ಬೆಂಗಳೂರು: ಚಿನ್ನದ ದರದಲ್ಲಿ ಸತತ ಇಳಿಕೆ (Gold Price) ಕಂಡುಬರುತ್ತಿರುವುದು ಬಂಗಾರ ಪ್ರಿಯರು ಮತ್ತು ಆಭರಣ ಖರೀದಿದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಇದೇ ಪ್ರವೃತ್ತಿ ಮುಂದುವರಿದರೆ ಭಾರತೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,000ರ ಮಟ್ಟಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞ ಶ್ಯಾಮ್ ಸುಂದರ್ ಅಭಿಪ್ರಾಯಪಟ್ಟಿದ್ದಾರೆ. ನ್ಯೂಸ್ 18 ತಮಿಳುನಾಡು ವಾಹಿನಿಯ ‘ದಿ ಪ್ರಾಫಿಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಗಾರದ ದರ ಕುಸಿತದ ಹಿಂದಿನ ಜಾಗತಿಕ ಹಾಗೂ ದೇಶೀಯ ಕಾರಣಗಳನ್ನು ವಿವರಿಸಿದ್ದಾರೆ.
₹11,000ಕ್ಕೆ ಇಳಿಯುತ್ತಾ ಪ್ರತಿ ಗ್ರಾಂ ಚಿನ್ನದ ದರ? ಈ ಹಿಂದೆ ದೇಶದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಆಭರಣಗಳು ಪ್ರತಿ ಗ್ರಾಂಗೆ ₹15,000 ದಿಂದ ₹16,000 ಹಾಗೂ 10 ಗ್ರಾಂಗೆ ₹1.20 ಲಕ್ಷದಿಂದ ₹1.28 ಲಕ್ಷದವರೆಗೆ ಮಾರಾಟವಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ದರ ಕ್ರಮೇಣ ಇಳಿಯುತ್ತಿದೆ. ಈ ಕುರಿತು ವಿಶ್ಲೇಷಿಸಿದ ಶ್ಯಾಮ್ ಸುಂದರ್, “ಚಿನ್ನದ ಬೆಲೆ ಎಷ್ಟರಮಟ್ಟಿಗೆ ಕುಸಿಯಬಹುದು ಎಂದು ನಿಖರವಾಗಿ ಅಂದಾಜಿಸುವುದು ಕಷ್ಟ. ಆದರೂ, ಪ್ರಸ್ತುತ ಇರುವ ಅಂತರರಾಷ್ಟ್ರೀಯ ಆರ್ಥಿಕ ಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹11,000 ರಿಂದ ₹11,500 ಹಾಗೂ 10 ಗ್ರಾಂಗೆ ₹88,000 ದಿಂದ ₹92,000ರ ಆಸುಪಾಸಿಗೆ ಇಳಿಯುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.
ಡಾಲರ್ ಮೌಲ್ಯ ವೃದ್ಧಿ ಮತ್ತು ಬಡ್ಡಿದರ ಏರಿಕೆಯ ಒತ್ತಡ ಚಿನ್ನದ ಬೆಲೆ ಇಳಿಕೆಗೆ ಅಮೆರಿಕದ ಆರ್ಥಿಕ ನೀತಿಗಳು ಪ್ರಮುಖ ಕಾರಣವಾಗಿವೆ. 2025ರ ಅಕ್ಟೋಬರ್‌ನಲ್ಲಿ 98ರಷ್ಟಿದ್ದ ಯುಎಸ್ ಡಾಲರ್ ಸೂಚ್ಯಂಕ ಈಗ 103.5ಕ್ಕೆ ಜಿಗಿದಿದೆ. ಇದರ ಜೊತೆಗೆ, ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಮುಂದಿನ ಸಭೆಗಳಲ್ಲಿ ಬಡ್ಡಿದರವನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆ ಬಲವಾಗಿದೆ. ಡಾಲರ್ ಬಲವರ್ಧನೆ ಮತ್ತು ಬಡ್ಡಿದರ ಏರಿಕೆಯ ನಿರೀಕ್ಷೆಗಳು ಚಿನ್ನದ ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಹೇರುತ್ತಿವೆ ಎಂದು ತಜ್ಞರು ಹೇಳಿದ್ದಾರೆ.
ಜಾಗತಿಕ ಬಿಕ್ಕಟ್ಟುಗಳ ಶಮನ ಮತ್ತು ಲಾಭ ಗಳಿಕೆ ಕಳೆದ ಕೆಲವು ವರ್ಷಗಳಲ್ಲಿ 2020ರ ಕೋವಿಡ್ ಸಾಂಕ್ರಾಮಿಕ, 2022ರಲ್ಲಿ ಶುರುವಾದ ರಷ್ಯಾ-ಉಕ್ರೇನ್ ಯುದ್ಧ, ಅಮೆರಿಕದ ಕಠಿಣ ಸುಂಕ ನೀತಿ ಹಾಗೂ ಮಧ್ಯಪ್ರಾಚ್ಯದ ಉದ್ವಿಗ್ನತೆಗಳಿಂದಾಗಿ ಚಿನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಆದರೆ, ಮುಂದಿನ ಆರು ತಿಂಗಳ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸುವ ಯಾವುದೇ ಹೊಸ ಬಿಕ್ಕಟ್ಟುಗಳು ಎದುರಾಗುವ ಲಕ್ಷಣಗಳಿಲ್ಲ. ಹೀಗಾಗಿ, ಕಡಿಮೆ ದರದಲ್ಲಿ ಚಿನ್ನ ಖರೀದಿಸಿದ್ದ ದೊಡ್ಡ ಹೂಡಿಕೆದಾರರು ಗರಿಷ್ಠ ಬೆಲೆಯಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಮಟ್ಟದ ಭೌಗೋಳಿಕ ಬಿಕ್ಕಟ್ಟು ಸಂಭವಿಸದ ಹೊರತು ಸದ್ಯಕ್ಕೆ ಚಿನ್ನ ಮತ್ತೆ ದಾಖಲೆಯ ಎತ್ತರಕ್ಕೆ ಏರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಭಾರತೀಯ ಮಾರುಕಟ್ಟೆಯ ಮೇಲೆ ತಡವಾಗಿ ಬಿದ್ದ ಪರಿಣಾಮ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳ ಹಿಂದೆಯೇ ಬಂಗಾರದ ದರ ಇಳಿಯಲಾರಂಭಿಸಿದ್ದರೂ, ಭಾರತದಲ್ಲಿ ಅದರ ಪರಿಣಾಮ ತಕ್ಷಣಕ್ಕೆ ಕಾಣಿಸಿರಲಿಲ್ಲ. ಭಾರತವು ತನ್ನ ಚಿನ್ನ ಮತ್ತು ಕಚ್ಚಾ ತೈಲದ ಬಹುಪಾಲು ಅಗತ್ಯಗಳಿಗೆ ಆಮದನ್ನೇ ಅವಲಂಬಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ $115ಕ್ಕೆ ಏರಿಕೆಯಾಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ 90ರಿಂದ 96ಕ್ಕೆ ಕುಸಿದಿರುವುದು ಆಮದು ವೆಚ್ಚವನ್ನು ದುಬಾರಿಯಾಗಿಸಿತ್ತು. ಈ ಕಾರಣದಿಂದ ಆರಂಭದಲ್ಲಿ ಬೆಲೆ ಇಳಿಕೆಯ ಲಾಭ ಸಿಗದಿದ್ದರೂ, ಈಗ ಕ್ರಮೇಣ ದೇಶೀಯ ಮಾರುಕಟ್ಟೆಯಲ್ಲೂ ದರ ತಗ್ಗುತ್ತಿದೆ.
ಆಭರಣಕ್ಕಿಂತ ಡಿಜಿಟಲ್ ಹೂಡಿಕೆ ಲಾಭದಾಯಕ ಭೌತಿಕವಾಗಿ ಚಿನ್ನ ಅಥವಾ ಆಭರಣಗಳನ್ನು ಖರೀದಿಸುವಾಗ ಜಿಎಸ್‌ಟಿ (GST), ಮೇಕಿಂಗ್ ಚಾರ್ಜ್, ವೇಸ್ಟೇಜ್ ಹಾಗೂ ಖರೀದಿ-ಮಾರಾಟ ದರಗಳ ವ್ಯತ್ಯಾಸದಿಂದಾಗಿ ಹೂಡಿಕೆದಾರರಿಗೆ ಸಿಗುವ ನಿವ್ವಳ ಲಾಭ ಕಡಿಮೆಯಾಗುತ್ತದೆ. ಆದ್ದರಿಂದ, ಕೇವಲ ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸಲು ಬಯಸುವವರು ‘ಗೋಲ್ಡ್ ಇಟಿಎಫ್’ (Gold ETF) ಅಥವಾ ‘ಗೋಲ್ಡ್ ಮ್ಯೂಚುಯಲ್ ಫಂಡ್’ಗಳತ್ತ ಮುಖ ಮಾಡುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಒಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಇಳಿಯುವ ನಿರೀಕ್ಷೆಯಿರುವುದರಿಂದ ಬಂಗಾರ ಖರೀದಿಸಲು ಇದು ಸಕಾಲವಾಗಿದೆ.
ಇದನ್ನೂ ಓದಿ: ದಾಖಲೆ ಮಟ್ಟದಿಂದ ಚಿನ್ನದ ಬೆಲೆ ಭಾರಿ ಇಳಿಕೆ: ಆದರೂ ಆಭರಣ ಮಳಿಗೆಗಳತ್ತ ಸುಳಿಯದ ಗ್ರಾಹಕರು! ಕಾರಣವೇನು?
