TOP NEWS

HD Kumaraswamy: ನೈಸ್ ಅಕ್ರಮದ ವಿರುದ್ಧ ಹೆಚ್‌ಡಿಕೆ ಆಕ್ರೋಶ: ಕೋರ್ಟ್ ಆದೇಶದಂತೆ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಕರೆ

HD Kumaraswamy Alleges 5 500 Crore Scam in 1 585 Crore NICE Project

ಬೆಂಗಳೂರು: ನೈಸ್ (BMICP) ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಕಳೆದ 25 ವರ್ಷಗಳಿಂದ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ಪರ ಜೆಡಿಎಸ್ ನಡೆಸುತ್ತಿರುವ ನಿರಂತರ ಹೋರಾಟಕ್ಕೆ ದೊರೆತ ದೊಡ್ದ ಜಯ. ಹೈಕೋರ್ಟ್ ಆದೇಶದ ಬಳಿಕ ನೈಸ್ ರಸ್ತೆಯಲ್ಲಿ ಟೋಲ್ ಫೀಸ್ ಕಟ್ಟಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆಯ ವಿರುದ್ಧ ತೀವ್ರ ಪ್ರಹಾರ ನಡೆಸಿದ್ದಾರೆ.

ಸುದ್ದಿಗೋಷ್ಠಿಯ ಆರಂಭದಲ್ಲೇ ಸರ್ಕಾರದ ನಡೆಗೆ ಕಾಲೆಳೆದ ಕುಮಾರಸ್ವಾಮಿ ಅವರು, ಸರ್ಕಾರದಲ್ಲಿದ್ದವರು 15 ದಿನಕ್ಕೊಮ್ಮೆ ಪ್ರಜಾಸೇವೆ ಮಾಡಿದರೆ, ನಾನು ಪ್ರತಿದಿನವೂ ಪ್ರಜಾಸೇವೆ ಮಾಡುತ್ತೇನೆ, ಹಾಗಾಗಿ ಇಂದು ಬರುವುದು ಕೊಂಚ ತಡವಾಯಿತು ಎಂದು ಟಾಂಗ್ ನೀಡಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ ಹಾಗೂ ಜನಸೇವೆಯನ್ನು ಸ್ಮರಿಸಿ, ರಾಜ್ಯದ ಮತ್ತು ದೇಶದ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ನೈಸ್ ಯೋಜನೆಯ ಅಕ್ರಮಗಳ ಸಾಲು ಸಾಲು ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ನೈಸ್ ಯೋಜನೆ ದೇವೇಗೌಡರ ಕೂಸು ಎಂದು ನಿನ್ನೆಯಷ್ಟೇ ಸರ್ಕಾರದಲ್ಲಿದ್ದವರು ಹೇಳಿದ್ದಾರೆ. ಅದಕ್ಕೆ ದೇವೇಗೌಡರೇ ತಿರುಗೇಟು ನೀಡಿದ್ದು, ಕೂಸು ನನ್ನದೇ ಇರಬಹುದು ಆದರೆ ಅದನ್ನು ಬೆಳೆಸಿದ ಸೂಲಗಿತ್ತಿ ಯಾರು? ಎಂಬುದಕ್ಕೆ ರಾಜ್ಯ ಸರ್ಕಾರ ಮೊದಲು ಉತ್ತರ ನೀಡಲಿ ಎಂದು ಸವಾಲೆಸೆದರು.

ಒಪ್ಪಂದ ಮೀರಿ ಟೋಲ್ ವಸೂಲಿ ಹಾಗೂ ಭೂ ಅಕ್ರಮ

2000ರ ವೇಳೆಯಲ್ಲಿ ಸರ್ಕಾರ ಮತ್ತು ನೈಸ್ ಸಂಸ್ಥೆ ನಡುವೆ ಒಪ್ಪಂದವಾಗಿತ್ತು. ಯೋಜನೆಯ ಸಂಪೂರ್ಣ ಕಾಮಗಾರಿ ಮುಗಿದ ಮೇಲಷ್ಟೇ ಟೋಲ್ ಸಂಗ್ರಹಿಸಬೇಕು ಎಂಬ ನಿಯಮವಿತ್ತು. ಆದರೆ ಇಂದಿಗೂ ಪೆರಿಫೆರಿಯಲ್ ರಸ್ತೆ ಕಾಮಗಾರಿ ಮುಗಿದಿಲ್ಲ, ಸರ್ವಿಸ್ ರಸ್ತೆಗಳೇ ಇಲ್ಲ. ಅಗ್ರಿಮೆಂಟ್ ವೇಳೆ ಎಲ್ಲೂ ಕೆರೆ ಜಾಗ ಬೇಕು ಎಂದು ಕೇಳಿರಲಿಲ್ಲ. ಆದರೆ 2193 ಎಕರೆ ಪೆರಿಫೆರಿಯಲ್ ರಸ್ತೆಗೆ ಎಂದು ಒಪ್ಪಂದ ಮಾಡಿಕೊಂಡು, ಬಳಿಕ ಕರಾಬು ಲ್ಯಾಂಡ್ ಸೇರಿದಂತೆ ಒಟ್ಟು 20 ಸಾವಿರ ಎಕರೆ ಭೂಮಿಯನ್ನು ಕೇಳಿದರು. 163 ಕಿ.ಮೀ ರಸ್ತೆಗೆ 6999 ಎಕರೆ ಭೂಮಿ ಕೇಳಿದ್ದ ಸಂಸ್ಥೆ, 2004ರಲ್ಲಿ BMICPA ಮೂಲಕ ಸಂಪುಟದ ಒಪ್ಪಿಗೆಯೂ ಇಲ್ಲದೆ ಫ್ರೇಮ್‌ವರ್ಕ್ ಅಗ್ರಿಮೆಂಟ್ ಅನ್ನೇ ಬದಲಾಯಿಸಿಕೊಂಡಿದೆ.

ಈ ಎಲ್ಲಾ ಧಂದೆಗಳನ್ನು ಪರಿಶೀಲಿಸಿಯೇ ಸುಪ್ರೀಂ ಕೋರ್ಟ್ ಜುಲೈ 2026ರಲ್ಲಿ ಮಹತ್ವದ ತೀರ್ಪು ನೀಡಿದೆ. ಇದರಲ್ಲಿ ಫ್ರಾಡ್ ನಡೆದಿದೆ ಮತ್ತು ರಾಜ್ಯ ಸರ್ಕಾರವೂ ಇದರಲ್ಲಿ ಶಾಮೀಲಾಗಿದೆ ಎಂದು ಕೋರ್ಟ್ ಪರೋಕ್ಷವಾಗಿ ಹೇಳಿದೆ. ಈ ಅಕ್ರಮದಲ್ಲಿ ಭಾಗಿಯಾದವರು ಯಾರು ಮತ್ತು ಕೋರ್ಟ್ ಹೇಳಿದ್ದೇನು ಎಂಬುದಕ್ಕೆ ಮುಖ್ಯಮಂತ್ರಿಗಳು ತಕ್ಷಣ ಉತ್ತರಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಜಯಚಂದ್ರ ಅವರ ನಡೆಗೆ ಅಚ್ಚರಿ

ನೈಸ್ ರಸ್ತೆ ಯೋಜನೆ ಬೇಡ, ಅದನ್ನು ತಕ್ಷಣವೇ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಸದನ ಸಮಿತಿ ಅಧ್ಯಕ್ಷರಾಗಿದ್ದ ಟಿ.ಬಿ. ಜಯಚಂದ್ರ ಅವರು ಹಿಂದೆ ಹೇಳಿದ್ದರು. ಆದರೆ ಅದೇ ಜಯಚಂದ್ರ ಅವರು ಮೇ 2025ರಲ್ಲಿ ಸಿಎಂಗೆ ಪತ್ರ ಬರೆದು ಕಾಮಗಾರಿಯನ್ನು ಸೂಪರ್‌ವೈಸ್ (ಮೇಲ್ವಿಚಾರಣೆ) ಮಾಡಲು ಕೋರುತ್ತಾರೆ. ನೈಸ್ ರಸ್ತೆ ಬೇಡ ಎಂದಿದ್ದ ಜಯಚಂದ್ರ ಅವರು ದಿಢೀರನೆ ಈ ರೀತಿ ಬದಲಾಗಿದ್ದು ಏಕೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಾವು ಯಾರನ್ನೂ ಬ್ಲಾಕ್ ಮೇಲ್ ಮಾಡಲು ಹೋರಾಟ ಮಾಡುತ್ತಿಲ್ಲ. ನಮಗೆ ಬ್ಲಾಕ್ ಮೇಲ್ ಮಾಡಿ ಸಂಪಾದನೆ ಮಾಡುವ ಅಗತ್ಯವೂ ಇಲ್ಲ, ರೈತರ ಹಿತ ರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದೇವೆ ಎಂದರು.

ದಾಖಲೆಗಳ ಸಮೇತ ವಿವರ ನೀಡಿದ ಅವರು, 2008-09 ರಿಂದ ಇಲ್ಲಿಯವರೆಗೆ ನೈಸ್ ಸಂಸ್ಥೆಯು ಒಟ್ಟು 4,756 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಿದೆ. ಭೂಮಿ ಮಾರಾಟದಿಂದ 384 ಕೋಟಿ ರೂ. ಹಾಗೂ ಜಾಯಿಂಟ್ ಅಗ್ರಿಮೆಂಟ್‌ನಿಂದ 108 ಕೋಟಿ ರೂ. ಗಳಿಸಿದೆ. ಕೇವಲ 1,585 ಕೋಟಿ ರೂಪಾಯಿ ಒಟ್ಟು ಮೊತ್ತದ ಈ ಯೋಜನೆಯಿಂದ ನೈಸ್ ಸಂಸ್ಥೆ ಇದುವರೆಗೆ ಎಲ್ಲಾ ಮೂಲಗಳಿಂದ ಬರೋಬ್ಬರಿ 5,500 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹಿಸಿದೆ ಎಂದು ಅಂಕಿಅಂಶ ಬಿಚ್ಚಿಟ್ಟರು.

ಬಾಲಕೃಷ್ಣ ಆರೋಪಕ್ಕೆ ತಿರುಗೇಟು ಮತ್ತು ಮುಂದಿನ ನಡೆ

ತಮ್ಮ ವಿರುದ್ಧ ಮಂತ್ರಿ ಬಾಲಕೃಷ್ಣ ಮಾಡಿದ ಸ್ಟಿಂಗ್ ಆಪರೇಷನ್ ಆರೋಪಕ್ಕೆ ತಿರುಗೇಟು ನೀಡಿದ ಹೆಚ್‌ಡಿಕೆ, ನಾನು ಖೇಣಿ ಜೊತೆ ಕುಳಿತು ಸ್ಟಿಂಗ್ ಆಪರೇಷನ್ ಮಾಡಿಸಿದ್ದೀನಾ? ಹೈಕಮಾಂಡ್‌ಗೆ ಯಾರದ್ದೋ ಸ್ಟಿಂಗ್ ಆಪರೇಷನ್ ವೀಡಿಯೋ ತೋರಿಸಿ, ಬ್ಲಾಕ್ ಮೇಲ್ ಮಾಡಿ ಸಿಎಂ ಆಗಿದ್ದಾರೆ ಎಂದು ಕಾಂಗ್ರೆಸ್ ಆಪ್ತರೇ ಹೇಳುತ್ತಿದ್ದಾರೆ. ನನ್ನ ಬಳಿ ಕ್ಯಾಮೆರಾ, ಬ್ಯಾಟರಿ ಇಟ್ಟುಕೊಂಡು ಸ್ಟಿಂಗ್ ಆಪರೇಷನ್ ಮಾಡುವ ಅಭ್ಯಾಸವಿಲ್ಲ, ನನ್ನ ಹತ್ತಿರ ಇರುವುದು ಕೇವಲ ಪಕ್ಕಾ ದಾಖಲೆಗಳು ಮಾತ್ರ ಎಂದು ಕಾಗದಪತ್ರಗಳನ್ನು ಪ್ರದರ್ಶಿಸಿದರು.

ಇದೇ ವೇಳೆ ಸೋಂಪುರ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಫಾರ್ಮ್ ಹೌಸ್ ಹಾಗೂ ಅಕ್ರಮ ಆಸ್ತಿಗಳ ಕುರಿತು ಇನ್ನು ಮೂರ್ನಾಲ್ಕು ಪ್ರಮುಖ ದಾಖಲೆಗಳು ಬಾಕಿ ಇವೆ. ಶೀಘ್ರದಲ್ಲೇ ಅವನ್ನೂ ಕೂಡ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದರು.

ಇದನ್ನೂ ಓದಿ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಇಡಿ ವಶಕ್ಕೆ: ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಬಿಗ್ ಆಕ್ಷನ್!

Leave a Reply

Your email address will not be published. Required fields are marked *