BK Hariprasad: ಉಳಿತಾಯದ ಬಗ್ಗೆ ಮೋದಿ ಮಾತು, ಬಿಕೆ ಹರಿಪ್ರಸಾದ್‌ ಗರಂ

BK Hariprasad slams narendra modi over his limit usage statement

ನವದೆಹಲಿ: ಕೇಂದ್ರ ಸರ್ಕಾರದ ಇಂಧನ ನೀತಿ ಹಾಗೂ ಇತ್ತೀಚಿನ ಪರೀಕ್ಷಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಜನರಿಗೆ ಮಿತವ್ಯಯದ ಪಾಠ ಮಾಡುವ ಪ್ರಧಾನಿಯವರು ಮೊದಲು ಅದನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಲಿ ಎಂದು ಅವರು ಚಾಟಿ ಬೀಸಿದ್ದಾರೆ.

ಮೋದಿ ವಿರುದ್ಧ ವ್ಯಂಗ್ಯದ ವಾಗ್ದಾಳಿ ದೆಹಲಿಯಲ್ಲಿ ಮಾತನಾಡಿದ ಹರಿಪ್ರಸಾದ್, ಇಂಧನ ಉಳಿತಾಯದ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿರುವ ಪ್ರಧಾನಿಯವರ ನಡೆಯನ್ನು ಟೀಕಿಸಿದರು. “ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂದು ಜನರಿಗೆ ಹೇಳುವ ಮೊದಲು, ಪ್ರಧಾನಿಯವರು ತಮ್ಮ ವಿದೇಶ ಪ್ರವಾಸಗಳು ಹಾಗೂ ಚುನಾವಣಾ ರ್‍ಯಾಲಿಗಳ ಮೇಲೆ ನಿಯಂತ್ರಣ ಹೇರಲಿ. ಜನರಿಗೆ ‘ವರ್ಕ್ ಫ್ರಮ್ ಹೋಮ್’ ಸಲಹೆ ನೀಡುವ ಬದಲು, ಮೋದಿ ಅವರೇ ಮೊದಲು ಮನೆಯಿಂದ ಕೆಲಸ ಮಾಡುವುದನ್ನು (Work from home) ಶುರು ಮಾಡಲಿ” ಎಂದು ತಿರುಗೇಟು ನೀಡಿದರು. ಅಲ್ಲದೆ, ಸರ್ಕಾರದ ಬೆಂಬಲಿಗರನ್ನು ಗುರಿಯಾಗಿಸಿ ಕಟುವಾದ ಶಬ್ದಗಳಿಂದ ಟೀಕಿಸಿದ ಅವರು, ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀಟ್ ಅಕ್ರಮ: ದೇಶದ ದೊಡ್ಡ ಹಗರಣ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕಿಡಿಕಾರಿದ ಹರಿಪ್ರಸಾದ್, ಇದನ್ನು ದೇಶದ ಇತಿಹಾಸದಲ್ಲೇ ಕಾಣದ ಅತಿದೊಡ್ಡ ಭ್ರಷ್ಟಾಚಾರ ಎಂದು ಕರೆದರು. “ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದು ಭರವಸೆ ನೀಡಿದ್ದ ಪ್ರಧಾನಿಯವರು, ಇಂದು ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಕಪ್ಪು ಪ್ರಶ್ನೆ ಪತ್ರಿಕೆಗಳನ್ನು ತಡೆಯಲು ಅಸಮರ್ಥರಾಗಿದ್ದಾರೆ. ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳುವ ಕೆಲಸ” ಎಂದು ಆಕ್ರೋಶ ಹೊರಹಾಕಿದರು.

ಶಿಕ್ಷಣ ಸಚಿವರ ಪದತ್ಯಾಗಕ್ಕೆ ಆಗ್ರಹ ಕಳೆದ ಒಂದು ದಶಕದಲ್ಲಿ ಸುಮಾರು 40ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿರುವುದು ಕೇಂದ್ರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆರೋಪಿಸಿದರು. ಈ ಎಲ್ಲಾ ಅಕ್ರಮಗಳ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಡುಗೆ ಎಣ್ಣೆ ಆಮದು ವೆಚ್ಚ ಏರಿಕೆ, ಕೇಂದ್ರಕ್ಕೆ ಮನವಿ

Leave a Reply

Your email address will not be published. Required fields are marked *