ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಶನಿವಾರದಿಂದ ಗಾಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಹೆಡ್ ಕೋಚ್ (Team India) ಗೌತಮ್ ಗಂಭೀರ್ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯಕ್ಕೆ ಈ ಸರಣಿ ಅತ್ಯಂತ ನಿರ್ಣಾಯಕ ಎನಿಸಿದೆ. ಗಂಭೀರ್ ತರಬೇತಿಯಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆದ್ದು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಸಾಧಾರಣ ಯಶಸ್ಸು ಕಂಡಿದೆಯಾದರೂ, ಟೆಸ್ಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಡಬಡಾಯಿಸಿ ಸರಣಿ ಸೋಲನುಭವಿಸಿತ್ತು. ಇದರಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ ತಲುಪುವ ಕನಸಿಗೆ ಹೊಡೆತ ಬಿದ್ದಿದ್ದು, ಪ್ರಸ್ತುತ ನೆರವು ಸಿಬ್ಬಂದಿಯ ನಿರ್ಗಮನದ ನಡುವೆ ಗಂಭೀರ್ ಪಡೆಯ ಮೇಲೆ ಕಮ್‌ಬ್ಯಾಕ್ ಮಾಡುವ ಭಾರೀ ಒತ್ತಡವಿದೆ.
ಭಾರತೀಯ ಬ್ಯಾಟರ್‌ಗಳಿಗೆ ಸುಲಭದ ಹಾದಿಯಲ್ಲ
ಆದರೆ ಗಾಲ್ ಮೈದಾನದಲ್ಲಿ ಲಂಕಾ ಪಡೆಯನ್ನು ಎದುರಿಸುವುದು ಭಾರತೀಯ ಬ್ಯಾಟರ್‌ಗಳಿಗೆ ಸುಲಭದ ಹಾದಿಯಲ್ಲ. 1998ರಿಂದ ಈ ಮೈದಾನದಲ್ಲಿ ನಡೆದ 49 ಟೆಸ್ಟ್‌ಗಳಲ್ಲಿ 27 ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ, ಇತ್ತೀಚಿನ ವರ್ಷಗಳಲ್ಲಿ ಪ್ರಭಾತ್ ಜಯಸೂರ್ಯ ಮತ್ತು ರಮೇಶ್ ಮೆಂಡಿಸ್ ಅವರಂತಹ ಸ್ಪಿನ್ನರ್‌ಗಳ ಬಲದೊಂದಿಗೆ ಗಾಲ್ ಮೈದಾನವನ್ನು ತಮ್ಮ ಕೋಟೆಯನ್ನಾಗಿ ಮಾಡಿಕೊಂಡಿದೆ. ಮಿಚೆಲ್ ಸ್ಯಾಂಟ್ನರ್ ಮತ್ತು ಸೈಮನ್ ಹಾರ್ಮರ್ ಅವರಂತಹ ಸ್ಪಿನ್ನರ್‌ಗಳ ಎದುರು ಇತ್ತೀಚೆಗೆ ಹೆಣಗಾಡಿದ್ದ ಭಾರತೀಯ ಬ್ಯಾಟಿಂಗ್ ಪಡೆಗೆ ಪ್ರಭಾತ್ ಪಡೆಯನ್ನು ಎದುರಿಸುವುದು ನಿಜಕ್ಕೂ ದೊಡ್ಡ ಸವಾಲಾಗಲಿದೆ.
ಶುಭ್‌ಮನ್ ಗಿಲ್ ನಾಯಕತ್ವದ ಯುವ ಭಾರತೀಯ ತಂಡವು 2017ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಲಂಕಾ ನೆಲದಲ್ಲಿ 3-0 ಅಂತರದಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿದ್ದ ಐತಿಹಾಸಿಕ ಸಾಧನೆಯನ್ನು ಮರುಕಳಿಸುವ ನಿರೀಕ್ಷೆಯಲ್ಲಿದೆ. ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್ ಅವರನ್ನೊಳಗೊಂಡ ಮೇಲ್ವರಸಿಯ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಬೇಕಿದ್ದು, ರಿಷಭ್ ಪಂತ್ ಹಾಗೂ ಧ್ರುವ್ ಜುರೆಲ್ ಸ್ಪಿನ್ ಬೌಲಿಂಗ್ ಎದುರು ಫಾರ್ಮ್‌ಗೆ ಮರಳಬೇಕಿದೆ. ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಹಾಗೂ ಮಾನವ್ ಸುತಾರ್ ಅವರನ್ನೊಳಗೊಂಡ ಸ್ಪಿನ್ ತ್ರಿವಳಿಗಳಿಗೆ ಹೆಚ್ಚಿನ ಜವಾಬ್ದಾರಿ ಇರಲಿದ್ದು, ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ವೇಗದ ವಿಭಾಗದಲ್ಲಿ ಬೆಂಬಲ ನೀಡಬೇಕಿದೆ.
ದೀರ್ಘಾವಧಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ಶ್ರೀಲಂಕಾ
ಮತ್ತೊಂದೆಡೆ, ಆತಿಥೇಯ ಶ್ರೀಲಂಕಾ ತಂಡವು ದೀರ್ಘಾವಧಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ಮರಳುತ್ತಿದ್ದು, ನಾಯಕ ಧನಂಜಯ ಡಿ ಸಿಲ್ವಾ ನೇತೃತ್ವದಲ್ಲಿ ಭಾರತಕ್ಕೆ ಕಠಿಣ ಸವಾಲು ಒಡ್ಡಲು ಸಜ್ಜಾಗಿದೆ. ಕಳೆಗುಂದಿರುವ ಟೆಸ್ಟ್ ಖ್ಯಾತಿಯನ್ನು ಮರಳಿ ಪಡೆಯಲು ಹೋರಾಡುತ್ತಿರುವ ಭಾರತ ಮತ್ತು ತವರು ಮೈದಾನದ ಲಾಭ ಪಡೆಯಲು ಕಾದಿರುವ ಶ್ರೀಲಂಕಾ ನಡುವಿನ ಈ ಕಾದಾಟವು ರೋಚಕ ಹಂತ ತಲುಪುವ ನಿರೀಕ್ಷೆಯಿದೆ
ಇದನ್ನೂ ಓದಿ: ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ: ಬುಮ್ರಾ, ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಹೊಸ ಅಪ್‌ಡೇಟ್!
