನ್ನು ವಿಲೇವಾರಿ ಮಾಡುವುದಾಗಿ ನ್ಯಾಯಾಲಯ ಮೌಖಿಕವಾಗಿ ತಿಳಿಸಿದೆ. ಕಾನೂನಾತ್ಮಕವಾಗಿ ವಾದ-ವಿವಾದಗಳಿಗೆ ಹೋಗುವ ಬದಲು, ಧಾರ್ಮಿಕ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ನಟನ ಕ್ಷಮಾಪಣೆಯನ್ನು ಸ್ವೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು ನ್ಯಾಯಪೀಠ ಮುಂದಾಗಿದೆ.

ಏನಿದು ಪ್ರಕರಣ?

ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಕರೆದಿದ್ದಾರೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ಮೆಥಲ್ ಅವರು ದೂರು ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196, 299 ಮತ್ತು 302ರ ಅಡಿ ನಟನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ತನಿಖಾ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ನಟ ಬಹಿರಂಗವಾಗಿ ಮತ್ತು ಪ್ರಮಾಣಪತ್ರದ ಮೂಲಕ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ, ದೀರ್ಘಕಾಲದಿಂದ ನಡೆಯುತ್ತಿದ್ದ ಈ ಕಾನೂನು ಸಮರ ಅಂತ್ಯಗೊಂಡಿದೆ.

ಇದನ್ನೂ ಓದಿ: ನಟಿ ತಮನ್ನಾ ಭಾಟಿಯಾ ಕುರಿತ ವಿವಾದಾತ್ಮಕ ಹೇಳಿಕೆ: ಟೀಕೆಗಳಿಗೆ ಅನ್ನು ಕಪೂರ್ ಉತ್ತರ

Leave a Reply

Your email address will not be published. Required fields are marked *