ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಪತ್ನಿ ನೈಟಿ ಧರಿಸಿದ್ದಕ್ಕೆ ಸಿಟ್ಟಿಗೆದ್ದ ಪತಿಯೊಬ್ಬ ಆಕೆಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿರುವ ದಾರುಣ (Crime) ಘಟನೆ ನಡೆದಿದೆ.
ಸೀರೆ ಧರಿಸುವಂತೆ ಒತ್ತಾಯ
ಕೃಷ್ಣ ಪಾಟೀಲ್ (34) ಎಂಬಾತ ತನ್ನ ಪತ್ನಿ ಮಂಜುಳಾ ಪಾಟೀಲ್ (32) ಮೇಲೆ ಸೀರೆ ಧರಿಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದನು, ಈ ವಿಚಾರದಲ್ಲಿ ದಂಪತಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಕೃಷ್ಣ ಪಾಟೀಲ್, ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಮಂಜುಳಾ ಅವರು ಸುಮಾರು ಶೇ. 80ರಷ್ಟು ಸುಟ್ಟ ಗಾಯಗಳೊಂದಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಆರೋಗ್ಯ ಸ್ಥಿತಿ ಗಂಭೀರ
ಘಟನೆ ನಡೆದ ತಕ್ಷಣ ಅವರನ್ನು ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರೋಪಿ ಕೃಷ್ಣ ಪಾಟೀಲ್‌ನನ್ನು ನಂದಗಡ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ. ಕೇವಲ ಬಟ್ಟೆಯ ವಿಚಾರಕ್ಕಾಗಿ ಪತ್ನಿಯ ಜೀವವನ್ನೇ ಬಲಿ ಪಡೆಯಲು ಯತ್ನಿಸಿರುವ ಪತಿಯ ಈ ಕ್ರೌರ್ಯಕ್ಕೆ ಗ್ರಾಮಸ್ಥರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಂಡತಿ ಮೇಲೆ ಬೊಗಳಿದ ನಾಯಿ ಜೀವ ತೆಗೆದ ಆಸಾಮಿ
ಬೆಂಗಳೂರು:ಬೆಂಗಳೂರಿನಲ್ಲಿ (Bengaluru) ಕೇವಲ ಸಣ್ಣ ಕಾರಣವೊಂದಕ್ಕಾಗಿ ನೆರೆಯ ಮನೆಯ ಮುಗ್ಧ ನಾಯಿಯೊಂದರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಹೇಯ ಘಟನೆ ಬೆಳಕಿಗೆ (Crime) ಬಂದಿದೆ. ತಮ್ಮ ಪತ್ನಿಯ ಮೇಲೆ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಗೋಪಿ ಎಂಬಾತ ಮರದ ತುಂಡಿನಿಂದ ನಾಯಿಯನ್ನು ಮನಬಂದಂತೆ ಹೊಡೆದು ಗಾಯಗೊಳಿಸಿದ್ದಾನೆ. ಈ ಘಟನೆಯು ಏಪ್ರಿಲ್ 9ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಏನಿದು ಘಟನೆ?
ಸಿಸಿಟಿವಿ ದೃಶ್ಯಗಳಲ್ಲಿ ಗೋಪಿ ನೇರವಾಗಿ ನೆರೆಯವರ ಮನೆಗೆ ನುಗ್ಗಿ, ಪ್ರವೇಶದ್ವಾರದಲ್ಲಿದ್ದ ನಾಯಿಯನ್ನು ಮರದ ತುಂಡಿನಿಂದ ಐದು ಬಾರಿ ಬಲವಾಗಿ ಹೊಡೆಯುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಹಲ್ಲೆಯಿಂದ ನಾಯಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ನಾಯಿಯ ಅಸಹಾಯಕ ಆರ್ತನಾದ ಕೇಳಿ ಮನೆಯ ಮಾಲೀಕರು ಹೊರಗೆ ಬಂದು ನೋಡಿದಾಗ, ನಾಯಿ ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿದೆ. ತಕ್ಷಣವೇ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯ ನಾಯಿ ಅಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದೆ.
ಎರಡೂ ಕುಟುಂಬಗಳ ಜಗಳ
ಪತ್ನಿಯ ಮೇಲೆ ನಾಯಿ ಬೊಗಳಿದ್ದ ವಿಷಯವಾಗಿ ಅಂದು ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು. ಈ ವಿಚಾರದಲ್ಲಿ ಆಕ್ರೋಶಗೊಂಡ ಗೋಪಿ, ನಾಯಿಯ ಮೇಲೆ ಈ ರೀತಿಯ ಕ್ರೌರ್ಯ ಮೆರೆದಿದ್ದಾನೆ. ಈ ಬಗ್ಗೆ ಏಪ್ರಿಲ್ 11ರಂದು ನಾಯಿಯ ಮಾಲೀಕರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) 2023ರ ಅಡಿ ಪ್ರಾಣಿಗಳ ಮೇಲಿನ ದೌರ್ಜನ್ಯ ಮತ್ತು ಅಕ್ರಮ ಪ್ರವೇಶದ ಅಡಿಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಸಮಾಜದಲ್ಲಿ ಇಂತಹ ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಸ್ಟಾರ್‌ಬಕ್ಸ್ ಕಂಪನಿ ಡ್ರಿಂಕ್ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆ, ಅನುಮಾನ ಸೃಷ್ಟಿ ಮಾಡಿದ ವಿಡಿಯೋ
