TOP NEWS

Jayam Ravi: ವಜ್ರದ ಹಾರ ಕಳ್ಳತನ ಆರೋಪ; ತಮಿಳು ನಟ ಜಯಂ ರವಿ ಮನೆಯಲ್ಲಿ ಕೆಲಸದವರ ಅಕ್ರಮ ಬಂಧನ?

Actor jayam ravi accused of locking maid in house

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (Jayam Ravi) ಅವರ ಚೆನ್ನೈನ ಇಂಜಂಬಾಕ್ಕಂನಲ್ಲಿರುವ ಐಷಾರಾಮಿ ನಿವಾಸ ಈಗ ಹೊಸದೊಂದು ಗಂಭೀರ ಕಾನೂನು ವಿವಾದಕ್ಕೆ ಸಿಲುಕಿದೆ. ನಟನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಹಾರ ಕಳ್ಳತನವಾಗಿರುವ ಬೆನ್ನಲ್ಲೇ, ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕಾನೂನುಬಾಹಿರವಾಗಿ ಕೂಡಿಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸುವಂತಾಗಿದೆ. ಇತ್ತೀಚೆಗಷ್ಟೇ ಕೌಟುಂಬಿಕ ಕಲಹದಿಂದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಜಯಂ ರವಿ, ಈಗ ಮತ್ತೊಂದು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಏನಿದು ಘಟನೆ?

ಮಾಧ್ಯಮ ವರದಿಗಳ ಪ್ರಕಾರ, ಜಯಂ ರವಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಅಪ್ರಾಪ್ತ ಬಾಲಕ ಸೋಮವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ರಾತ್ರಿಯಾದರೂ ಅವರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ದೂರು ನೀಡಿದ್ದಾರೆ. ಈ ತುರ್ತು ಮಾಹಿತಿಯ ಆಧಾರದ ಮೇಲೆ ನೀಲಂಕರೈ ಪೊಲೀಸರು ತಕ್ಷಣವೇ ನಟನ ನಿವಾಸಕ್ಕೆ ಧಾವಿಸಿದಾಗ, ಆ ಮೂವರನ್ನು ಮನೆಯ ಆವರಣದಲ್ಲೇ ತಡೆದು ಇಟ್ಟಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಪೊಲೀಸರು ನಟನ ಕಡೆಯವರಿಗೆ ಕಡಕ್ ಎಚ್ಚರಿಕೆ ನೀಡಿದ್ದು, ಮನೆಯಲ್ಲಿ ಕಳ್ಳತನ ನಡೆದಿದ್ದರೆ ಕಾನೂನುಬದ್ಧವಾಗಿ ಠಾಣೆಗೆ ಬಂದು ದೂರು ನೀಡಬೇಕೇ ಹೊರತು, ಈ ರೀತಿ ಖಾಸಗಿಯಾಗಿ ಯಾರನ್ನೂ ಕೂಡಿಹಾಕುವ ಅಥವಾ ಬಂಧಿಸಿ ವಿಚಾರಣೆ ನಡೆಸುವ ಹಕ್ಕು ಯಾರಿಗೂ ಇಲ್ಲ ಎಂದು ಖಡಾಸಂಡಿತವಾಗಿ ಹೇಳಿದ್ದಾರೆ. ಬಳಿಕ ಪೊಲೀಸರು ಆ ಮೂವರನ್ನು ಅಲ್ಲಿಂದ ಸುರಕ್ಷಿತವಾಗಿ ಬಿಡುಗಡೆಗೊಳಿಸಿ ಕಳುಹಿಸಿಕೊಟ್ಟಿದ್ದಾರೆ.

ಮ್ಯಾನೇಜರ್ನಿಂದ 10 ಲಕ್ಷ ರೂ. ಕಳ್ಳತನದ ದೂರು: ಪೊಲೀಸ್ ಕಾರ್ಯಾಚರಣೆಯ ನಂತರ ಜಯಂ ರವಿ ಅವರ ಮ್ಯಾನೇಜರ್ ಠಾಣೆಗೆ ಬಂದು ಅಧಿಕೃತವಾಗಿ ಕಳ್ಳತನದ ದೂರು ದಾಖಲಿಸಿದ್ದಾರೆ. ನಟನ ಮನೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಮತ್ತು 40 ಸಾವಿರ ರೂಪಾಯಿ ನಗದು ಹಣ ನಾಪತ್ತೆಯಾಗಿದ್ದು, ಇದನ್ನು ಅಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರೇ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಶಂಕಿಸಲಾಗಿದೆ. ಈ ಘಟನೆ ನಡೆದ ಅವಧಿಯಲ್ಲಿ ನಟ ಜಯಂ ರವಿ ಅವರು ಮನೆಯಲ್ಲಿದ್ದರೇ ಇಲ್ಲವೇ ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ ಮತ್ತು ಅವರ ಕಚೇರಿಯಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ.

ಕಳೆದ ಕೆಲವು ಸಮಯದಿಂದ ಜಯಂ ರವಿ ಅವರ ವೈಯಕ್ತಿಕ ಜೀವನ ಸಾರ್ವಜನಿಕವಾಗಿ ಭಾರಿ ಚರ್ಚೆಯಲ್ಲಿದೆ. 2009ರಲ್ಲಿ ಆರತಿ ಅವರನ್ನು ಮದುವೆಯಾಗಿದ್ದ ಜಯಂ ರವಿ, ಸೆಪ್ಟೆಂಬರ್ 2024ರಲ್ಲಿ ವಿಚ್ಛೇದನ ಘೋಷಿಸಿದ್ದರು. ತದನಂತರ ಇತ್ತೀಚೆಗಷ್ಟೇ ಮೇ 2026ರಲ್ಲಿ ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರಿಟ್ಟಿದ್ದ ಅವರು, ಕೋರ್ಟ್‌ನಿಂದ ಅಧಿಕೃತವಾಗಿ ವಿಚ್ಛೇದನ ಸಿಗುವವರೆಗೂ ತಾನು ಯಾವುದೇ ಹೊಸ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ಘೋಷಿಸಿದ್ದರು. ಈ ಎಲ್ಲಾ ಕೌಟುಂಬಿಕ ಬಿಕ್ಕಟ್ಟುಗಳ ನಡುವೆಯೇ ಈಗ ಅವರ ಮನೆಯಲ್ಲಿ ನಡೆದಿರುವ ಕಳ್ಳತನ ಹಾಗೂ ಕೆಲಸಗಾರರ ಬಂಧನದ ವಿಷಯ ತಮಿಳುನಾಡು ಮತ್ತು ಕರ್ನಾಟಕದ ಸಿನಿವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಮಲಯಾಳಂ ‘ಅಮ್ಮ’ ಸಂಘಟನೆಯಲ್ಲಿ ತಾರಕಕ್ಕೇರಿದ ಭಿನ್ನಮತ: ಹಗರಣಗಳ ತನಿಖೆಗೆ ಒತ್ತಾಯಿಸಿ ಅಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮೆನನ್ ದಿಢೀರ್ ರಾಜೀನಾಮೆ!

Leave a Reply

Your email address will not be published. Required fields are marked *