ನವದೆಹಲಿ: ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ ಆ್ಯಪ್ ಆಧಾರಿತ ಡೆಲಿವರಿ ಹಾಗೂ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಗಿಗ್ ಅಂಡ್ ಪ್ಲಾಟ್ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ (GIPSWU) ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಆ್ಯಪ್ ಆಧಾರಿತ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕರೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ತಮಗೆ ಪ್ರತಿ ಕಿಲೋಮೀಟರ್ಗೆ ಕನಿಷ್ಠ 20 ರೂಪಾಯಿ ನಿಗದಿಪಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ನೌಕರರ ಜೀವ ದುಸ್ಥರ
ತೈಲ ಮಾರುಕಟ್ಟೆ ಕಂಪನಿಗಳು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ಸುಮಾರು 3 ರೂಪಾಯಿಗಳಷ್ಟು ಹೆಚ್ಚಿಸಿವೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ನಡೆದಿರುವ ಮೊದಲ ಪ್ರಮುಖ ಇಂಧನ ಬೆಲೆ ಏರಿಕೆ ಇದಾಗಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಆದರೆ, ಈ ನಿರ್ಧಾರದಿಂದಾಗಿ ಆಹಾರ ವಿತರಣೆ, ರೈಡ್-ಹೇಲಿಂಗ್, ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ದೇಶದ ಸುಮಾರು 1.2 ಕೋಟಿ ಗಿಗ್ ಕಾರ್ಮಿಕರ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ ಎಂದು ಯೂನಿಯನ್ ಕಳವಳ ವ್ಯಕ್ತಪಡಿಸಿದೆ.
ಸಂಘಟನೆಯ ಅಧ್ಯಕ್ಷೆ ಸೀಮಾ ಸಿಂಗ್ ಮಾತನಾಡಿ, ಇಂಧನ ದರ ಏರಿಕೆಯ ಜೊತೆಗೆ ಎಲ್ಪಿಜಿ ಸಿಲಿಂಡರ್ ಬೆಲೆಯೂ ಹೆಚ್ಚಿರುವುದು ಜೀವನ ನಿರ್ವಹಣಾ ವೆಚ್ಚವನ್ನು ದುಪ್ಪಟ್ಟು ಮಾಡಿದೆ. ದುಡಿಮೆಗೆ ತಕ್ಕ ಆದಾಯ ಸಿಗದಿದ್ದರೆ ಅನೇಕ ಕಾರ್ಮಿಕರು ಈ ಕ್ಷೇತ್ರವನ್ನೇ ತೊರೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ, ಸರ್ಕಾರ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ ಕಂಪನಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಾರಿಗೆ ನೌಕರರಿಗೆ ಕಿಲೋಮೀಟರ್ಗೆ ಕನಿಷ್ಠ 20 ರೂಪಾಯಿ ಸೇವಾ ದರವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಶೇಷವಾಗಿ ಸ್ವಿಗ್ಗಿ, ಜೊಮ್ಯಾಟೋ ಮತ್ತು ಬ್ಲಿಂಕಿಟ್ನಂತಹ ಸಂಸ್ಥೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು, ಕಠಿಣ ಹವಾಮಾನದಲ್ಲೂ ದೀರ್ಘಕಾಲ ಕೆಲಸ ಮಾಡುವ ನೌಕರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿಂದೆ 2025ರ ಡಿಸೆಂಬರ್ನಲ್ಲಿಯೂ ಸಹ ಕಡಿಮೆ ವೇತನ ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ವಿರುದ್ಧ ಈ ನೌಕರರು ದೇಶಾದ್ಯಂತ ಮುಷ್ಕರ ನಡೆಸಿದ್ದರು. ಅಂದು ಅವರು 10 ನಿಮಿಷಗಳ ಡೆಲಿವರಿ ಆಯ್ಕೆಯನ್ನು ರದ್ದುಗೊಳಿಸುವಂತೆ ಹಾಗೂ ಹಳೆಯ ವೇತನ ಪದ್ಧತಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದ್ದರು. ಈಗ ಇಂಧನ ಬೆಲೆ ಏರಿಕೆಯು ಇವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಅಡುಗೆ ಎಣ್ಣೆ ಆಮದು ವೆಚ್ಚ ಏರಿಕೆ, ಕೇಂದ್ರಕ್ಕೆ ಮನವಿ
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಅಸ್ಥಿರತೆ ಮತ್ತು ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರತದ ಅಡುಗೆ ಎಣ್ಣೆ (Edible Oil) ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರಗಳು ಹೆಚ್ಚಾಗುವ ಆತಂಕ ಎದುರಾಗಿದ್ದು, ಈ ಬಿಕ್ಕಟ್ಟಿನಿಂದ ಪಾರಾಗಲು ತಕ್ಷಣದ ಸರ್ಕಾರಿ ಹಸ್ತಕ್ಷೇಪಕ್ಕೆ ಉದ್ಯಮದ ಮುಖಂಡರು ಆಗ್ರಹಿಸಿದ್ದಾರೆ.
ತಾಳೆ ಎಣ್ಣೆಯ ಆಮದು ಹೆಚ್ಚಳ
ಭಾರತವು ತನ್ನ ಒಟ್ಟು ಅಡುಗೆ ಎಣ್ಣೆಯ ಅಗತ್ಯದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ವಾತಾವರಣದಿಂದಾಗಿ ಹಡಗು ಸಂಚಾರದ ಹಾದಿಗಳು ಅಸ್ತವ್ಯಸ್ತಗೊಂಡಿದ್ದು, ಸರಕು ಸಾಗಣೆ ವೆಚ್ಚ (Freight charges) ಮತ್ತು ವಿಮಾ ಪ್ರೀಮಿಯಂ ದರಗಳು ಗಗನಕ್ಕೇರಿವೆ. ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SEA) ನೀಡಿರುವ ಮಾಹಿತಿಯ ಪ್ರಕಾರ, ತಾಳೆ ಎಣ್ಣೆಯ ಆಮದು ವೆಚ್ಚ ಪ್ರತಿ ಟನ್ಗೆ 105 ಡಾಲರ್ ಹಾಗೂ ಸೋಯಾಬೀನ್ ಎಣ್ಣೆಯ ವೆಚ್ಚ 80 ಡಾಲರ್ನಷ್ಟು ಹೆಚ್ಚಾಗಿದೆ. ಫೆಬ್ರವರಿ ಕೊನೆಯಿಂದ ಮೇ ಆರಂಭದವರೆಗೆ ಮುಂಬೈ ತಲುಪುವ ಎಣ್ಣೆಯ ಬೆಲೆಯಲ್ಲಿ ಸುಮಾರು 120 ಡಾಲರ್ಗಳಷ್ಟು ಏರಿಕೆ ಕಂಡುಬಂದಿದೆ.
ಕೇವಲ ಸಾಗಣೆ ವೆಚ್ಚ ಮಾತ್ರವಲ್ಲದೆ, ಅಡುಗೆ ಎಣ್ಣೆಯನ್ನು ಪ್ಯಾಕ್ ಮಾಡಲು ಬಳಸುವ ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ನಂತಹ ಪ್ಲಾಸ್ಟಿಕ್ ಕಚ್ಚಾ ವಸ್ತುಗಳ ಬೆಲೆಯೂ ಶೇ. 60 ರಷ್ಟು ಏರಿಕೆಯಾಗಿದೆ. ಪ್ಯಾಕೇಜಿಂಗ್ ವೆಚ್ಚವು ಒಟ್ಟು ಉತ್ಪನ್ನದ ಬೆಲೆಯ ಶೇ. 15 ರಿಂದ 25 ರಷ್ಟಿರುವುದರಿಂದ, ಇದು ನೇರವಾಗಿ ಚಿಲ್ಲರೆ ಮಾರಾಟ ದರದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಜೊತೆಗೆ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸುಮಾರು ಶೇ. 4.8 ರಷ್ಟು ಕುಸಿತ ಕಂಡಿರುವುದು ಆಮದುದಾರರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ವ್ಯಾಪಾರಿಗಳ ಲಾಭದ ಪ್ರಮಾಣ ಕುಸಿದಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಪ್ರಪಾತಕ್ಕೆ ಕುಸಿದ ರೂಪಾಯಿ ಮೌಲ್ಯ: ಇತಿಹಾಸದಲ್ಲೇ ಮೊದಲ ಬಾರಿಗೆ 95ರ ಗಡಿ ದಾಟಿದ ಡಾಲರ್ ಬೆಲೆ!
