ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಸೃಷ್ಟಿಯಾಗುವ ಭೀಕರ ವಾಯುಮಾಲಿನ್ಯದ (Air Pollution) ಬಿಕ್ಕಟ್ಟನ್ನು ಮೊದಲೇ ನಿಯಂತ್ರಿಸಲು ದೆಹಲಿ ಸರ್ಕಾರವು ಭರ್ಜರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅಪಾಯಕಾರಿ ಮಟ್ಟಕ್ಕೆ ತಲುಪದಂತೆ ತಡೆಯಲು ಈ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಇವು ನವೆಂಬರ್ 1 ರಿಂದ ಫೆಬ್ರವರಿ 28 ರವರೆಗೆ ಕಡ್ಡಾಯವಾಗಿ ಜಾರಿಯಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PUC ಇಲ್ಲದೇ ಇಂಧನ ಇಲ್ಲ
ಈ ನೂತನ ನಿಯಮಗಳಿಂದಾಗಿ ವಾಹನ ಸವಾರರು ಜಾಗರೂಕರಾಗಿರಬೇಕಾಗುತ್ತದೆ. ಪ್ರಮುಖವಾಗಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳಿಗೆ ಯಾವುದೇ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಸಿಗುವುದಿಲ್ಲ. ಇದರ ಜೊತೆಗೆ ಸಾರ್ವಜನಿಕರು ಹೆಚ್ಚಾಗಿ ಸಾರಿಗೆ ವ್ಯವಸ್ಥೆಯನ್ನು ಬಳಸಲಿ ಎಂಬ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳನ್ನು ಬಿಟ್ಟು ಉಳಿದೆಲ್ಲಾ ಪಾರ್ಕಿಂಗ್ ಸ್ಥಳಗಳ ಶುಲ್ಕವನ್ನು ದುಪ್ಪಟ್ಟು ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ಬೇರೆ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ಹಳೆಯ ವಾಹನಗಳ ಮೇಲೂ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ.
ಮತ್ತೊಂದೆಡೆ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ಮಹತ್ವದ ಸೂಚನೆ ನೀಡಲಾಗಿದೆ. ಇದರ ಅನ್ವಯ ಶೇ. 50 ರಷ್ಟು ನೌಕರರು ಮಾತ್ರ ಕಚೇರಿಗೆ ಬರಬೇಕಾಗಿದ್ದು, ಬಾಕಿ ಉಳಿದ ಸಿಬ್ಬಂದಿಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಇನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುವ ಜಾಗಗಳಲ್ಲಿ ಧೂಳು ಹರಡದಂತೆ ತಡೆಯಲು ‘ಆಂಟಿ-ಸ್ಮಾಗ್ ಗನ್’ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ. ಹಾಗೆಯೇ ಎಲ್ಲಾದರೂ ಕಸ ಮತ್ತು ತ್ಯಾಜ್ಯಗಳನ್ನು ಸುಡುತ್ತಿದ್ದರೆ ಅದನ್ನು ಪತ್ತೆಹಚ್ಚಲು ಡ್ರೋನ್ಗಳ ಮೂಲಕ ಕಣ್ಗಾವಲು ಇಡಲು ಸರ್ಕಾರ ಮುಂದಾಗಿದೆ. ಈ ಕಠಿಣ ನಿಯಮಗಳನ್ನು ಮೀರುವವರ ವಿರುದ್ಧ ಭಾರಿ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಇ-ಆಟೋ ಹೊಸ ನೋಂದಣಿಗೆ ಮಾತ್ರ ಗ್ರೀನ್ ಸಿಗ್ನಲ್
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ದೆಹಲಿಯಲ್ಲಿ ಕೇವಲ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಆಟೋ ರಿಕ್ಷಾಗಳ (ಇ-ಆಟೋ) ಹೊಸ ನೋಂದಣಿಗೆ ಮಾತ್ರ ಗ್ರೀನ್ ಸಿಗ್ನಲ್ ನೀಡಲು ನಿರ್ಧರಿಸಲಾಗಿದೆ. ಇದರ ಅನ್ವಯ, ಬರುವ 2027ರ ಜನವರಿ 1 ರಿಂದ ಯಾವುದೇ ಹೊಸ ಸಿಎನ್ಜಿ ಅಥವಾ ಡೀಸೆಲ್ ಆಟೋಗಳ ರಿಜಿಸ್ಟ್ರೇಷನ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗುತ್ತದೆ.
ಮಾಲಿನ್ಯ ರಹಿತ ರಾಜಧಾನಿ ನಿರ್ಮಾಣದ ಗುರಿ ಹೊಂದಿರುವ ದೆಹಲಿ ಸರ್ಕಾರದ ನೂತನ ಇವಿ (ಎಲೆಕ್ಟ್ರಿಕ್ ವಾಹನ) ಪಾಲಿಸಿಯ ಭಾಗವಾಗಿ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ.
ಹಂತ ಹಂತವಾಗಿ ಇವಿ ನಿಯಮ ಜಾರಿ ಹೊಸ ವರ್ಷದ ಆರಂಭದಿಂದ (ಜನವರಿ 1, 2027) ದೆಹಲಿಯಲ್ಲಿ ಕೇವಲ ಪರಿಸರಸ್ನೇಹಿ ಇ-ಆಟೋಗಳಿಗೆ ಮಾತ್ರ ನೋಂದಣಿ ಭಾಗ್ಯ ಸಿಗಲಿದೆ. ಈ ನಿಯಮವನ್ನು 2028ರ ವೇಳೆಗೆ ನೆರೆಹೊರೆಯ ಗುರುಗ್ರಾಮ್, ಫರಿದಾಬಾದ್, ನೋಯ್ಡಾ ಮತ್ತು ಸೋನಿಪತ್ ನಗರಗಳಿಗೂ ವಿಸ್ತರಿಸಲಾಗುತ್ತದೆ. ಇನ್ನುಳಿದ ಎನ್ಸಿಆರ್ (ರಾಷ್ಟ್ರೀಯ ರಾಜಧಾನಿ ವಲಯ) ಜಿಲ್ಲೆಗಳಲ್ಲಿ 2029 ರಿಂದ ಈ ಕಾನೂನು ಅನ್ವಯವಾಗಲಿದೆ. ಆಟೋಗಳಷ್ಟೇ ಅಲ್ಲದೆ, 2028ರ ಏಪ್ರಿಲ್ನಿಂದ ದೆಹಲಿಯಲ್ಲಿ ಹೊಸ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್ಗಳ ನೋಂದಣಿಗೂ ಬ್ರೇಕ್ ಬೀಳಲಿದ್ದು, ಕೇವಲ ಇವಿ ಟೂ-ವೀಲರ್ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಇದಲ್ಲದೆ, ಈ ವರ್ಷದ ಅಕ್ಟೋಬರ್ 1 ರಿಂದಲೇ ಅನ್ವಯವಾಗುವಂತೆ ಇಡೀ ದೆಹಲಿ-ಎನ್ಸಿಆರ್ ಭಾಗದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇರದ ಯಾವುದೇ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ತುಂಬಿಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಇ-ಆಟೋ ಖರೀದಿಗೆ ಭರ್ಜರಿ ಆಫರ್ ಮತ್ತು ಸಬ್ಸಿಡಿಗಳು
ವಾಹನ ಸವಾರರು ಮತ್ತು ಆಟೋ ಚಾಲಕರು ಇವಿ ವಾಹನಗಳತ್ತ ಮುಖ ಮಾಡಲು ದೆಹಲಿ ಸರ್ಕಾರ ಭಾರಿ ಹಣಕಾಸಿನ ನೆರವನ್ನು ಪ್ರಕಟಿಸಿದೆ:
- ಮೊದಲ ವರ್ಷದ ಸಬ್ಸಿಡಿ: ಹೊಸದಾಗಿ ಎಲೆಕ್ಟ್ರಿಕ್ ಆಟೋ ಕೊಳ್ಳುವವರಿಗೆ ಆರಂಭಿಕ ವರ್ಷದಲ್ಲಿ 50,000 ರೂ.ವರೆಗೂ ಸಬ್ಸಿಡಿ ಸಿಗಲಿದೆ. (ಇದು ಮುಂದಿನ ವರ್ಷಗಳಲ್ಲಿ ಕ್ರಮವಾಗಿ 40,000 ರೂ. ಹಾಗೂ 30,000 ರೂ.ಗೆ ಕಡಿತಗೊಳ್ಳಲಿದೆ).
- ಸ್ಕ್ರ್ಯಾಪೇಜ್ ಬೋನಸ್: ತಮ್ಮ ಹಳೆಯ ಸಿಎನ್ಜಿ ಆಟೋಗಳನ್ನು ಗುಜರಿಗೆ ಹಾಕಿ ಹೊಸ ಇ-ಆಟೋ ಖರೀದಿಸುವ ಚಾಲಕರಿಗೆ ಹೆಚ್ಚುವರಿಯಾಗಿ 25,000 ರೂ. ರಿಯಾಯಿತಿ ಸಿಗಲಿದೆ.
- ಶೂನ್ಯ ತೆರಿಗೆ: ದೆಹಲಿಯಲ್ಲಿ ನೋಂದಣಿಯಾಗುವ ಎಲ್ಲಾ ಇವಿ ವಾಹನಗಳಿಗೆ ಶೇ. 100 ರಷ್ಟು ರೋಡ್ ಟ್ಯಾಕ್ಸ್ (ರಸ್ತೆ ತೆರಿಗೆ) ಮತ್ತು ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
