TOP NEWS

Iran: ಜೀವ ಉಳಿದರೂ ಕಷ್ಟವಾಗಿದೆ ಬದುಕು, ಇದು ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ

Iran supreme leader Mojtaba Khamenei health update

ಇರಾನ್‌: ದೇಶದ ಸುಪ್ರೀಂ ಲೀಡರ್ (Iran) ಮೊಜ್ತಬಾ ಖಮೇನಿ (Mojtaba Khamenei) ಅವರು ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದರೂ, ತೀವ್ರ ಸ್ವರೂಪದ ಗಾಯಗಳಿಂದಾಗಿ ಆರೋಗ್ಯದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯು ದೇಶದ ಆಡಳಿತದ ಮೇಲೆ ದೊಡ್ಡ ಪ್ರಭಾವ ಬೀರಿದ್ದು, ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. ದಾಳಿಯಲ್ಲಿ ಅವರ ಕೈಗೆ ಶಸ್ತ್ರಚಿಕಿತ್ಸೆ ನಡೆದಿದೆ, ಮುಖದ ಮೇಲೆ ಗಂಭೀರ ಸುಟ್ಟ ಗಾಯಗಳಾಗಿವೆ ಮತ್ತು ಅವರಿಗೆ ಕೃತಕ ಕಾಲಿನ ಅಳವಡಿಕೆ ಅಗತ್ಯವಿದೆ ಎಂದು ವರದಿಯಾಗಿದೆ.

ಕಾಡುತ್ತಿದೆ ಅನೇಕ ಸಮಸ್ಯೆ

ಖಮೇನಿ ಅವರು ಮಾನಸಿಕವಾಗಿ ಸದೃಢರಾಗಿದ್ದರೂ, ದೈಹಿಕ ದೌರ್ಬಲ್ಯದಿಂದಾಗಿ ನೇರವಾಗಿ ಆಡಳಿತದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇರಾನ್‌ನ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರದ ಕೇಂದ್ರ ಬದಲಾಗಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇರಾನ್‌ನ ಮಿಲಿಟರಿ ಜನರಲ್‌ಗಳೇ ಈಗ ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತಜ್ಞರ ಪ್ರಕಾರ, ಮೊಜ್ತಬಾ ಖಮೇನಿ ಅವರು ಹೆಸರಿಗೆ ಮಾತ್ರ ಸುಪ್ರೀಂ ಲೀಡರ್ ಆಗಿದ್ದು, ವಾಸ್ತವದಲ್ಲಿ ರೆವಲ್ಯೂಷನರಿ ಗಾರ್ಡ್‌ಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬದಲಾವಣೆಯು ಇರಾನ್‌ನ ಆಡಳಿತ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿದೆ. ಈ ಹಿಂದೆ ಅವರ ತಂದೆ ಆಲಿ ಖಮೇನಿ ಅವರ ಕಾಲದಲ್ಲಿ ಅಧಿಕಾರ ಕೇಂದ್ರೀಕೃತವಾಗಿತ್ತು, ಆದರೆ ಈಗ ಅದು ‘ಬೋರ್ಡ್ ಮೀಟಿಂಗ್’ ಶೈಲಿಗೆ ಬದಲಾಗಿದೆ. ಮೊಜ್ತಬಾ ಖಮೇನಿ ಅವರು ನಿರ್ದೇಶಕರ ಮಂಡಳಿಯ ಅಧ್ಯಕ್ಷರಂತೆ ಇದ್ದರೆ, ಮಿಲಿಟರಿ ಜನರಲ್‌ಗಳು ಮಂಡಳಿಯ ಸದಸ್ಯರಂತೆ ಪ್ರತಿಯೊಂದು ನಿರ್ಧಾರವನ್ನು ರೂಪಿಸುತ್ತಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಅಮೆರಿಕದೊಂದಿಗಿನ ಮಾತುಕತೆಗಳನ್ನು ಸಹ ಅಡ್ಡಿಪಡಿಸುವ ಮೂಲಕ, ಅಧ್ಯಕ್ಷ ಮಸೂದ್ ಪೆಜೆಶ್ಕಿನ್ ಮತ್ತು ವಿದೇಶಾಂಗ ಸಚಿವರಂತಹ ನಾಗರಿಕ ನಾಯಕರ ಅಧಿಕಾರವನ್ನು ಸೇನೆ ಕಡೆಗಣಿಸಿದೆ ಎಂದು ವರದಿಗಳು ತಿಳಿಸಿವೆ.

ಪತ್ರಗಳ ಮೂಲಕ ಸಂವಹನ

ತಮ್ಮ ದೌರ್ಬಲ್ಯವನ್ನು ಹೊರಜಗತ್ತಿಗೆ ತೋರಿಸಬಾರದು ಎಂಬ ಕಾರಣಕ್ಕೆ ಮೊಜ್ತಬಾ ಖಮೇನಿ ಯಾವುದೇ ಸಾರ್ವಜನಿಕ ಭಾಷಣಗಳನ್ನು ಮಾಡಿಲ್ಲ. ಬದಲಾಗಿ, ಸೀಲ್ ಮಾಡಿದ ಪತ್ರಗಳ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದಾರೆ. ಯುದ್ಧದ ಭೀತಿಯ ನಡುವೆ ಮತ್ತು ಅಮೆರಿಕದೊಂದಿಗಿನ ಕಠಿಣ ಮಾತುಕತೆಗಳ ಹೊತ್ತಿನಲ್ಲಿ, ಇರಾನ್‌ನ ಅಧಿಕಾರವು ಸಂಪೂರ್ಣವಾಗಿ ಸೇನೆಯ ಹಿಡಿತಕ್ಕೆ ಸಿಲುಕಿದೆ. ಸದ್ಯ ಇರಾನ್ ಮತ್ತು ಅಮೆರಿಕ ನಡುವೆ ಅನಿರ್ದಿಷ್ಟಾವಧಿ ಕದನ ವಿರಾಮ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕಿಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಶಟಪ್‌ ಟ್ರಂಪ್‌, AI ವಿಡಿಯೋ ಮೂಲಕ ಟಾಂಗ್‌ ಕೊಟ್ಟ ಇರಾನ್

Leave a Reply

Your email address will not be published. Required fields are marked *