ಬೆಂಗಳೂರು: ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ವಿಶೇಷ ಸಂವಾದಕ್ಕಾಗಿ ಕಾಮಿಕ್ ಕಾನ್ ವೇದಿಕೆಯಲ್ಲಿ ನಟ ಯಶ್ (Actor Yash) ಕಾಣಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದ್ದಾರೆ. ಚಿತ್ರದ ನಿರ್ದೇಶಕ ನಿತೇಶ್ ತಿವಾರಿ, ನಟ ರಣಬೀರ್ ಕಪೂರ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಈ ವಿಶೇಷ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಪ್ರಮುಖ ಪಾತ್ರವರ್ಗವನ್ನು ಅಧಿಕೃತವಾಗಿ ಪರಿಚಯಿಸಲಾಯಿತು. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಳ್ಳಲಿದ್ದಾರೆ.
ರಾವಣ ಪಾತ್ರದ ಅನುಭವ ಹಂಚಿಕೊಂಡ ನಟ
ಸಂವಾದದ ವೇಳೆ ಮಾತನಾಡಿದ ಯಶ್, ಭಾರತೀಯ ಪುರಾಣಗಳಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ಸಂಕೀರ್ಣ ಪಾತ್ರವಾಗಿರುವ ರಾವಣನಾಗಿ ನಟಿಸುತ್ತಿರುವ ತಮ್ಮ ಅನುಭವವನ್ನು ಹಂಚಿಕೊಂಡರು. ರಾವಣನ ಪಾತ್ರವನ್ನು ನಿರ್ವಹಿಸುವುದು ಜನರು ಅಂದುಕೊಂಡಿದ್ದಕ್ಕಿಂತಲೂ ತುಂಬಾ ಕಷ್ಟಕರವಾಗಿದೆ ಎಂದ ಅವರು, ಈ ಪಾತ್ರಕ್ಕಾಗಿ ಗಂಟೆಗಟ್ಟಲೆ ಮೇಕಪ್ ಮತ್ತು ಭಾರೀ ಉಡುಪುಗಳನ್ನು ಧರಿಸಬೇಕಾಗುವುದರಿಂದ ದೈಹಿಕವಾಗಿ ಸಾಕಷ್ಟು ಶ್ರಮಪಡಬೇಕಾಗುತ್ತದೆ ಎಂದು ವಿವರಿಸಿದರು. ಇದರೊಂದಿಗೆ ವಿಶುವಲ್ ಎಫೆಕ್ಟ್ಸ್ (VFX) ಮತ್ತು ಬೃಹತ್ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಎದುರಾಗುವ ತಾಂತ್ರಿಕ ಸವಾಲುಗಳನ್ನು ನಿಭಾಯಿಸುವುದು ಕೂಡ ಅಷ್ಟೇ ಸವಾಲಿನ ಕೆಲಸ ಎಂದಿದ್ದಾರೆ. ಈ ಇಡೀ ಪ್ರಕ್ರಿಯೆ ತುಂಬಾ ಕಷ್ಟಕರವಾಗಿದ್ದರೂ, ಒಂದು ಅದ್ಭುತ ಪಾತ್ರವನ್ನು ಮಾಡುತ್ತಿರುವುದು ಅಷ್ಟೇ ತೃಪ್ತಿ ನೀಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
.#Daddy's #Home is no longer a chant. It's a travel companion. From #Delhi to #ComicCon , it keeps showing up before @TheNameIsYash does.
— A Sharadhaa (@sharadasrinidhi) July 24, 2026
The internet's favourite soundtrack is officially following him everywhere. #August26 can't come soon enough.#Yash @toxicthemovie #ComicCon pic.twitter.com/EzmISC2kvI
ಇದೇ ವೇದಿಕೆಯಲ್ಲಿ ಯಶ್ ತಮ್ಮ ಸಿನಿಮಾ ಜರ್ನಿಯ ಬದಲಾವಣೆಯ ದಿನಗಳನ್ನು ನೆನಪಿಸಿಕೊಂಡರು. ಈ ಹಿಂದೆ ತಮ್ಮ ಚಿತ್ರಗಳ ಪ್ರಚಾರಕ್ಕಾಗಿ ತಾವೇ ಖುದ್ದಾಗಿ ಬೇರೆ ಬೇರೆ ಊರುಗಳಿಗೆ ಅಲೆಯುತ್ತಿದ್ದ ದಿನಗಳಿಂದ ಹಿಡಿದು, ಇಂದು ಭಾರತೀಯ ಚಿತ್ರರಂಗದ ಅತಿ ದೊಡ್ಡ ಸಿನಿಮಾವನ್ನು ಜಾಗತಿಕ ವೇದಿಕೆಯಲ್ಲಿ ಅಂತರರಾಷ್ಟ್ರೀಯ ಪ್ರೇಕ್ಷಕರ ಮುಂದೆ ಪ್ರತಿನಿಧಿಸುತ್ತಿರುವವರೆಗಿನ ಅವರ ಪ್ರಯಾಣವು ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಪ್ರಾದೇಶಿಕ ಚಿತ್ರರಂಗದಿಂದ ಜಾಗತಿಕ ಮಟ್ಟಕ್ಕೆ ಬೆಳೆದು ನಿಂತ ಅವರ ಸಾಧನೆಯನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ ಸಿನಿಮಾ
ಇನ್ನು ಕಾಮಿಕ್ ಕಾನ್ ಸಮಾರಂಭದಲ್ಲಿ ‘ರಾಮಾಯಣ’ ಚಿತ್ರದ ದೃಶ್ಯ ವೈಭವದ ಮೇಕಿಂಗ್ ಕುರಿತು ಹಂಚಿಕೊಂಡ ನಿರ್ಮಾಪಕ ನಮಿತ್ ಮಲ್ಹೋತ್ರಾ, ಹಾಲೀವುಡ್ನ ಬ್ಲಾಕ್ಬಸ್ಟರ್ ‘ಅವತಾರ್’ ಚಿತ್ರದ ಗುಣಮಟ್ಟಕ್ಕೆ ಸರಿಸಾಟಿಯಾಗುವಂತಹ ವಿಶುವಲ್ ಎಫೆಕ್ಟ್ಸ್ಗಳನ್ನು ನೀಡಲು ನಮ್ಮ ಇಡೀ ತಂಡ ಶ್ರಮಿಸುತ್ತಿದೆ ಎಂದು ತಿಳಿಸಿದರು. ಭಾರತೀಯ ಮಹಾಕಾವ್ಯದ ಕಥೆ ಮತ್ತು ಭಾವನೆಗಳಿಗೆ ಧಕ್ಕೆ ಬಾರದಂತೆ ಅಂತರರಾಷ್ಟ್ರೀಯ ಮಟ್ಟದ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಸಿನಿಮಾವನ್ನು ತೆರೆಗೆ ತರುತ್ತಿರುವುದಾಗಿ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಭಾರಿ ತಾರಾಗಣ, ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು ಅದ್ಧೂರಿ ಮೇಕಿಂಗ್ನಿಂದಾಗಿ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ‘ರಾಮಾಯಣ’ ಸದ್ಯ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಸಿನಿಮಾವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: TOXIC: ‘ತಬಾಹಿ’ ಬೆನ್ನಲ್ಲೇ ‘ಟಾಕ್ಸಿಕ್’ನಿಂದ ಮತ್ತೊಂದು ಧಮಾಕಾ; ಯೂಟ್ಯೂಬ್ನಲ್ಲಿ ಸೌಂಡ್ ಮಾಡ್ತಿದೆ ‘ಮನಮೋಹಕ’ ಗೀತೆ
