TOP NEWS

BJP: ಚುನಾವಣಾ ರಾಜಕೀಯಕ್ಕೆ ಜೆ.ಸಿ. ಮಾಧುಸ್ವಾಮಿ ರೀ-ಎಂಟ್ರಿ; ಚಿಕ್ಕನಾಯಕನಹಳ್ಳಿಯಿಂದಲೇ ಸ್ಪರ್ಧೆ ಖಚಿತ

BJP ex minister jc Madhu swamy important statement

ತುಮಕೂರು: ತುಮಕೂರು ಜಿಲ್ಲೆಯ ರಾಜಕೀಯದ ದೃಢ ನಿರ್ಧಾರಗಳಿಗೆ ಹೆಸರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (BJP) ಅವರು ತಮ್ಮ ಮುಂದಿನ ನಡೆಯ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುವುದು ನಿಶ್ಚಿತ ಎಂದು ಅವರು ಗುಡುಗಿದ್ದಾರೆ. “ನಾನು ಸ್ಪರ್ಧಿಸುವುದು ಗ್ಯಾರಂಟಿ, ಇದರಲ್ಲಿ ಯಾರಿಗೂ ಅನುಮಾನ ಬೇಡ” ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಯಾವ ಪಕ್ಷದ ಹಂಗು ಬೇಕಿಲ್ಲ

ಈ ಕುರಿತು ಮಾತನಾಡಿದ ಅವರು, ಕಣಕ್ಕಿಳಿಯಲು ಇಂತಹುದೇ ಪಕ್ಷದ ಹಂಗಿರಬೇಕು ಎಂದೇನಿಲ್ಲ, ಚುನಾವಣಾ ಆಯೋಗದಲ್ಲಿ ಆ ರೀತಿಯ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಈ ಹೇಳಿಕೆಯು ಅವರು ಬಿಜೆಪಿಯಿಂದ ಹೊರಬಂದು ಪಕ್ಷೇತರವಾಗಿ ಅಥವಾ ಮತ್ಯಾವುದೋ ಪಕ್ಷದಿಂದ ಸ್ಪರ್ಧಿಸಬಹುದು ಎಂಬ ಸೂಚನೆಯನ್ನು ನೀಡಿದೆ. ಇನ್ನು ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ ಅವರು, ತಮ್ಮ ತವರು ಕ್ಷೇತ್ರವಾದ ಚಿಕ್ಕನಾಯಕನಹಳ್ಳಿಯಿಂದಲೇ ಮತಬೇಟೆ ನಡೆಸುವುದಾಗಿ ಘೋಷಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಮಾಧುಸ್ವಾಮಿ ಅವರಿಗೆ ಎಂಎಲ್‌ಸಿ ಸ್ಥಾನದ ಭರವಸೆ ನೀಡಲಾಗಿತ್ತು ಎನ್ನಲಾಗಿತ್ತು. ಆದರೆ ಅದು ಈಡೇರದಿರುವುದು ಅವರ ಮುನಿಸಿಗೆ ಮುಖ್ಯ ಕಾರಣವಾಗಿದೆ. ಇದರ ಪರಿಣಾಮವಾಗಿ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಯಡಿಯೂರಪ್ಪ ಅಭಿಮಾನೋತ್ಸವದಿಂದ ಅವರು ದೂರ ಉಳಿದಿದ್ದರು. ಸ್ವತಃ ಬಿ.ವೈ. ವಿಜಯೇಂದ್ರ ಅವರು ಆಹ್ವಾನ ನೀಡಿದ್ದರೂ ಕಾರ್ಯಕ್ರಮಕ್ಕೆ ಹೋಗದಿರುವುದು ಹಾಗೂ ಕೇಂದ್ರ ಸಚಿವ ಅಮಿತ್ ಶಾ ಭೇಟಿಯ ಸಮಯದಲ್ಲೂ ಗೈರಾಗಿರುವುದು ಹೈಕಮಾಂಡ್ ವಿರುದ್ಧದ ಅಸಮಾಧಾನವನ್ನು ಎತ್ತಿ ತೋರಿಸುತ್ತಿದೆ. ಮಾಧುಸ್ವಾಮಿ ಅವರ ಈ ಬಂಡಾಯದ ನಡೆ ತುಮಕೂರು ಬಿಜೆಪಿ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜಕಾರಣ ಹೊಸ ತಿರುವು ಪಡೆಯುವುದು ಖಚಿತವಾಗಿದೆ.

ಇದನ್ನೂ ಓದಿ: ಹೊಸ ರೂಪದ ಕೇಸರಿ ಪೇಟಾ ಧರಿಸುವಂತಿಲ್ಲ; ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳ ಮಹತ್ವದ ಹೇಳಿಕೆ

Leave a Reply

Your email address will not be published. Required fields are marked *