ಬೆಂಗಳೂರು: ಸಿಲಿಕಾನ್ ಸಿಟಿಯ ಪಬ್ ಒಂದರಲ್ಲಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ ಒಬ್ಬರು ಕುಡಿದ ಅಮಲಿನಲ್ಲಿ ರಾದ್ಧಾಂತ ಮಾಡಿರುವ ಆಘಾತಕಾರಿ ಘಟನೆ (Crime) ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರದ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಸಾರ್ವಜನಿಕವಾಗಿ ಶಿಸ್ತು ಕಾಪಾಡಬೇಕಾದ ಅಧಿಕಾರಿಯೇ ಅಧಿಕೃತ ಐಡಿ ಕಾರ್ಡ್ ಧರಿಸಿಕೊಂಡು ಪಬ್ನಲ್ಲಿ ರಂಪಾಟ ನಡೆಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಸಬ್ ಡಿವಿಷನ್ 11 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಇನ್ಸ್ಪೆಕ್ಟರ್ ಮಲ್ಲಪ್ಪ ಎಸ್. ಕುಂದಗೋಳ ಎಂಬುವವರೇ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಏನಿದು ಘಟನೆ?
ಮೊನ್ನೆ ರಾತ್ರಿ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಪ್ರಸಿದ್ಧ ‘ಪಂಪ್ ಹೌಸ್’ ಖಾಸಗಿ ಪಬ್ಗೆ ತೆರಳಿದ್ದ ಇನ್ಸ್ಪೆಕ್ಟರ್ ಮಲ್ಲಪ್ಪ, ಅಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಪಬ್ನಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಸಿಕ್ಕಸಿಕ್ಕಂತೆ ಅವಾಜ್ ಹಾಕಲು ಶುರು ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಜೊತೆಯೂ ಕಿರಿಕ್ ತೆಗೆದು ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಇದನ್ನು ಗಮನಿಸಿ ಪ್ರಶ್ನಿಸಲು ಬಂದ ಪಬ್ ಮ್ಯಾನೇಜರ್ಗೆ ಇನ್ಸ್ಪೆಕ್ಟರ್ ಮಲ್ಲಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಅಧಿಕಾರಿಯ ಜಗಳ ತಾರಕಕ್ಕೇರಿದಾಗ ಪಬ್ ಸಿಬ್ಬಂದಿ ತಮ್ಮ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಇನ್ಸ್ಪೆಕ್ಟರ್ ವರ್ತನೆಯನ್ನು ಚಿತ್ರೀಕರಿಸಲು ಮುಂದಾಗಿದ್ದಾರೆ. ಕ್ಯಾಮೆರಾ ಕಣ್ಣು ಮುಂದೆ ಬರುತ್ತಿದ್ದಂತೆಯೇ ತಬ್ಬಿಬ್ಬಾದ ಅಧಿಕಾರಿ ತಕ್ಷಣವೇ ಉಲ್ಟಾ ಹೊಡೆದು ಬಾಲ ಮುದುಡಿಕೊಂಡಿದ್ದಾರೆ. ಸದ್ಯ ಅಬಕಾರಿ ಇನ್ಸ್ಪೆಕ್ಟರ್ ಮಲ್ಲಪ್ಪ ಕುಡಿದ ಅಮಲಿನಲ್ಲಿ ನಡೆಸಿರುವ ಈ ಹೈಡ್ರಾಮಾ ಹಾಗೂ ಮಾತನಾಡಿರುವ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಇಂತಹ ಬೇಜವಾಬ್ದಾರಿ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
