ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP Protest) ) ವತಿಯಿಂದ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನಾ ರ್ಯಾಲಿಗೂ ಮುನ್ನವೇ ರಾಜಧಾನಿಯಲ್ಲಿ ತೀವ್ರ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಬಿಗಿಪಟ್ಟು ಮುಂದುವರಿದಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಸಿಜೆಪಿಯ ಪ್ರಮುಖ ಸಂಘಟಕರಾದ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಹಾಗೂ ಅಶೋತ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಐಸಾ ಸಂಘಟನೆಯ ನೇಹಾ ಬೋರಾ ಸೇರಿದಂತೆ ಹಲವು ಪ್ರಮುಖ ರಾಜಕೀಯ ಹಾಗೂ ವಿದ್ಯಾರ್ಥಿ ನಾಯಕರನ್ನು ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುವುದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಜಂತರ್ ಮಂತರ್ನಲ್ಲಿ 40 ಸಾವಿರ ಪೊಲೀಸರು
ಯೋಜಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಪ್ರದೇಶವನ್ನು ದೆಹಲಿ ಪೊಲೀಸರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡಿವೆ. ಸುಮಾರು 40 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ದೆಹಲಿಯನ್ನು ಅಕ್ಷರಶಃ ಒಂದು ಕೋಟೆಯಂತೆ ಬದಲಾಯಿಸಲಾಗಿದೆ. ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳನ್ನು ಪ್ರವೇಶಿಸದಂತೆ ತಡೆಯಲು ದೆಹಲಿಯ ವಿವಿಧ ಗಡಿ ಭಾಗಗಳಲ್ಲಿ ಬೃಹತ್ ಬ್ಯಾರಿಕೇಡ್ಗಳು ಹಾಗೂ ಮೊಳೆಗಳಿರುವ ಸ್ಟ್ರಿಪ್ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಪ್ರತಿಭಟನೆಗೆ ದೆಹಲಿ ಪೊಲೀಸರು ಅಧಿಕೃತವಾಗಿ ಅನುಮತಿ ನಿರಾಕರಿಸಿದ್ದರು. ಆದಾಗ್ಯೂ, ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಲು ಪಟ್ಟುಹಿಡಿದಿರುವುದರಿಂದ ದೆಹಲಿಯಲ್ಲಿ ಹೈಅರ್ಟ್ ಜಾರಿಯಲ್ಲಿದೆ.
ಕಳೆದ 2024ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯಿಂದ ಬರೋಬ್ಬರಿ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ಆಡಳಿತರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಹಾಗೂ ವಿಪಕ್ಷಗಳ ಇಂಡಿಯಾ ಬ್ಲಾಕ್ ನಡುವಿನ ಮತ ಹಂಚಿಕೆಯ ಅಂತರವನ್ನು ಕಡಿಮೆ ಮಾಡಲು ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲು ಈ ದೊಡ್ಡ ಮಟ್ಟದ ಮತದಾರರ ಕಡಿತ ನಡೆಸಲಾಗಿದೆ ಎಂದು ಅವರು ದೂರಿದ್ದಾರೆ. ಮತ್ತೊಂದೆಡೆ, ಚುನಾವಣಾ ಆಯೋಗದಲ್ಲಿ ಮುಖ್ಯ ಆಯುಕ್ತರ ಕಾರ್ಯವೈಖರಿಯ ವಿರುದ್ಧ ಆಯೋಗದ ಇತರ ಸದಸ್ಯರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹತ್ತು ತಿಂಗಳ ಅವಧಿಯಲ್ಲಿ ಬರೋಬ್ಬರಿ 14 ಬಾರಿ ಅಧಿಕೃತವಾಗಿ ತಮ್ಮ ತಕರಾರು ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂಬ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ತನಿಖಾ ವರದಿಯು ಈ ವಿವಾದವನ್ನು ಮತ್ತಷ್ಟು ಸ್ಫೋಟಗೊಳಿಸಿದೆ. ಆದರೆ, ಈ ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗವು ಸಾರಾಸಗಟಾಗಿ ತಳ್ಳಿಹಾಕಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಪೂರ್ಣ ಆಯೋಗವು ಒಮ್ಮತದಿಂದಲೇ ತೆಗೆದುಕೊಂಡಿದೆ ಎಂದು ಸ್ಪಷ್ಟನೆ ನೀಡಿದೆ.
ಪ್ರತಿಭಟನೆಯ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಸಾರ್ವಜನಿಕ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಭದ್ರತಾ ದೃಷ್ಟಿಯಿಂದ ದೆಹಲಿ ಮೆಟ್ರೋ ರೈಲು ನಿಗಮವು ನಗರದ ಪ್ರಮುಖ 45 ಕ್ಕೂ ಅಧಿಕ ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಪ್ರವೇಶ ಹಾಗೂ ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರೊಂದಿಗೆ, ಕೇಂದ್ರ ರೈಲ್ವೆ ಇಲಾಖೆಯು ಸಹ ಮಹತ್ವದ ನಿರ್ಧಾರ ಕೈಗೊಂಡಿದ್ದು, ನವದೆಹಲಿ ಹಾಗೂ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣಗಳಿಗೆ ಶನಿವಾರ ಮಧ್ಯಾಹ್ನದವರೆಗೆ ತಲುಪಬೇಕಿದ್ದ ಹಲವು ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ ಅಥವಾ ಅವುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದೆ. ರಸ್ತೆಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗಿದೆ. ಕೇಂದ್ರ ದೆಹಲಿಯ ಮೂರು ಪ್ರಮುಖ ಪ್ರವೇಶ ಹಾಗೂ ನಿರ್ಗಮನಾ ಕಡೆಗಳಲ್ಲಿ ಧ್ವನಿವರ್ಧಕಗಳ ಮೂಲಕ ವಿಶೇಷ ಎಚ್ಚರಿಕೆಗಳನ್ನು ನೀಡಲಾಗುತ್ತಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಸಾರ್ವಜನಿಕವಾಗಿ ಗುಂಪುಗೂಡುವುದು, ಮೆರವಣಿಗೆ ನಡೆಸುವುದು ಮತ್ತು ರಸ್ತೆ ತಡೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ವಿಪಕ್ಷಗಳ ತೀವ್ರ ವಿರೋಧ ಮತ್ತು ಸರ್ಕಾರದ ಬಿಗಿ ಭದ್ರತೆಯ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಬೆಳವಣಿಗೆಯು ರಾಷ್ಟ್ರಮಟ್ಟದಲ್ಲಿ ಭಾರೀ ಕಳಕಳಿ ಮೂಡಿಸಿದೆ.
ನಾಗರಿಕರ ಆಕ್ರೋಶ, ಪ್ರತಿಭಟನೆಯಿಂದ ಇನ್ಯಷ್ಟು ದಿನ ತಪ್ಪಿಸಿಕೊಳ್ತೀರಿ
ಸಾಮಾಜಿಕ ಹಾಗೂ ರಾಕೀಯ ವಿಚಾರಗಳಲ್ಲಿ ಸದಾ ಮುಕ್ತವಾಗಿ ಮತ್ತು ಖಡಕ್ ಆಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಪ್ರಸ್ತುತ ವಿದ್ಯಮಾನಗಳ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ಅಂಗಳದಲ್ಲಿ ಹಂಚಿಕೊಂಡಿರುವ ನೂತನ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶಾದ್ಯಂತ ನಾಗರಿಕರು ವ್ಯಕ್ತಪಡಿಸುತ್ತಿರುವ ಆಕ್ರೋಶ ಮತ್ತು ಭುಗಿಲೆದ್ದಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಅವರು, ಸರ್ಕಾರ ಹಾಗೂ ಆಡಳಿತಾರೂಢ ನಾಯಕರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್, “ನಾಗರಿಕರ ಅಸಮಾಧಾನ ಮತ್ತು ಈ ಸಾರ್ವಜನಿಕ ಪ್ರತಿಭಟನೆಗಳಿಂದ ನೀವು ಇನ್ನು ಎಷ್ಟು ದಿನ ತಾನೇ ತಪ್ಪಿಸಿಕೊಂಡು ಓಡುತ್ತೀರಿ?” ಎಂದು ಪ್ರಶ್ನಿಸುವ ಮೂಲಕ ಆಡಳಿತ ಯಂತ್ರದ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದ್ದರೂ, ಸರ್ಕಾರ ಜನಸಾಮಾನ್ಯರ ಧ್ವನಿಗೆ ಕಿವಿಗೊಡದೆ ಮೌನ ವಹಿಸಿರುವುದನ್ನು ಅಥವಾ ಜಾರಿಕೊಳ್ಳುತ್ತಿರುವುದನ್ನು ಪ್ರಕಾಶ್ ರಾಜ್ ತಮ್ಮ ಚುಟುಕು ಹಾಗೂ ಮಾರ್ಮಿಕ ಸಾಲುಗಳ ಮೂಲಕ ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
How long will you escape from Citizens dissent #justasking https://t.co/nPXF8jN2ya
— Prakash Raj (@prakashraaj) October 10, 2026
ನಟ ಪ್ರಕಾಶ್ ರಾಜ್ ಅವರು ‘ಸಿಜೆಪಿ’ (CJP) ಹಾಗೂ ಸಾರ್ವಜನಿಕ ಹೋರಾಟಗಳ ಬೆಂಬಲಕ್ಕೆ ನಿಂತು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪ್ರಕಾಶ್ ರಾಜ್ ಅವರ ಈ ಪೋಸ್ಟ್ ಅನ್ನು ಬೆಂಬಲಿಸಿ ಹಾಗೂ ವಿರೋಧಿಸಿ ಕಾಮೆಂಟ್ ಮಾಡುತ್ತಿದ್ದು, ರಾಜಕೀಯ ವಲಯದಲ್ಲೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸಾರ್ವಜನಿಕ ಹಕ್ಕುಗಳು ಮತ್ತು ಜನರ ಧ್ವನಿಯನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂಬುದನ್ನು ಈ ಪೋಸ್ಟ್ ಮುಖಾಂತರ ಅವರು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ವದಂತಿಗಳಿಗೆ ಕಿವಿಗೊಡಬೇಡಿ, ಶಾಂತಿ ಕಾಪಾಡಿ: ಸಾರ್ವಜನಿಕರಿಗೆ ದೆಹಲಿ ಖಾಕಿ ಪಡೆಯ ಕಟ್ಟುನಿಟ್ಟಿನ ಸೂಚನೆ
