TOP NEWS

BY Vijayendra: SIR ಹಾಗೂ ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಕಪಟ ನಾಟಕ: ಬಿ.ವೈ. ವಿಜಯೇಂದ್ರ ಭಾರಿ ವಾಗ್ದಾಳಿ!

CM dk shivakumar Blaming Election Commission to Cover Up Governance Failures Claims BY Vijayendra

ಧಾರವಾಡ: ಮತದಾರರ ಪಟ್ಟಿ ಪರಿಷ್ಕರಣೆ (SIR) ಗೊಂದಲ ಹಾಗೂ ಫಾರಂ 7 ದುರ್ಬಳಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಭಾರಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಕಪಟ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದಿರುವ ಅವರು, ಪ್ರಸ್ತುತ ರಾಜ್ಯ ಚುನಾವಣಾ ಆಯುಕ್ತರಾಗಿರುವ ಅನ್ಬುಕುಮಾರ್ ಅವರನ್ನು ನೇಮಕ ಮಾಡಿದ್ದೇ ಇದೇ ರಾಜ್ಯ ಸರ್ಕಾರ ಎಂಬುದನ್ನು ಮರೆಯಬಾರದು ಎಂದು ವೀರೋಧ ವ್ಯಕ್ತಪಡಿಸಿದರು.‌

ಕೇಂದ್ರದತ್ತ ಬೆರಳು ತೋರಿಸುವುದು ಹಾಸ್ಯಾಸ್ಪದ

ಧಾರವಾಡದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 5 ರಿಂದ 10 ಸಾವಿರದಷ್ಟು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸುತ್ತಿದ್ದಾರೆ. ಆದರೆ, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಫಾರಂ 7 ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಬಿಎಲ್‌ಒ (BLO) ಸಿಬ್ಬಂದಿಗಳು ರಾಜ್ಯ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಿಸುತ್ತಾರೆಯೇ ಹೊರತು, ಕೇಂದ್ರ ಸರ್ಕಾರದ ನೌಕರರಲ್ಲ. ಹೀಗಿರುವಾಗ ತಮ್ಮ ಸರ್ಕಾರದ ಆಡಳಿತಾತ್ಮಕ ಲೋಪಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಅಥವಾ ಚುನಾವಣಾ ಆಯೋಗದತ್ತ ಬೆರಳು ತೋರಿಸುವುದು ಹಾಸ್ಯಾಸ್ಪದ’ ಎಂದು ತಿರುಗೇಟು ನೀಡಿದರು.

ಇದೇ ವೇಳೆ, ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವೂ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದ ವಿಜಯೇಂದ್ರ, ‘ಪ್ರಿಯಾಂಕ್ ಖರ್ಗೆ ಅವರು ನಮಗೆ ಕಾನೂನಿನ ಪಾಠ ಹೇಳುವ ಅಗತ್ಯವಿಲ್ಲ. ಪ್ರಸ್ತುತ ಕಲಬುರಗಿ ಜಿಲ್ಲೆಯು ಅವರ ಕಪಿಮುಷ್ಟಿಯಲ್ಲಿದ್ದು, ಅದು ‘ರಿಪಬ್ಲಿಕ್ ಆಫ್ ಕಲಬುರಗಿ’ಯಂತೆ ಬದಲಾಗಿದೆ. ಅಲ್ಲಿ ದಿನನಿತ್ಯ ಸರಣಿ ಕೊಲೆಗಳು ನಡೆಯುತ್ತಿವೆ. ಸಚಿವರು ಸ್ವತಃ ಸುಪಾರಿ ಕಿಲ್ಲರ್‌ಗಳನ್ನು ಪೋಷಿಸುತ್ತಿದ್ದು, ಘಟನೆಗಳು ನಡೆದಾಗ ರಾತ್ರೋರಾತ್ರಿ 15 ಲಕ್ಷ ರೂಪಾಯಿ ನೀಡಿ ಅಮಾಯಕರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದು ಗುಡುಗಿದರು.

ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಪರಿವರ್ತಿಸಿದೆ

ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾಪ ಹಾಗೂ ಸಾರಿಗೆ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿ, ‘ಕೆಎಸ್‌ಆರ್‌ಟಿಸಿ (KSRTC) ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸರ್ಕಾರದಿಂದ ಬರಬೇಕಾದ 6.5 ಸಾವಿರ ಕೋಟಿ ರೂಪಾಯಿ ಬಾಕಿ ಹಣವನ್ನು ತಕ್ಷಣವೇ ಪಾವತಿಸದಿದ್ದರೆ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರೂಪಾಯಿ ಹೊಂದಿಸುವ ಜವಾಬ್ದಾರಿಯನ್ನು ಅಬಕಾರಿ ಇಲಾಖೆಗೆ ವಹಿಸಲಾಗಿದ್ದು, ಇಲಾಖೆಯ ಆದಾಯದಲ್ಲಿ 11 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೆಚ್ಚಳವಾಗಿದೆ. ಬೆಲೆ ಏರಿಕೆಯನ್ನೇ ಸಾಧನೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಇಡೀ ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಪರಿವರ್ತಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

SIR ಗೊಂದಲದ ಕುರಿತು ಕಾಂಗ್ರೆಸ್‌ನ ದ್ವಂದ್ವ ನೀತಿಯನ್ನು ಪ್ರಶ್ನಿಸಿದ ಅವರು, ‘ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್ ಅವರೇ ಕೇರಳದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿಯೇ ಮತದಾರರ ಪಟ್ಟಿ ಶುದ್ಧೀಕರಣಗೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಆಯೋಗವನ್ನು ಹೊಣೆ ಮಾಡುತ್ತಿದ್ದಾರೆ. ಅಲ್ಲದೆ, ರಾಜ್ಯದ ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿಗಳಂತೆ ಬಳಸಿಕೊಳ್ಳಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಎಫ್‌ಐಆರ್ ದಾಖಲಿಸಿ ಬೆದರಿಸಲಾಗುತ್ತಿದೆ’ ಎಂದು ದೂರಿದರು.

ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್‌ಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ‘ಪ್ರಸ್ತುತ ಅವರು ಪಕ್ಷದಲ್ಲೇ ಇಲ್ಲ, ಮುಂದಿನ ದಿನಗಳಲ್ಲಿ ಬಂದಾಗ ನೋಡೋಣ. ಬಿಜೆಪಿ ಪಕ್ಷದಲ್ಲಿ ಯಾವುದೇ ಬಂಡಾಯ ಅಭ್ಯರ್ಥಿಗಳಿಲ್ಲ. ವೈಯಕ್ತಿಕ ರಾಜಕಾರಣವೇ ಬೇರೆ, ಪ್ರತಿಭಟನೆಗೆ ಬೆಂಬಲ ನೀಡುವುದೇ ಬೇರೆ. ಇದರಿಂದ ನಮಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ’ ಎಂದರು.

ಅಂತಿಮವಾಗಿ, ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ವಿಜಯೇಂದ್ರ, ‘ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಕೇಂದ್ರ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಪದವೀಧರರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿರುವ ಸಂಕನೂರ ಅವರಿಗೆ ಉತ್ತಮ ವಾತಾವರಣವಿದೆ. ಎಲ್ಲಾ ಹಿರಿಯ ನಾಯಕರ ಬೆಂಬಲದೊಂದಿಗೆ ಬಿಜೆಪಿ ಅಭ್ಯರ್ಥಿಯು ಭಾರಿ ಮತಗಳ ಅಂತರದಿಂದ ಗೆದ್ದು, ಹ್ಯಾಟ್ರಿಕ್ విజಯ ಸಾಧಿಸಲಿದ್ದಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಕರ್ನಾಟಕದಲ್ಲಿ ಹೊಸ ಮದ್ಯ ನೀತಿ ಎಫೆಕ್ಟ್: ಬಿಯರ್ ಮಾರಾಟದಲ್ಲಿ ಶೇ. 41.32ರಷ್ಟು ಭರ್ಜರಿ ಏರಿಕೆ!

Leave a Reply

Your email address will not be published. Required fields are marked *