TOP NEWS

AIDSO: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ AIDSO ವಿದ್ಯಾರ್ಥಿಗಳು: ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ

AIDSO Students Writers and Retired Professors Stage Protest at Ramaswamy Circle in Mysuru Backing ASHA Workers Minimum Wage Demand

ಮೈಸೂರು: ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (AIDSO) ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳು, ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಫ್ರೀಡಂ ಪಾರ್ಕ್ ಧರಣಿಗೆ ವಿದ್ಯಾರ್ಥಿ ಸಂಘಟನೆಯ ಬೆಂಬಲ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ AIDSO ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಅವರು, ಕಳೆದ 12 ದಿನಗಳಿಂದ ಮಳೆ, ಚಳಿ ಮತ್ತು ಬಿಸಿಲನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದು ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಹೇಳಿದರು. ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣದಿನದ ಸಂದರ್ಭದಲ್ಲಿ ಮಕ್ಕಳೊಂದಿಗೆ ಹೋರಾಟಕ್ಕಿಳಿದಿರುವ ಆಶಾ ತಾಯಂದಿರ ಧರಣಿಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಸುಮಾರು 4.5 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸುವ ರಾಜ್ಯ ಸರ್ಕಾರ, ಆಶಾ ಕಾರ್ಯಕರ್ತೆಯರ 15,000 ರೂಪಾಯಿ ಕನಿಷ್ಠ ವೇತನದ ಬೇಡಿಕೆಯನ್ನು ಈಡೇರಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರಿಸುವ ಬದಲು ಮುಖ್ಯಮಂತ್ರಿ ಸೇರಿದಂತೆ ಸಚಿವರು ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದ ಅವರು, ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡುತ್ತಿರುವ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಸಾಹಿತಿಗಳು ಮತ್ತು ಚಿಂತಕರಿಂದ ಸರ್ಕಾರದ ನಡೆಯ ಖಂಡನೆ

ಹಿರಿಯ ಸಾಹಿತಿ ನಾ. ದಿವಾಕರ್ ಮಾತನಾಡಿ, ದುಡಿಯುವ ವರ್ಗ ತಮ್ಮ ವೇತನದ ಹಕ್ಕಿಗಾಗಿ ಹೋರಾಟ ನಡೆಸಿದರೆ ಅದನ್ನು ಬ್ಲಾಕ್‌ಮೇಲ್ ಎಂದು ಕರೆಯುವುದು ಬೇಜವಾಬ್ದಾರಿಯ ಮಾತಾಗಿದ್ದು, ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಮನೆ ಮನೆಗೆ ತೆರಳಿ ಮಾನವೀಯ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು. ಅವರಿಗೆ ಕೂಡಲೇ ವೈಜ್ಞಾನಿಕ ಮಾಸಿಕ ವೇತನವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಕಾಳಚೆನ್ನೆಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರು ಏಕಾಏಕಿ ಮುಷ್ಕರ ಆರಂಭಿಸಿಲ್ಲ, ಹಲವು ಬಾರಿ ಶಾಂತಿಯುತವಾಗಿ ಮನವಿ ಸಲ್ಲಿಸಿದ್ದಾರೆ. ಹಿಂದೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ ಹಾಗೂ ಅವರ ಸೇವೆಯಿಂದ ಹಲವು ಪ್ರಯೋಜನ ಪಡೆದುಕೊಳ್ಳುತ್ತಿದ್ದರೂ ತಾಯಿಹೃದಯ ತೋರದಿರುವುದು ವಿಷಾದನೀಯ ಎಂದರು. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಡಾ. ಇ. ರತಿ ರಾವ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಬೀದಿಬೀದಿ ಅಲೆದು ಹಲವರ ಜೀವ ಉಳಿಸಿದ ಆಶಾ ಕಾರ್ಯಕರ್ತೆಯರಿಗೆ ಕೇಳುತ್ತಿರುವ 15,000 ರೂಪಾಯಿ ಕಡಿಮೆಯಾಗಿದ್ದು, ಅವರ ಶ್ರಮಕ್ಕೆ ತಕ್ಕಂತೆ 40,000 ರೂಪಾಯಿ ವೇತನ ನಿಗದಿಯಾಗಬೇಕು ಎಂದು ಆಗ್ರಹಿಸಿದರು.

ದುಡಿಮೆಗೆ ತಕ್ಕ ವೇತನ ಪಡೆಯುವುದು ಮೂಲಭೂತ ಹಕ್ಕಾಗಿದ್ದು, ಕನಿಷ್ಠ ಬೇಡಿಕೆಯನ್ನೂ ಈಡೇರಿಸದೆ ಸರ್ಕಾರ ತಪ್ಪು ಧೋರಣೆ ಅನುಸರಿಸುತ್ತಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಹೇಮಲತಾ ಎಚ್.ಎಂ. ಹೇಳಿದರು. AIDSO ಜಿಲ್ಲಾ ಕಾರ್ಯದರ್ಶಿ ನಿತಿನ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ಲತಾ ಬಿದ್ದಪ್ಪ, ಶ್ರೀದೇವಿ, ನಿವೃತ್ತ ಪ್ರಾಂಶುಪಾಲೆ ರೂಪರಾವ್, ರಂಗನಿರ್ದೇಶಕಿ ಸುಮತಿ ಕೆ.ಆರ್., ಸಾಮಾಜಿಕ ಹೋರಾಟಗಾರ ನಂದ ಹಳೆಮನೆ, AIDSO ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ತುಳುಜಾ ರಾಮ್, ಪ್ರೀತಿ, ಪದಾಧಿಕಾರಿಗಳಾದ ಸ್ವಾತಿ, ಹೇಮಲತಾ, ಚಂದ್ರಿಕಾ, ಅಂಜಲಿ, ನಂದೀಶ್, ದೀಕ್ಷಾ, ಜ್ಞಾನೇಶ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಹೆಜ್ಜಾಲ ಯಾರ್ಡ್ ತುರ್ತು ಕಾಮಗಾರಿ: ಡಿಸೆಂಬರ್ ಮೊದಲ ವಾರದಲ್ಲಿ ಈ ರೈಲುಗಳು ರದ್ದು

Leave a Reply

Your email address will not be published. Required fields are marked *