ತಿರುವನಂತಪುರ: ಕೇರಳದ (Keralam) ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಬಿರುಸುಗೊಂಡಿದೆ. ಶಾಸಕಾಂಗ ಪಕ್ಷದ ಸಭೆ ನಡೆದಿದ್ದರೂ ಸಹ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಎಐಸಿಸಿ ವರಿಷ್ಠರಿಗೆ ಬಿಡಲಾಗಿದೆ. ದೆಹಲಿ ಮಟ್ಟದಲ್ಲಿ ನಡೆಯುವ ಚರ್ಚೆಯ ನಂತರ ಭಾನುವಾರದೊಳಗೆ ಹೊಸ ನಾಯಕನ ಹೆಸರು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ.
ಹೈಕಮಾಂಡ್ ಅಂಗಳಕ್ಕೆ ಚೆಂಡು: ಚುನಾವಣೆಯಲ್ಲಿ 63 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಾಸಕರು ತಮ್ಮ ವೈಯಕ್ತಿಕ ಒಲವನ್ನು ಕೇಂದ್ರದಿಂದ ಬಂದಿರುವ ವೀಕ್ಷಕರಿಗೆ ತಿಳಿಸಿದ್ದಾರೆ. ಕೆ. ಸುಧಾರಕರನ್ ಸೇರಿದಂತೆ ಹಲವು ಹಿರಿಯ ನಾಯಕರು ಶಾಸಕರ ಅಭಿಪ್ರಾಯ ಮತ್ತು ಜನರ ಭಾವನೆಗಳನ್ನು ಆಧರಿಸಿ ಸಿಎಂ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಶಾಸಕರ ಬೆಂಬಲ ಯಾರ ಪರ ಹೆಚ್ಚಿದೆ ಎಂಬುದು ಇಲ್ಲಿ ನಿರ್ಣಾಯಕವಾಗಲಿದೆ.
ಸಿಎಂ ರೇಸ್‌ನಲ್ಲಿರುವ ಪ್ರಮುಖರು: ಸದ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷವನ್ನು ಮುನ್ನಡೆಸಿದ ಸತೀಶನ್ ಅವರಿಗೆ ಒಂದು ವರ್ಗದ ಬೆಂಬಲವಿದ್ದರೆ, ಸಂಸದ ಕೆ.ಸಿ. ವೇಣುಗೋಪಾಲ್ ಅವರಿಗೆ ಹೆಚ್ಚಿನ ಶಾಸಕರು ಒಲವು ತೋರುತ್ತಿದ್ದಾರೆ ಎನ್ನಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಈ ಮೂವರೂ ನಾಯಕರು ನಾಯರ್ ಸಮುದಾಯಕ್ಕೆ ಸೇರಿದವರಾಗಿದ್ದು, ದಿವಂಗತ ಕೆ. ಕರುಣಾಕರನ್ ಅವರ ಗರಡಿಯಲ್ಲಿ ಬೆಳೆದವರು ಎಂಬುದು ವಿಶೇಷ.
ಈಗಾಗಲೇ ವೀಕ್ಷಕರು ಶಾಸಕರ ಅಭಿಪ್ರಾಯಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಿದ್ದು, ಹೈಕಮಾಂಡ್ ನೀಡುವ ಅಂತಿಮ ತೀರ್ಪಿಗಾಗಿ ರಾಜ್ಯದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಸಮುದಾಯದ ಸಮೀಕರಣ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಯಾರಿಗೆ ಪಟ್ಟ ಕಟ್ಟಲಿದೆ ಎಂಬುದು ಭಾನುವಾರ ಸ್ಪಷ್ಟವಾಗಲಿದೆ.
ಇದನ್ನೂ ಓದಿ: ಬಿಹಾರ ಸಂಪುಟ ವಿಸ್ತರಣೆ: ನಿಶಾಂತ್ ಕುಮಾರ್ ಸೇರಿ 31 ನಾಯಕರಿಗೆ ಸ್ಥಾನ
