TOP NEWS

Marriage: ಮದುವೆಗೆ ಜಾತಕವಷ್ಟೇ ಸಾಲದು: ಹಸೆಮಣೆ ಏರುವ ಮುನ್ನ ಈ 6 ವಿಷಯಗಳ ಬಗ್ಗೆ ಚರ್ಚಿಸಿ

Beyond Kundali Matching Essential Topics to Discuss with Your Partner Before Marriage

ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ಮದುವೆ (Marriage) ನಿಶ್ಚಯಿಸುವ ಮುನ್ನ ವಧು-ವರರ ಜಾತಕ, ನಾಡಿ ಹಾಗೂ ಗಣಗಳ ಹೊಂದಾಣಿಕೆ ನೋಡುವುದು ಬಹುಮುಖ್ಯವಾದ ಆಚರಣೆಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳು ಹಾಗೂ ಗ್ರಹಗತಿಗಳ ಆಧಾರದ ಮೇಲೆ ಜೋಡಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ, ಜಾತಕದಲ್ಲಿ ೩೬ ಗುಣಗಳು ಸಂಪೂರ್ಣವಾಗಿ ಒಪ್ಪiಯಾಗಿ, ಗುರುಬಲ ಹಾಗೂ ಶುಕ್ರದೆಸೆ ಎಷ್ಟೇ ಅತ್ಯುತ್ತಮವಾಗಿದ್ದರೂ, ಇಬ್ಬರ ಮನಸ್ಸುಗಳು ಪರಸ್ಪರ ಬೆರೆಯದಿದ್ದರೆ ಆ ದಾಂಪತ್ಯ ಜೀವನ ಗಟ್ಟಿಯಾಗಿ ಉಳಿಯಲು ಸಾಧ್ಯವಿಲ್ಲ.

ಕುಂಡಲಿ ಅಥವಾ ಜಾತಕದ ಹೊಂದಾಣಿಕೆಯಷ್ಟೇ ಅಲ್ಲದೆ, ಮನಸ್ಸುಗಳ ಮಿಲನವೂ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರಗಳ ಜೊತೆಗೆ ಭವಿಷ್ಯದ ಸಂಗಾತಿಯೊಂದಿಗೆ ಮುಕ್ತವಾಗಿ ಮಾತುಕತೆ ನಡೆಸುವುದು ದಾಂಪತ್ಯದ ಯಶಸ್ಸಿಗೆ ಬುನಾದಿಯಾಗಿದೆ. ಹಾಗಾದರೆ, ಹಸೆಮಣೆ ಏರುವ ಮುನ್ನ ನಿಮ್ಮ ಭಾವೀ ಸಂಗಾತಿಯೊಂದಿಗೆ ಯಾವೆಲ್ಲಾ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಮದುವೆಗೆ (Marriage) ನಿಮ್ಮ ನಿಜವಾದ ಒಪ್ಪಿಗೆ ಇದೆಯಾ?

ನೀವು ಕೇಳಬೇಕಾದ ಅತ್ಯಂತ ಮೊದಲ ಮತ್ತು ಪ್ರಮುಖ ಪ್ರಶ್ನೆ ಎಂದರೆ ಈ ಮದುವೆಗೆ ಅವರ ಸಂಪೂರ್ಣ ಒಪ್ಪಿಗೆಯಿದೆಯೇ ಎಂಬುದು. ಯಾವುದೇ ಕೌಟುಂಬಿಕ ಅಥವಾ ಬಾಹ್ಯ ಒತ್ತಡವಿಲ್ಲದೆ, ಇಬ್ಬರ ಸ್ವಯಂ ಇಚ್ಛೆಯ ಮೇರೆಗೆ ಮದುವೆ ನಡೆಯುತ್ತಿದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲದವರೆಗೆ ಗಟ್ಟಿಯಾಗಿ ನಿಲ್ಲುತ್ತದೆ. ಮುಂದೆ ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟ-ನಷ್ಟಗಳು ಎದುರಾದರೂ, “ನಮ್ಮಿಬ್ಬರ ಒಪ್ಪಿಗೆಯಿಂದಲೇ ಈ ಜೀವನವನ್ನು ಆರಿಸಿಕೊಂಡಿದ್ದೇವೆ” ಎಂಬ ಸತ್ಯ ಆ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಲು ದೊಡ್ಡ ಶಕ್ತಿಯಾಗುತ್ತದೆ.

ಭವಿಷ್ಯದ ಗುರಿಗಳು ಮತ್ತು ಕನಸುಗಳ ಬಗ್ಗೆ ಚರ್ಚೆ

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ವೈಯಕ್ತಿಕ ಕನಸುಗಳು ಹಾಗೂ ವೃತ್ತಿಜೀವನದ ಗುರಿಗಳಿರುತ್ತವೆ. ಹೀಗಾಗಿ, ಭವಿಷ್ಯದ ಕುರಿತು ಅವರ ಆಕಾಂಕ್ಷೆಗಳೇನು ಹಾಗೂ ಆ ಕನಸುಗಳನ್ನು ಈಡೇರಿಸಿಕೊಳ್ಳುವಲ್ಲಿ ನಾವು ಪರಸ್ಪರ ಹೇಗೆ ಬೆಂಬಲವಾಗಿ ನಿಲ್ಲಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದ ನೀವು ಮತ್ತು ನಿಮ್ಮ ಸಂಗಾತಿ ಜೀವನದಲ್ಲಿ ಒಂದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದೀರಾ ಎಂಬ ಸ್ಪಷ್ಟತೆ ಸಿಗುತ್ತದೆ.

ಎರಡೂ ಕುಟುಂಬಗಳೊಂದಿಗೆ ಉತ್ತಮ ಬಾಂಧವ್ಯ

ಮದುವೆಯೆಂದರೆ ಕೇವಲ ಇಬ್ಬರು ವ್ಯಕ್ತಿಗಳ ಮಿಲನವಲ್ಲ, ಬದಲಿಗೆ ಎರಡು ಕುಟುಂಬಗಳ ಒಮ್ಮುಖ. ಮದುವೆಯಾದ ನಂತರ ಇಬ್ಬರ ಕುಟುಂಬವೂ ಒಂದೇ ಆಗುತ್ತದೆ ಮತ್ತು ಎರಡೂ ಕಡೆಯವರಿಗೆ ಸಮಾನವಾದ ಗೌರವ ನೀಡುವುದು ಅತ್ಯಂತ ಮುಖ್ಯ. ಭವಿಷ್ಯದಲ್ಲಿ ಕುಟುಂಬದ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ಮುಂಚಿತವಾಗಿ ಮಾತುಕತೆ ನಡೆಸುವುದು ಉತ್ತಮ ಕುಟುಂಬ ನಿರ್ವಹಣೆಗೆ ದಾರಿ ಮಾಡಿಕೊಡುತ್ತದೆ.

ಹಣಕಾಸಿನ ನಿರ್ವಹಣೆ ಮತ್ತು ಆರ್ಥಿಕ ಯೋಜನೆ

ದಾಂಪತ್ಯ ಜೀವನದ ಯಶಸ್ಸಿನಲ್ಲಿ ಆರ್ಥಿಕ ವಿಚಾರಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಹಣದ ವಿಷಯದಲ್ಲಿ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಮೂಡಿ, ಅದೇ ಕಾರಣಕ್ಕೆ ಬಾಂಧವ್ಯ ಹಳಿದುಹೋದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ, ಭವಿಷ್ಯದ ಉಳಿತಾಯ, ಜವಾಬ್ದಾರಿಗಳು, ಸಾಲಗಳು ಹಾಗೂ ದೈನಂದಿನ ಖರ್ಚು-ವೆಚ್ಚಗಳ ಬಗ್ಗೆ ಮದುವೆಗೆ ಮುನ್ನವೇ ಸ್ಪಷ್ಟ ಒಪ್ಪಂದಕ್ಕೆ ಬರುವುದು ಜಾಣತನ.

ಮಕ್ಕಳ ಬಗ್ಗೆ ಮುಕ್ತ ಮಾತುಕತೆ

ಕುಟುಂಬ ವಿಸ್ತರಣೆ ಮತ್ತು ಮಕ್ಕಳ ವಿಚಾರದ ಬಗ್ಗೆ ದಂಪತಿಗಳ ನಡುವೆ ಯಾವುದೇ ಮುಜುಗರವಿಲ್ಲದೆ ಮುಕ್ತ ಚರ್ಚೆ ಇರಬೇಕು. ಮದುವೆಯಾದ ತಕ್ಷಣವೇ ಮಕ್ಕಳು ಬೇಕೇ ಅಥವಾ ಕೆಲವು ವರ್ಷಗಳ ಅಂತರವಿರಬೇಕೇ ಎಂಬ ವಿಷಯದಲ್ಲಿ ಮೊದಲೇ ಪರಸ್ಪರರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಭವಿಷ್ಯದ ಮನಸ್ತಾಪಗಳನ್ನು ತಪ್ಪಿಸುತ್ತದೆ.

ಆರೋಗ್ಯ, ಜೀವನಶೈಲಿ ಮತ್ತು ಪರಸ್ಪರ ಸ್ವಾತಂತ್ರ್ಯ

ಪರಸ್ಪರರ ಆರೋಗ್ಯದ ಇತಿಹಾಸ, ದೈನಂದಿನ ಜೀವನಶೈಲಿ ಹಾಗೂ ಹವ್ಯಾಸಗಳ ಬಗ್ಗೆ ಚರ್ಚಿಸುವುದು ಆರೋಗ್ಯಕರ ದಾಂಪತ್ಯಕ್ಕೆ ನಾಂದಿ ಹಾಡುತ್ತದೆ. ಯಾವುದೇ ಭಿನ್ನಾಭಿಪ್ರಾಯಗಳು ಬಂದಾಗ ಕೋಪಗೊಳ್ಳದೆ, ಕುಳಿತು ಶಾಂತವಾಗಿ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದರೊಂದಿಗೆ, ಸಂಗಾತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮತ್ತು ಅವರ ನಂಬಿಕೆಗಳಿಗೆ ಗೌರವ ನೀಡುವುದರ ಬಗ್ಗೆಯೂ ಸ್ಪಷ್ಟತೆ ಇರಬೇಕು.

ಪ್ರತಿ ದಾಂಪತ್ಯದಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆ ಅಥವಾ ಇನ್ನಾವುದೇ ವಿಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳುವುದರಿಂದ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು. ಇಂತಹ ಪಾರದರ್ಶಕ ಮಾತುಕತೆಗಳು ನವಜೋಡಿಯ ಭವಿಷ್ಯದ ಅಡಿಪಾಯವನ್ನು ಮತ್ತಷ್ಟು ಭದ್ರಪಡಿಸುತ್ತವೆ.

ಇದನ್ನೂ ಓದಿ: ಚಳಿಗಾಲದಲ್ಲೂ ನಿಮ್ಮ ದೇಹವನ್ನು ಸ್ಲಿಮ್ & ಫಿಟ್ ಆಗಿಟ್ಟುಕೊಳ್ಳುವುದು ಹೇಗೆ?

Leave a Reply

Your email address will not be published. Required fields are marked *