ಬೆಂಗಳೂರು: ಕನ್ನಡ ಚಿತ್ರರಂಗದ (Sandalwood) ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರ ಕಾಂಬಿನೇಷನ್ ಎಂದರೆ ಸಿನಿಪ್ರಿಯರಲ್ಲಿ ಸಹಜವಾಗಿಯೇ ಭಾರಿ ಕುತೂಹಲವಿರುತ್ತದೆ. ‘ದಿ ವಿಲನ್’ ಚಿತ್ರದ ನಂತರ ಈ ಸೂಪರ್ ಹಿಟ್ ಜೋಡಿ ಮತ್ತೊಮ್ಮೆ ಹೊಸ ಸಿನಿಮಾಗಾಗಿ ಒಂದಾಗುತ್ತಿರುವುದು ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇದೀಗ ಈ ಬಹುನಿರೀಕ್ಷಿತ ಚಿತ್ರದ ಮುಹೂರ್ತ ಸಮಾರಂಭದ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಪ್ರೇಮ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದು, “ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಕೃಪೆಯಿಂದ ಒಂದು ಭವ್ಯ ಆರಂಭ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ. ಸುದೀಪ್ ಅವರ ವಿಶಿಷ್ಟ ಅಭಿನಯ ಶೈಲಿ ಮತ್ತು ಪ್ರೇಮ್ ಅವರ ಭಾವನಾತ್ಮಕ ಹಾಗೂ ಮಾಸ್ ನಿರೂಪಣೆಯ ಜುಗಲ್ಬಂದಿ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಈ ಹಿಂದೆ ‘ದಿ ವಿಲನ್’ ಸಿನಿಮಾದಲ್ಲಿ ಸುದೀಪ್ ಅವರನ್ನು ವಿಭಿನ್ನ ಗೆಟಪ್ನಲ್ಲಿ ತೋರಿಸಿದ್ದ ಪ್ರೇಮ್, ಈ ಬಾರಿ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಮಾಸ್ ಬದಲಿಗೆ ಫ್ಯಾಮಿಲಿ ಡ್ರಾಮಾ ಕಥಾಹಂದರ?
ಸಾಮಾನ್ಯವಾಗಿ ಜೋಗಿ ಪ್ರೇಮ್ ಅವರ ಸಿನಿಮಾಗಳೆಂದರೆ ಅದ್ಧೂರಿ ಸೆಟ್ಗಳು, ಭರ್ಜರಿ ಆಕ್ಷನ್ ಮತ್ತು ಪಕ್ಕಾ ಮಾಸ್ ಅಂಶಗಳು ಪ್ರೇಕ್ಷಕರ ಕಣ್ಣಮುಂದೆ ಬರುತ್ತವೆ. ಆದರೆ ಈ ಹೊಸ ಚಿತ್ರದಲ್ಲಿ ಪ್ರೇಮ್ ತಮ್ಮ ಎಂದಿನ ಶೈಲಿಗಿಂತ ವಿಭಿನ್ನ ಹಾದಿಯನ್ನು ಹಿಡಿದಿರುವಂತೆ ಕಾಣುತ್ತಿದೆ. ಚಿತ್ರದ ಪೋಸ್ಟರ್ ಮೂಲಕ ಸುಳಿವು ನೀಡಿರುವ ಪ್ರಕಾರ, ಈ ಬಾರಿಯ ಕಥಾವಸ್ತು ಸಂಪೂರ್ಣವಾಗಿ ಕೌಟುಂಬಿಕ ಸಂಬಂಧಗಳು ಹಾಗೂ ಇಂದಿನ ತಲೆಮಾರಿನ (Gen Z) ಯುವಜನತೆಯ ಭಾವನೆಗಳ ಸುತ್ತ ಸಾಗಲಿದೆ ಎನ್ನಲಾಗಿದೆ. ಸುದೀಪ್ ಅವರ ಮಾಸ್ ಇಮೇಜ್ ಹಾಗೂ ಪ್ರೇಮ್ ಅವರ ಹೃದಯಸ್ಪರ್ಶಿ ಕಥನ ಶೈಲಿ ಒಂದಾಗಿ, ಪ್ರೇಕ್ಷಕರಿಗೆ ಒಂದು ಅಪರೂಪದ ಫ್ಯಾಮಿಲಿ ಡ್ರಾಮಾವನ್ನು ಉಣಬಡಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಅಧಿಕೃತ ಮಾಹಿತಿಗಾಗಿ ಕಾಯುತ್ತಿರುವ ಅಭಿಮಾನಿಗಳು
ಸದ್ಯ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ತಮ್ಮ ಕೈಯಲ್ಲಿರುವ ಇತರ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ, ಈ ಹೊಸ ಪ್ರಾಜೆಕ್ಟ್ ಕುರಿತಾದ ಚರ್ಚೆಗಳು ಚಿತ್ರರಂಗದಲ್ಲಿ ಜೋರಾಗಿ ನಡೆಯುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ, ಈ ಇಬ್ಬರು ದಿಗ್ಗಜರ ಸಮಾಗಮ ಸ್ಯಾಂಡಲ್ವುಡ್ಗೆ ಮತ್ತೊಂದು ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಮೂಡಿಸಿದೆ. ಮುಹೂರ್ತ ಕಾರ್ಯಕ್ರಮದ ಜೊತೆಗೆ ಚಿತ್ರದ ಶೀರ್ಷಿಕೆ, ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಕುರಿತ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ದುಲ್ಕರ್ ಸಲ್ಮಾನ್ ಕಮ್ಬ್ಯಾಕ್: ಭರ್ಜರಿ ಕಲೆಕ್ಷನ್ ಕಾಣುತ್ತಿರುವ ‘ಆಕಾಶಂ ಲೋ ಓಕ ತಾರ
