ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಕರ್ನಾಟಕದ ಪೊಲೀಸ್ ಠಾಣೆಗಳೆಲ್ಲವೂ ‘ಕಾಂಗ್ರೆಸ್ ಕಚೇರಿ’ಗಳಂತೆ ಬದಲಾಗಿವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಪ್ರತಿಪಕ್ಷಗಳ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ, ಬಿಜೆಪಿ ಮತ್ತು ಜೆಡಿಎಸ್ನ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಪಿ.ಸಿ. ಮೋಹನ್, ಸಿ.ಟಿ. ರವಿ, ಭೋಜೇಗೌಡ, ಮುನಿರಾಜು ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಕಾರ್ಯಕರ್ತರ ಮೇಲೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಸುಳ್ಳು ಪ್ರಕರಣಗಳನ್ನು ದಾಖಲಿಸಿ ನಿರಂತರ ಕಿರುಕುಳ ನೀಡುತ್ತಿರುವುದನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ಅವರು ವಿವರಣೆ ನೀಡಿದರು.
ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆಯ ಫಾರ್ಮ್ 7 ವಿಚಾರವಾಗಿ ಮಾತನಾಡಿದ ಅವರು, ಈ ಸಂಬಂಧ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ಪಡೆಯಲಾಗಿದೆ ಎಂದರು. ಕಾನೂನಿನ ಪ್ರಕಾರ ಫಾರ್ಮ್ 7 ಅನ್ನು ಯಾರಾದರೂ ಮತ್ತು ಎಷ್ಟು ಸಂಖ್ಯೆಯಲ್ಲಾದರೂ ಸಲ್ಲಿಸಲು ಅವಕಾಶವಿದೆ. ಈ ವಿಚಾರದಲ್ಲಿ ಎಫ್ಐಆರ್ ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗವು ಯಾವುದೇ ಸೂಚನೆ ನೀಡಿದೆಯೇ ಎಂದು ಪ್ರಶ್ನಿಸಿದಾಗ, ಆಯೋಗವು ತಾವು ಯಾರ ವಿರುದ್ಧವೂ ದೂರು ನೀಡುವಂತೆ ಪೊಲೀಸರಿಗೆ ಸೂಚಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಅಶೋಕ್ ತಿಳಿಸಿದರು.
ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಜಯನಗರ ಕ್ಷೇತ್ರದ ಶಾಸಕರ ವಿರುದ್ಧವೂ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಅವರು ಕಿಡಿಕಾರಿದರು. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರನ್ನು ಪಟ್ಟಭದ್ರ ಹಿತಾಸಕ್ತಿಗಳು ಟಾರ್ಗೆಟ್ ಮಾಡುತ್ತಿದ್ದು, ಕ್ರಿಮಿನಲ್ ಕೇಸುಗಳನ್ನು ಜಡಿಯುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಗುಂಡಾಗಿರಿ ಸಂಸ್ಕೃತಿ ಮತ್ತು ದ್ವೇಷದ ರಾಜಕಾರಣವನ್ನು ಬಹಿರಂಗಪಡಿಸುತ್ತದೆ ಎಂದು ಅವರು ತೀವ್ರವಾಗಿ ಟೀಕಿಸಿದರು.
ರಾಜ್ಯಪಾಲರಿಗೆ ಮನವಿ ಮಾಡಿದ ನಿಯೋಗ
ರಾಜ್ಯದಲ್ಲಿ ಬಿಜೆಪಿ ಮತ್ತು ಎನ್ಡಿಎ (NDA) ಮೈತ್ರಿಕೂಟ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ನಾಯಕರು ಈ ರೀತಿಯ ಅಡ್ಡದಾರಿಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಸಾಮೂಹಿಕವಾಗಿ ಸುಳ್ಳು ದೂರುಗಳನ್ನು ಪಡೆದು ಕಾರ್ಯಕರ್ತರನ್ನು ಬಂಧಿಸುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ, ಕಾನೂನನ್ನು ಕೈಗೆ ತೆಗೆದುಕೊಂಡು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಈ ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆರ್. ಅಶೋಕ್ ಅವರು ರಾಜ್ಯಪಾಲರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: SIR ಹಾಗೂ ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಕಪಟ ನಾಟಕ: ಬಿ.ವೈ. ವಿಜಯೇಂದ್ರ ಭಾರಿ ವಾಗ್ದಾಳಿ!
