Bullet Train: ಕರ್ನಾಟಕಕ್ಕೆ ಮೂರು ಬುಲೆಟ್ ರೈಲು ಮಾರ್ಗಗಳ ನಕ್ಷೆ ರಿಲೀಸ್: ಮೈಸೂರು-ಬೆಂಗಳೂರು ನಡುವೆ ಅತೀ ವೇಗದ ಪ್ರಯಾಣ!

good news indian railway releases bullet train route maps

ಬೆಂಗಳೂರು: ರಾಜ್ಯದ ಜನತೆ ಬಹುಕಾಲದಿಂದ ಕಾಯುತ್ತಿದ್ದ ಹೈಸ್ಪೀಡ್ ರೈಲು ಯೋಜನೆಗಳ ಅಧಿಕೃತ ಮಾರ್ಗಸೂಚಿ ಹೊರಬಿದ್ದಿದೆ. ಬೆಂಗಳೂರಿನಿಂದ ನೆರೆಯ ರಾಜಧಾನಿಗಳಾದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಯೋಜನೆಗಳ ಜೊತೆಗೆ, ಈಗ ಮೈಸೂರು-ಬೆಂಗಳೂರು ಹೈಸ್ಪೀಡ್ (Bullet Train) ಮಾರ್ಗದ ನಕ್ಷೆಯೂ ಸಿದ್ಧವಾಗಿರುವುದು ವಿಶೇಷ.

ಮೈಸೂರು ಮಾರ್ಗದ ಹೈಲೈಟ್ಸ್: ಸಂಸದ ಯದುವೀರ್ ಒಡೆಯರ್ ಅವರ ಪ್ರಸ್ತಾವನೆಗೆ ಓಗೊಟ್ಟಿರುವ ಕೇಂದ್ರ ಸರ್ಕಾರ, ಚೆನ್ನೈ ಬುಲೆಟ್ ರೈಲು ಯೋಜನೆಯನ್ನು ಮೈಸೂರಿನವರೆಗೆ ವಿಸ್ತರಿಸಲು ಮುಂದಾಗಿದೆ. ಸುಮಾರು 157 ಕಿ.ಮೀ ಉದ್ದದ ಈ ಮಾರ್ಗವು ಮೈಸೂರಿನಿಂದ ಹೊರಟು ಮಂಡ್ಯ, ರಾಮನಗರ, ಕೆಂಗೇರಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಾಗಿ ಹೊಸಕೋಟೆ ಸಮೀಪದ ಕೋಡಿಹಳ್ಳಿಯಲ್ಲಿ ಚೆನ್ನೈ ಮಾರ್ಗವನ್ನು ಸೇರಲಿದೆ.

ಪ್ರಯಾಣದ ಅವಧಿ ಗಣನೀಯ ಇಳಿಕೆ:

  • ಬೆಂಗಳೂರು-ಚೆನ್ನೈ: 306 ಕಿ.ಮೀ ದೂರವನ್ನು ಕೇವಲ 73 ನಿಮಿಷಗಳಲ್ಲಿ ಕ್ರಮಿಸಬಹುದು. ಇದು ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್ ಮತ್ತು ಕೋಲಾರ ಮೂಲಕ ಸಾಗಲಿದೆ.
  • ಬೆಂಗಳೂರು-ಹೈದರಾಬಾದ್: 607 ಕಿ.ಮೀ ದೂರದ ಈ ಮಾರ್ಗದಲ್ಲಿ ಪ್ರಯಾಣದ ಅವಧಿ ಕೇವಲ 2 ಗಂಟೆ ಇರಲಿದೆ. ದೇವನಹಳ್ಳಿ ವಿಮಾನ ನಿಲ್ದಾಣ ಮತ್ತು ಚಿಕ್ಕಬಳ್ಳಾಪುರ ಮಾರ್ಗವಾಗಿ ಇದು ಹೈದರಾಬಾದ್ ತಲುಪಲಿದೆ.

ಮೆಜೆಸ್ಟಿಕ್ ಸಂಪರ್ಕವಿಲ್ಲದ ಆತಂಕ: ಈ ಎಲ್ಲ ಬುಲೆಟ್ ರೈಲುಗಳು ನಗರದ ಹೊರವಲಯದ ನಿಲ್ದಾಣಗಳ ಮೂಲಕವೇ ಹಾದುಹೋಗಲಿವೆ. ಮೆಜೆಸ್ಟಿಕ್ (ಕೆಎಸ್ಆರ್ ಬೆಂಗಳೂರು) ನಿಲ್ದಾಣಕ್ಕೆ ಇವು ಬರುವುದಿಲ್ಲ ಎಂಬುದು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿದೆ. ನಗರದ ಹೃದಯಭಾಗಕ್ಕೆ ಸಂಪರ್ಕ ಇಲ್ಲದಿರುವುದು ಭವಿಷ್ಯದಲ್ಲಿ ಪ್ರಯಾಣಿಕರಿಗೆ ಅಡಚಣೆಯಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಯೋಜನೆಯ ಕಾಲಮಿತಿ: ಪ್ರಸ್ತುತ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಸರ್ವೆ ಕಾರ್ಯಗಳನ್ನು ನಡೆಸುತ್ತಿದ್ದು, 2027 ಅಥವಾ 2028ರ ವೇಳೆಗೆ ಕಾಮಗಾರಿಗಳು ಅಧಿಕೃತವಾಗಿ ಚಾಲನೆ ಪಡೆಯುವ ನಿರೀಕ್ಷೆಯಿದೆ. ಈ ಹೈಸ್ಪೀಡ್ ರೈಲುಗಳು ಹಳಿ ಏರಿದರೆ ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರಗಳ ನಡುವಿನ ಅಂತರ ಬಹಳಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ: ಡಿಜಿಪಿ ಅಮಾನತು ಹಿಂಪಡೆತ ಹಾಗೂ ಐಪಿಎಲ್ ವಿವಾದ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

Leave a Reply

Your email address will not be published. Required fields are marked *