ಮುಂಬೈ: ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಅವರು ತಮ್ಮ ಇತ್ತೀಚಿನ ಹಾಡಿನ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ (NCW) ಎದುರು ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ. ವಿಚಾರಣೆಯ ನಂತರ ಮಾತನಾಡಿದ ಅವರು, ಹಾಡಿನ ಮೂಲಕ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ. ಒಬ್ಬ ಜವಾಬ್ದಾರಿಯುತ ಕಲಾವಿದೆಯಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ, ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದು ಅವರು ತಿಳಿಸಿದರು. ಇದೇ ವೇಳೆ, ತಾವು ಅನಾಥ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನೆರವು ನೀಡುವುದಾಗಿ ಘೋಷಿಸುವ ಮೂಲಕ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ವಿವಾದದ ಹಿನ್ನೆಲೆ ಮತ್ತು ದೂರು: ಈ ಹಾಡಿನಲ್ಲಿ ಅಶ್ಲೀಲ ಅಂಶಗಳಿವೆ ಎಂಬ ಆರೋಪದ ಮೇಲೆ ಮಹಿಳಾ ಆಯೋಗವು ಮಾರ್ಚ್ ತಿಂಗಳಿನಲ್ಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಮೇ 7ರಂದು ವಿಚಾರಣೆಗೆ ಹಾಜರಾಗುವಂತೆ ನೋರಾ ಫತೇಹಿ ಅವರಿಗೆ ಸಮನ್ಸ್ ನೀಡಲಾಗಿತ್ತು. ಈ ಪ್ರಕರಣದಲ್ಲಿ ನೋರಾ ಮಾತ್ರವಲ್ಲದೆ ನಟ ಸಂಜಯ್ ದತ್, ಸಾಹಿತ್ಯಗಾರ ರಾಕೀಬ್ ಆಲಂ ಮತ್ತು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರಿಗೂ ಆಯೋಗ ನೋಟಿಸ್ ನೀಡಿತ್ತು. ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಮತ್ತು ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಗಂಭೀರವಾಗಿ ಪರಿಗಣಿಸಿತ್ತು.
ಲೋಕಸಭೆಯಲ್ಲಿ ಹಾಡಿನ ನಿಷೇಧದ ಚರ್ಚೆ: ಈ ವಿವಾದವು ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗದೆ ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು. ಲೋಕಸಭೆಯಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಡಿನ ದೃಶ್ಯಗಳು ಮತ್ತು ಸಾಹಿತ್ಯದ ಬಗ್ಗೆ ಮಹಿಳಾ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಎಫ್‌ಐಆರ್ ದಾಖಲಿಸುವಂತೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ನಟಿ ಆಯೋಗದ ಮುಂದೆ ಹಾಜರಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಅಕ್ಷಯ್ ಕುಮಾರ್: ಕೆಲ ದಿನಗಳ ಕಾಲ ನಟನೆಗೆ ಬ್ರೇಕ್!
