TOP NEWS

Big News: ಬಯಲಾದ ಆರೋಗ್ಯ ಇಲಾಖೆಯ ಮಹಾ ಬೇಜವಾಬ್ದಾರಿತನ; ಗೋಮಾಳದಲ್ಲಿ ಪತ್ತೆಯಾದ ಸರ್ಕಾರಿ ಔಷಧಿಗಳು!

Big news Shocker in Tumakuru Thousands of Govt Diabetes Pills Found Abandoned in Burial Ground Long Before Expiry Date

ತುಮಕೂರು: ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಸರ್ಕಾರಿ ಆಸ್ಪತ್ರೆಯ ಬೆಲೆಬಾಳುವ ಮಾತ್ರೆಗಳನ್ನು ಜನರಿಲ್ಲದ ಸ್ಮಶಾನ ಹಾಗೂ ಜಾನುವಾರುಗಳ ಹುಲ್ಲುಗಾವಲಿನಲ್ಲಿ (Big News) ಬೇಜವಾಬ್ದಾರಿತನದಿಂದ ಎಸೆದು ಹೋಗಿರುವ ಗಂಭೀರ ಪ್ರಕರಣ ಕೊರಟಗೆರೆ ತಾಲೂಕಿನ ಕಾಮೇನಹಳ್ಳಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ. ಸುಸ್ಥಿತಿಯಲ್ಲಿದ್ದ ಸಾವಿರಾರು ಔಷಧಿಗಳನ್ನು ಸದ್ದಿಲ್ಲದೆ ಅನಾಥ ಜಾಗದಲ್ಲಿ ಎಸೆದಿರುವ ಅಧಿಕಾರಿಗಳ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆತಂಕಕಾರಿ ಘಟನೆ ನಡೆದ ಸ್ಥಳದ ಸಮೀಪದಲ್ಲೇ ಗ್ರಾಮದ ಮುಖ್ಯ ಕೆರೆಯಿದ್ದು, ಮುಂಬರುವ ಮಳೆಗಾಲದಲ್ಲಿ ಈ ಮಾತ್ರೆಗಳ ಕೆಮಿಕಲ್ ಮಿಶ್ರಿತ ನೀರು ನೇರವಾಗಿ ಕೆರೆಗೆ ಹರಿದುಬಂದರೆ ಇಡೀ ಭಾಗದ ಕುಡಿಯುವ ನೀರು ಕಲುಷಿತಗೊಂಡು ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಯಾವೆಲ್ಲಾ ಮಾತ್ರೆಗಳನ್ನ ಎಸೆಯಲಾಗಿದೆ?

ಇಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪತ್ತೆಯಾಗಿರುವುದು ಸಕ್ಕರೆ ಕಾಯಿಲೆ ಅಥವಾ ಮಧುಮೇಹ (ಡಯಾಬಿಟಿಸ್) ನಿಯಂತ್ರಣಕ್ಕೆ ಬಳಸುವ ಅಗತ್ಯ ಮಾತ್ರೆಗಳಾಗಿವೆ. ಸಾಧಾರಣವಾಗಿ ಬಳಕೆ ಅವಧಿ ಮುಗಿದ ಔಷಧಗಳನ್ನು ಮಾತ್ರ ಇಲಾಖೆಯ ನಿಯಮಾವಳಿಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ. ಆದರೆ, ಇಲ್ಲಿ ಸಿಕ್ಕಿರುವ ಬಹುತೇಕ ಮಾತ್ರೆಗಳಿಗೆ ಇನ್ನೂ ಎಕ್ಸ್‌ಪೈರಿ ದಿನಾಂಕ ಹತ್ತಿರವಾಗಿಲ್ಲದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಶಪಡಿಸಿಕೊಳ್ಳಲಾದ ಮಾತ್ರೆಗಳ ಸ್ಟ್ರಿಪ್‌ಗಳ ಮೇಲೆ 2026ರ ಆಗಸ್ಟ್ ಹಾಗೂ ಸೆಪ್ಟೆಂಬರ್ ವರೆಗೂ ಬಳಸಲು ಕಾಲಾವಕಾಶ ಇರುವುದು ಖಚಿತಪಟ್ಟಿದೆ. ಈ ಪ್ರತಿಯೊಂದು ಪ್ಯಾಕೆಟ್ ಮೇಲೂ “ಸರ್ಕಾರಿ ಆಸ್ಪತ್ರೆಗಳ ಪೂರೈಕೆಗಾಗಿ ಮಾತ್ರ” ಎಂದು ಮುದ್ರಿಸಲಾಗಿದ್ದು, ಬಡವರ ಹೊಟ್ಟೆಗೆ ಸೇರಬೇಕಾಗಿದ್ದ ಜೀವ ರಕ್ಷಕ ಔಷಧಿಗಳು ಹೀಗೆ ಬಯಲು ಪಾಲಾಗಲು ಕಾರಣರಾದ ತಪ್ಪಿತಸ್ಥರ ವಿರುದ್ಧ ಆರೋಗ್ಯ ಇಲಾಖೆ ತಕ್ಷಣವೇ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಬರದಿದ್ದರೆ ₹5,000 ಭಾರಿ ದಂಡ: ರಾಜ್ಯ ಸರ್ಕಾರದ ಬಿಗ್ ನಿರ್ಧಾರ

Leave a Reply

Your email address will not be published. Required fields are marked *