ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ‘ಆಲ್ಕೋಹಾಲ್ ಇನ್ ಬೆವರೇಜ್’ (AIB) ನೀತಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಸೆಪ್ಟೆಂಬರ್ ತಿಂಗಳ ಮೊದಲ ಆರು ತಿಂಗಳ ಅವಧಿಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (Big News) ಬಿಯರ್ ಮಾರಾಟದ ಪ್ರಮಾಣವು ಬರೋಬ್ಬರಿ ಶೇಕಡಾ 41.32 ರಷ್ಟು ಹೆಚ್ಚಳವಾಗಿದೆ.
ಬಿಯರ್ ಕಡೆ ಹೆಚ್ಚಿನ ಮದ್ಯ ಪ್ರಿಯರ ಒಲವು
ಮೇ ೧೧ ರಂದು ಜಾರಿಗೆ ಬಂದ ಎಐಬಿ ನೀತಿಯಡಿ ಶೇ.5 ರಷ್ಟು ಆಲ್ಕೋಹಾಲ್ ಪ್ರಮಾಣ ಹೊಂದಿರುವ ಲಾಗರ್ ಬಿಯರ್ಗಳು ಹಾಗೂ ಪ್ರೀಮಿಯಂ ವಿಭಾಗದ ಸ್ಕಾಚ್ ವಿಸ್ಕಿ ಸೇರಿದಂತೆ ಕೆಲವು ಪ್ರಮುಖ ಭಾರತೀಯ ನಿರ್ಮಿತ ಮದ್ಯಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಇಳಿಕೆ ಮಾಡಲಾಗಿತ್ತು. ಬೆಲೆ ಕಡಿಮೆಯಾದ ಬೆನ್ನಲ್ಲೇ ಮದ್ಯಪ್ರಿಯರು ಬಿಯರ್ ಕಡೆಗೆ ಹೆಚ್ಚಿನ ಒಲವು ತೋರಿದ್ದು, ಮಾರಾಟದಲ್ಲಿ ಭರ್ಜರಿ ಜಿಗಿತ ಕಂಡಿದೆ. ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ಶೇ34 92 ರಷ್ಟಿದ್ದ ಬಿಯರ್ ಮಾರಾಟದ ಬೆಳವಣಿಗೆಯು, ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಶೇ.49.69 ಕ್ಕೆ ಏರಿಕೆಯಾಗಿದೆ.
ಈ ಭರ್ಜರಿ ಮಾರಾಟದ ಪರಿಣಾಮವಾಗಿ ಅಬಕಾರಿ ಇಲಾಖೆಯ ಖಜಾನೆಗೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿದೆ. ವರ್ಷದ ಮೊದಲಾರ್ಧದಲ್ಲಿ ಬಿಯರ್ ಒಂದರಿಂದಲೇ ಅಬಕಾರಿ ಇಲಾಖೆಗೆ ₹3,377.88 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬಂದಿದ್ದ ₹2 836.64 ಕೋಟಿಗೆ ಹೋಲಿಸಿದರೆ ಈ ಬಾರಿ ₹541.24 ಕೋಟಿಯಷ್ಟು ಹೆಚ್ಚುವರಿ ಆದಾಯ ದಾಖಲಾಗಿದೆ. ಒಟ್ಟಾರೆ ಅಬಕಾರಿ ಆದಾಯ ಸಂಗ್ರಹದಲ್ಲೂ ಶೇ.13.39 ರಷ್ಟು ಪ್ರಗತಿ ಕಂಡುಬಂದಿದ್ದು, ಕಳೆದ ವರ್ಷ ಸಂಗ್ರಹವಾಗಿದ್ದ ₹19,570.23 ಕೋಟಿಗೆ ಪ್ರತಿಯಾಗಿ ಈ ವರ್ಷ ₹22,191.63 ಕೋಟಿ ರಾಜಸ್ವ ಸಂಗ್ರಹವಾಗಿದೆ. ಇದರಲ್ಲಿ ಐಎಮ್ಎಲ್, ಬಿಯರ್ ಮಾರಾಟ, ಪರವಾನಗಿ ಶುಲ್ಕ ಹಾಗೂ ದಂಡದ ಮೊತ್ತ ಸೇರಿದೆ.
ಅಬಕಾರಿ ಇಲಾಖೆಗೆ ಸರ್ಕಾರದಿಂದ ಗುರಿ ನಿಗದಿ
ಬಿಯರ್ಗೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯದ (IML) ಮಾರಾಟದ ಪ್ರಮಾಣದಲ್ಲಿ ಶೇ.1.14 ರಷ್ಟು ಮಾತ್ರ ಸಣ್ಣ ಏರಿಕೆ ಕಂಡುಬಂದಿದೆ. ಆದಾಗ್ಯೂ, ಐಎಮ್ಎಲ್ನಿಂದ ₹17,424.57 ಕೋಟಿ ಆದಾಯ ಹರಿದುಬಂದಿದೆ. ವಿಶೇಷವಾಗಿ ₹90 ರಿಂದ ₹165 ರವರೆಗಿನ ಆರಂಭಿಕ ನಾಲ್ಕು ಬೆಲೆ ಸ್ಲ್ಯಾಬ್ಗಳ ಮದ್ಯದ ಮಾರಾಟವೇ ಒಟ್ಟು ಅಬಕಾರಿ ಆದಾಯದ ಶೇಕಡಾ 70 ಕ್ಕೂ ಹೆಚ್ಚು ಪಾಲನ್ನು ನೀಡಿದೆ. 2026-27ನೇ ಸಾಲಿಗೆ ಅಬಕಾರಿ ಇಲಾಖೆಗೆ ಸರ್ಕಾರ ₹45,೦೦೦ ಕೋಟಿ ಆದಾಯದ ಬೃಹತ್ ಗುರಿ ನಿಗದಿಪಡಿಸಿದ್ದು, ಮೊದಲ ಆರು ತಿಂಗಳಿನಲ್ಲೇ ಅರ್ಧಕ್ಕಂತಲೂ ಹೆಚ್ಚು ಸಾಧನೆ ಮಾಡಲಾಗಿದೆ. ಮುಂಬರುವ ದಸರಾ, ದೀಪಾವಳಿ ಹಾಗೂ ಹೊಸ ವರ್ಷದ ಸಾಲು ಸಾಲು ಹಬ್ಬಗಳ ಋತುವಿನಲ್ಲಿ ಮದ್ಯ ಮಾರಾಟ ಮತ್ತಷ್ಟು ಹೆಚ್ಚಿ, ಇಲಾಖೆಯು ನಿಗದಿತ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮ ಪ್ರಗತಿ ಪರಿಶೀಲನೆ: ಕೃಷಿ, ಶಿಕ್ಷಣ, ಪಶುಸಂಗೋಪನೆಗೆ ಬೂಸ್ಟರ್ ಡೋಸ್
