ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ'(Namma Metro) ತೀವ್ರ ಹಣಕಾಸು ವೆಚ್ಚದ ಹೊರೆಯಿಂದಾಗಿ ಮತ್ತೊಮ್ಮೆ ಪ್ರಯಾಣಿಕರ ಟಿಕೆಟ್ (Ticket Price) ದರವನ್ನು ಹೆಚ್ಚಿಸುವ ಒತ್ತಡಕ್ಕೆ ಸಿಲುಕಿದೆ. ಇದರಿಂದಾಗಿ ನಗರದ ನಿತ್ಯ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ರೂಪಾಯಿ ಮೌಲ್ಯ ಕುಸಿತ, ಸಾಲದ ಮೇಲಿನ ಬಡ್ಡಿ ಹೊರೆ ಹಾಗೂ ವಿದೇಶಿ ವಿನಿಮಯ ನಷ್ಟದಿಂದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಅನಿವಾರ್ಯವಾಗಿ ದರ ಪರಿಷ್ಕರಣೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಶೇಕಡಾ 5ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ದರ ನಿಗದಿ ಸಮಿತಿಯ (FFC) ಮಾರ್ಗಸೂಚಿಗಳ ಪ್ರಕಾರ, ಪ್ರತಿ ವರ್ಷ ಗರಿಷ್ಠ ಶೇಕಡಾ 5ರ ಮಿತಿಯಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಈ ನಿಯಮದಂತೆ ಬಿಎಂಆರ್‌ಸಿಎಲ್ ಮುಂಬರುವ ದಿನಗಳಲ್ಲಿ ಮೆಟ್ರೋ ಟಿಕೆಟ್ ದರವನ್ನು ಶೇ. 5ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಈ ಹಿಂದೆ ಫೆಬ್ರವರಿ 9, 2026ರಂದು ಕೂಡ ಇದೇ ಮಾದರಿಯಲ್ಲಿ ಶೇ. 5ರಷ್ಟು, ಅಂದರೆ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿವರೆಗೆ ಟಿಕೆಟ್ ದರವನ್ನು ಏರಿಕೆ ಮಾಡಲಾಗಿತ್ತು. ಮುಂದಿನ ವರ್ಷವೂ ಅದೇ ಪ್ರಮಾಣದಲ್ಲಿ ದರ ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ಆದಾಯಕ್ಕಿಂತ ಸಾಲದ ವೆಚ್ಚವೇ ಅಧಿಕ, ಒಂದೇ ವರ್ಷದಲ್ಲಿ ಭಾರಿ ಏರಿಕೆ ಬಿಎಂಆರ್‌ಸಿಎಲ್‌ನ ಹಣಕಾಸು ವೆಚ್ಚವು ಕೇವಲ ಒಂದೇ ವರ್ಷದಲ್ಲಿ ಸುಮಾರು ಶೇ. 220ರಷ್ಟು (ನಿಖರವಾಗಿ ಶೇ. 219.66) ಹೆಚ್ಚಳವಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ₹560.91 ಕೋಟಿ ರೂಪಾಯಿಗಳಷ್ಟಿದ್ದ ಹಣಕಾಸು ವೆಚ್ಚವು, 2025-26ನೇ ಸಾಲಿನಲ್ಲಿ ಬರೋಬ್ಬರಿ ₹1,793.03 ಕೋಟಿಗೆ ಜಿಗಿದಿದೆ. ಆದರೆ, 2025-26ನೇ ಸಾಲಿನಲ್ಲಿ ನಿಗಮಕ್ಕೆ ಬಂದಿರುವ ಒಟ್ಟು ಆದಾಯ ₹1,624.62 ಕೋಟಿ ಮಾತ್ರ. ರೂಪಾಯಿ ಮೌಲ್ಯದ ಕುಸಿತದಿಂದಾಗಿ ನಿಗಮದ ಗಳಿಕೆಗಿಂತ ವೆಚ್ಚವೇ ಹೆಚ್ಚಾಗಿರುವುದು ದರ ಏರಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಿದೆ.
ಸಾಲದ ಪ್ರಮಾಣ ಏರಿಕೆ, ಕೇಂದ್ರದ ನೆರವಿಗೆ ರಾಜ್ಯದ ಮನವಿ ಮಾರ್ಚ್ 2028ರ ವೇಳೆಗೆ ಬಿಎಂಆರ್‌ಸಿಎಲ್‌ನ ಒಟ್ಟು ಬಾಕಿ ಸಾಲದ ಮೊತ್ತವು ₹56,087.49 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಸಾಲದ ವಿನಿಮಯ ದರ ನಷ್ಟ ಹಾಗೂ ಭದ್ರತಾ ವೆಚ್ಚಗಳನ್ನು ಕೇಂದ್ರ ಸರ್ಕಾರವೂ ಹಂಚಿಕೊಳ್ಳಬೇಕು ಮತ್ತು ಹೆಡ್ಜಿಂಗ್ ವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ವಿಶೇಷವೆಂದರೆ, ದರ ಏರಿಕೆಯ ನಡುವೆಯೂ 2025-26ನೇ ಸಾಲಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೇ. 12.42ರಷ್ಟು ವೃದ್ಧಿಯಾಗಿದ್ದು, ಟಿಕೆಟ್ ಮಾರಾಟದ ಆದಾಯವೂ ಶೇ. 49ರಷ್ಟು ಏರಿಕೆಯಾಗಿ ₹1,125 ಕೋಟಿಗೆ ತಲುಪಿದೆ.
ಇದನ್ನೂ ಓದಿ: ಬಸವಣ್ಣ, ಗಾಂಧೀಜಿ ಅವಹೇಳನ ಆರೋಪ: ರವಿ ಹಂಜ್, ಅಡ್ಡಾಂಡ ಕಾರ್ಯಪ್ಪ ಗಡಿಪಾರಿಗೆ ಆಗ್ರಹ
