TOP NEWS

Cauvery: ಮೇಕೆದಾಟು ವಿವಾದಕ್ಕೆ ಸಂಸತ್ತಿನಲ್ಲಿ ತಮಿಳುನಾಡು ಗದ್ದಲ; ಜುಲೈ 22 ರಂದು ದೆಹಲಿಯಲ್ಲಿ ಮಹತ್ವದ CWMA ಸಭೆ

Cauvery Storm in Parliament Over Mekedatu DMK MPs Storm the Well of Lok Sabha as Speaker Rejects Motion

ನವದೆಹಲಿ: ಕಾವೇರಿ ನದಿಗೆ (Cauvery) ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಜಲಾಶಯ ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಧ್ವನಿ ಎತ್ತಲು DMK ಪಕ್ಷ ಸಜ್ಜಾಗಿದೆ. ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದರಿಂದ, ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ಡಿಎಂಕೆ ಈ ಕಾವೇರಿ ಮತ್ತು ಮೇಕೆದಾಟು ವಿಷಯವನ್ನು ಸಂಸತ್ತಿನಲ್ಲಿ ಪ್ರಮುಖವಾಗಿ ಕೈಗೆತ್ತಿಕೊಳ್ಳುತ್ತಿದೆ.

ಕರ್ನಾಟಕ ನೀರು ಬಿಡುತ್ತಿಲ್ಲ ಎಂದು ಆರೋಪ

ಈ ಕುರಿತು ಶನಿವಾರ ಮಾಹಿತಿ ನೀಡಿರುವ ಡಿಎಂಕೆ ರಾಜ್ಯಸಭಾ ಸಂಸದ ತಿರುಚಿ ಶಿವ, ಕಾವೇರಿ ನೀರು ಹಂಚಿಕೆ ನಿಯಮಗಳ ಪ್ರಕಾರ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಸೂಕ್ತವಾಗಿ ನೀರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಮತ್ತು ಮೇಕೆದಾಟು ವಿವಾದವನ್ನು ಬಗೆಹರಿಸಲು ತಕ್ಷಣವೇ ಮತ್ತೊಂದು ಹೊಸ ನ್ಯಾಯಾಧಿಕರಣವನ್ನು (Tribunal) ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆ ನಡೆಸಲು ಈಗಾಗಲೇ ನಿಲುವಳಿ ಸೂಚನೆಯ (Adjournment Motion) ನೋಟಿಸ್ ನೀಡಲಾಗಿದ್ದು, ನಿಯಮಿತ ಕಲಾಪಗಳನ್ನು ಬದಿಗಿಟ್ಟು ತಮಿಳುನಾಡಿನ ರೈತರ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಿ ನಿರ್ಣಯ ಅಂಗೀಕರಿಸಬೇಕು ಎಂದು ಡಿಎಂಕೆ ಪಟ್ಟು ಹಿಡಿದಿದೆ.

ರಾಮನಗರ ಜಿಲ್ಲೆಯ ಕನಕಪುರ ಭಾಗದಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸೇರುವ ಮೇಕೆದಾಟು ಎಂಬಲ್ಲಿ ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಜಲಾಶಯ ನಿರ್ಮಿಸಲು ಕರ್ನಾಟಕ ಯೋಜಿಸಿದೆ. ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಮತ್ತು 400 ಮೆಗಾವಾಟ್ ಜಲವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಕರ್ನಾಟಕ ಸರ್ಕಾರ ಮೊದಲಿನಿಂದಲೂ ವಾದಿಸುತ್ತಿದೆ. ಆದರೆ, ಈ ಅಣೆಕಟ್ಟು ನಿರ್ಮಾಣದಿಂದ ಕಾವೇರಿ ನದಿಯ ಕೆಳಭಾಗಕ್ಕೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿ, ತಮ್ಮ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂಬುದು ತಮಿಳುನಾಡಿನ ಆತಂಕವಾಗಿದೆ. ಇದೇ ಕಾರಣಕ್ಕೆ ಕಳೆದ ತಿಂಗಳು ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಕೇಂದ್ರವನ್ನು ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನೂ ಪಾಸ್ ಮಾಡಲಾಗಿತ್ತು. ಕರ್ನಾಟಕದ ಈ ಏಕಪಕ್ಷೀಯ ನಿರ್ಧಾರವು ಕಾವೇರಿ ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಆರೋಪಿಸಿದೆ.

ಕ್ಚೇತ್ರ ಮರುವಿಂಗಡಣೆಗೂ ವಿರೋಧ

ಇದೇ ವೇಳೆ, ದೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಪ್ರಕ್ರಿಯೆಯನ್ನೂ ಡಿಎಂಕೆ ಬಲವಾಗಿ ವಿರೋಧಿಸಿದೆ. ಈ ವಿಷಯದಲ್ಲಿ ಡಿಎಂಕೆ ನಿಲುವು ಬದಲಿಸಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಸಂಸದ ತಿರುಚಿ ಶಿವ, ದಕ್ಷಿಣ ಭಾರತದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಯಾವುದೇ ಮರುವಿಂಗಡಣೆಯನ್ನು ತಮ್ಮ ಪಕ್ಷ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದಕ್ಷಿಣದ ರಾಜ್ಯಗಳಿಗೆ ಈ ಮರುವಿಂಗಡಣೆಯಿಂದ ಲೋಕಸಭೆಯಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾಗಿ ರಾಜಕೀಯ ಧ್ವನಿ ಕ್ಷೀಣಿಸಲಿದೆ ಎಂಬ ಕಳವಳ ಅವರದ್ದಾಗಿದೆ. ಕೇಂದ್ರ ಸರ್ಕಾರವು ಈ ಮುಂಗಾರು ಅಧಿವೇಶನದಲ್ಲೇ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸುವ ಸಂವಿಧಾನದ 131ನೇ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಸಾಧ್ಯತೆಯಿದ್ದು, ಪ್ರಸ್ತುತ ರೂಪದಲ್ಲಿರುವ ಈ ಮಸೂದೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಡಿಎಂಕೆ ಎಚ್ಚರಿಸಿದೆ.

ಇದನ್ನೂ ಓದಿ:  ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 38 ಕ್ಕೆ ಏರಿಕೆ: ಸಂಸತ್ತಿನಲ್ಲಿ ಮಹತ್ವದ ತಿದ್ದುಪಡಿ ವಿಧೇಯಕ ಮಂಡನೆ

Leave a Reply

Your email address will not be published. Required fields are marked *