TOP NEWS

Gold Price: ಚಿನ್ನದ ಸಾಲ ಪಡೆದವರಿಗೆ ಶಾಕ್: ಬೆಲೆ ಕುಸಿತದಿಂದ ಬ್ಯಾಂಕ್‌ಗಳಿಂದ ನೋಟಿಸ್

Gold Loan Borrowers Get Bank Notices as Falling Gold Price Breach LTV Limits Auction Warning Issued

ಬೆಂಗಳೂರು: ಚಿನ್ನದ ದರದಲ್ಲಿ ಕಂಡುಬಂದಿರುವ ಭಾರಿ ಇಳಿಕೆಯು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು (Gold Price) ಸಾಲ ಪಡೆದಿರುವ ಗ್ರಾಹಕರಿಗೆ ಹೊಸ ಸಂಕಷ್ಟ ತಂದೊಡ್ಡಿದೆ. ಅಡವಿಟ್ಟ ಚಿನ್ನದ ಮೌಲ್ಯ ಕಡಿಮೆಯಾಗಿರುವುದರಿಂದ ನಷ್ಟದ ಆತಂಕ ಎದುರಿಸುತ್ತಿರುವ ಬ್ಯಾಂಕ್‌ಗಳು, ಇದೀಗ ಸಾಲಗಾರರನ್ನು ಸಂಪರ್ಕಿಸಿ ಹೆಚ್ಚುವರಿ ಮೊತ್ತವನ್ನು ಪಾವತಿಸುವಂತೆ ಸೂಚನೆ ನೀಡುತ್ತಿವೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಹಣ ಪಾವತಿಸಲು ವಿಫಲವಾದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಾವಳಿಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ಹರಾಜು ಹಾಕುವುದಾಗಿ ನೋಟಿಸ್ ಮೂಲಕ ಎಚ್ಚರಿಕೆ ನೀಡುತ್ತಿವೆ.

ದರ ಕುಸಿತದಿಂದ ಬ್ಯಾಂಕ್‌ಗಳಿಗೆ ನಷ್ಟದ ಭೀತಿ ಕಳೆದ ಆರೇಳು ತಿಂಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ ₹1.75 ಲಕ್ಷದಿಂದ ₹1.85 ಲಕ್ಷದವರೆಗೆ ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ಅವಧಿಯಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದವರನ್ನು ಬ್ಯಾಂಕ್‌ಗಳು ಈಗ ಹುಡುಕಿ ಸಂಪರ್ಕಿಸುತ್ತಿವೆ. ಕಳೆದ ಮೂರು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಕುಸಿತ ಕಂಡುಬಂದಿದ್ದು, ಕೇವಲ ಮೂರು ತಿಂಗಳ ಅಂತರದಲ್ಲಿ 10 ಗ್ರಾಂ ಚಿನ್ನದ ದರ ಬರೋಬ್ಬರಿ ₹30,000ದಷ್ಟು ಇಳಿಕೆಯಾಗಿದೆ. ಈ ಅನಿರೀಕ್ಷಿತ ಬೆಲೆ ಇಳಿಕೆಯಿಂದಾಗಿ ಬ್ಯಾಂಕ್‌ಗಳು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದು, ಗ್ರಾಹಕರಿಗೂ ಇದೀಗ ಆತಂಕ ಶುರುವಾಗಿದೆ.

ಎಲ್‌ಟಿವಿ ಮಿತಿ ಮೀರಿದ್ದರಿಂದ ನೋಟಿಸ್ ಜಾರಿ ಸಾಲದ ಮೊತ್ತ ಮತ್ತು ಅಡವಿಟ್ಟ ಚಿನ್ನದ ಮೌಲ್ಯದ ಅನುಪಾತ, ಅಂದರೆ ‘ಲೋನ್ ಟು ವ್ಯಾಲ್ಯೂ’ (ಎಲ್‌ಟಿವಿ) ನಿಗದಿತ ಮಿತಿಯನ್ನು ಮೀರಿದೆ. ಈ ಕಾರಣದಿಂದಾಗಿ ವಿಶೇಷವಾಗಿ ಖಾಸಗಿ ಬ್ಯಾಂಕ್‌ಗಳು ಚಿನ್ನದ ಸಾಲ ಪಡೆದ ಗ್ರಾಹಕರಿಗೆ ಹೆಚ್ಚುವರಿ ಹಣವನ್ನು ಜಮೆ ಮಾಡುವಂತೆ ಅಥವಾ ಹೆಚ್ಚುವರಿ ಚಿನ್ನವನ್ನು ಅಡವಿಡುವಂತೆ ಸೂಚಿಸುತ್ತಿವೆ. ಅಗತ್ಯ ಮಾರ್ಜಿನ್ ಮೊತ್ತವನ್ನು ತುಂಬುವ ಮೂಲಕ ಸಾಲದ ಖಾತೆಯನ್ನು ಕ್ರಮಬದ್ಧಗೊಳಿಸಿಕೊಳ್ಳಬೇಕು, ಇಲ್ಲವಾದರೆ ಆರ್‌ಬಿಐ ನಿಯಮದಂತೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಬ್ಯಾಂಕ್‌ಗಳು ತಿಳಿಸಿವೆ. ಗ್ರಾಹಕರು ವಿಳಂಬ ಮಾಡಿದರೆ ನಷ್ಟ ಎದುರಾಗಬಹುದು ಎಂಬ ಲೆಕ್ಕಾಚಾರದಲ್ಲಿ ಬ್ಯಾಂಕ್‌ಗಳು ಈ ಕ್ರಮಕ್ಕೆ ಮುಂದಾಗಿವೆ.

ಸಾಲ ಮತ್ತು ಚಿನ್ನದ ಮೌಲ್ಯದ ಲೆಕ್ಕಾಚಾರ ಹೇಗಿದೆ? ಉದಾಹರಣೆಗೆ, ಚಿನ್ನದ ದರ ₹1.85 ಲಕ್ಷ ಇದ್ದ ಸಂದರ್ಭದಲ್ಲಿ ಗ್ರಾಹಕರೊಬ್ಬರು ₹5 ಲಕ್ಷ ಮೌಲ್ಯದ ಚಿನ್ನ ಅಡವಿಟ್ಟು ₹3.75 ಲಕ್ಷದಿಂದ ₹4 ಲಕ್ಷದವರೆಗೆ ಸಾಲ ಪಡೆದಿದ್ದರೆ, ಈಗಿನ ದರ ಕುಸಿತದಿಂದ ಆ ಚಿನ್ನದ ಮೌಲ್ಯವೇ ₹3.75 ಲಕ್ಷಕ್ಕೆ ಇಳಿದಿದೆ. ಅಂದರೆ, ಅಡವಿಟ್ಟ ಚಿನ್ನದ ಬೆಲೆಗಿಂತ ಸಾಲದ ಮೊತ್ತವೇ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೆರಡು ತಿಂಗಳಲ್ಲಿ ಚಿನ್ನದ ದರ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದು, ಗ್ರಾಹಕರು ಕೂಡಲೇ ಮಾರ್ಜಿನ್ ಹಣ ಪಾವತಿಸಿ ತಮ್ಮ ಒಡವೆಗಳನ್ನು ಹರಾಜಿನಿಂದ ರಕ್ಷಿಸಿಕೊಳ್ಳುವಂತೆ ಬ್ಯಾಂಕ್‌ಗಳು ಸಲಹೆ ನೀಡಿವೆ.

ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ: ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹11,000ಕ್ಕೆ ಇಳಿಯುವ ಸಾಧ್ಯತೆ!

Leave a Reply

Your email address will not be published. Required fields are marked *