TOP NEWS

KPSC Scam: ಪಶುವೈದ್ಯಾಧಿಕಾರಿ ಉದ್ಯೋಗ ಹಗರಣ: ಇಡಿ ಎಂಟ್ರಿಯಿಂದ ಬಯಲಾಯ್ತು ಲಂಚದ ನೆಟ್‌ವರ್ಕ್

KPSC Scam ED Steps In Detains IAS Officer and Associate Over Illegal Deals

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC Scam) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಬೃಹತ್ ಅಕ್ರಮ ಪ್ರಕರಣವು ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯದ (ED) ಪ್ರವೇಶದಿಂದಾಗಿ ಅಕ್ರಮ ಎಸಗಿದವರಲ್ಲಿ ತೀವ್ರ ನಡುಕ ಉಂಟಾಗಿದೆ. ಆರಂಭದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಿಂದ ಅಪರಾಧ ತನಿಖಾ ಇಲಾಖೆಗೆ (CID) ಹಸ್ತಾಂತರಗೊಂಡಿದ್ದ ಈ ಗಂಭೀರ ಪ್ರಕರಣದ ಜಾಡು ಹಿಡಿದ ಇಡಿ ಅಧಿಕಾರಿಗಳು, ಹಣಕಾಸು ಅಕ್ರಮ ತಡೆ ಕಾಯ್ದೆಯಡಿ (PMLA) ಸ್ವತಂತ್ರವಾಗಿ ಇಸಿಐಆರ್ (ECIR) ದಾಖಲಿಸಿಕೊಂಡು ಕಠಿಣ ಕಾರ್ಯಾಚರಣೆಗಿಳಿದಿದ್ದಾರೆ. ಇದರ ಭಾಗವಾಗಿ, ಕೆಪಿಎಸ್‌ಸಿಯ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಅವರ ಆಪ್ತ ಸಹಚರ ಬಸವರಾಜ್ ಕನ್ನಾಳೆ ಎಂಬುವವರನ್ನು ಸುಪರ್ದಿಗೆ ಪಡೆದು ಸುದೀರ್ಘ ವಿಚಾರಣೆಗೊಳಪಡಿಸಲಾಗಿದೆ.

ಜ್ಞಾನೇಂದ್ರ ಕುಮಾರ್ ಅವರ ನಿವಾಸ ಹಾಗೂ ಕಚೇರಿ ಸೇರಿದಂತೆ ಇತರೆ ನೆಲೆಗಳ ಮೇಲೆ ದಾಳಿ ನಡೆಸಿದ ಇಡಿ ತಂಡಕ್ಕೆ ಅಕ್ರಮ ಹಣದ ಹೊಳೆ ಹರಿದಿರುವುದು ಹಾಗೂ ಸಾಲು ಸಾಲು ಸಾಕ್ಷ್ಯಗಳು ಲಭ್ಯವಾಗಿವೆ. ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರು ಸಂವಿಧಾನಬದ್ಧ ಹುದ್ದೆಯ ಜವಾಬ್ದಾರಿ ಮತ್ತು ಪರೀಕ್ಷೆಗಳ ಗೌಪ್ಯತೆಯನ್ನು ಗಾಳಿಗೆ ತೂರಿ, ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಈ ಮಹಾ ವಂಚನೆಯ ನೆಟ್‌ವರ್ಕ್ ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಅಭ್ಯರ್ಥಿಗಳ ಡೇಟಾ ಮಾರಾಟ ಮತ್ತು ಕೋಟಿ ಕೋಟಿ ಡೀಲ್: ತನಿಖಾ ವರದಿಯ ಪ್ರಕಾರ, ಜ್ಞಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿಯಿಂದ ಅಕ್ರಮವಾಗಿ ಹಣ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಿದ್ಧರಿರುವ ಶ್ರೀಮಂತ ಅಭ್ಯರ್ಥಿಗಳ ಸಂಪೂರ್ಣ ರಹಸ್ಯ ಮಾಹಿತಿಯನ್ನು (Data) ತಮ್ಮ ಸಹಚರ ಬಸವರಾಜ್ ಕನ್ನಾಳೆಗೆ ನೀಡುತ್ತಿದ್ದರು. ಈ ಮಾಹಿತಿಯನ್ನಿಟ್ಟುಕೊಂಡು ಕನ್ನಾಳೆ ನೇರವಾಗಿ ಅಭ್ಯರ್ಥಿಗಳು ಮತ್ತು ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಸರ್ಕಾರಿ ಉದ್ಯೋಗದ ಆಮಿಷ ಒಡ್ಡುತ್ತಿದ್ದ. ಆರಂಭದಲ್ಲಿ ಒಂದು ಹುದ್ದೆಗೆ 70 ರಿಂದ 80 ಲಕ್ಷ ರೂಪಾಯಿ ಬೇಡಿಕೆ ಇಡಲಾಗುತ್ತಿತ್ತು. ಬಳಿಕ ಮಧ್ಯಸ್ಥಿಕೆಯ ನಂತರ 30 ರಿಂದ 40 ಲಕ್ಷ ರೂಪಾಯಿಗೆ ಡೀಲ್ ಅಂತಿಮಗೊಳ್ಳುತ್ತಿತ್ತು.

ಗ್ಯಾರಂಟಿಗೆ ಸಹಿ ಮಾಡಿದ ಖಾಲಿ ಚೆಕ್ ಪಡೆದುಕೊಳ್ಳುತ್ತಿದ್ದ ಆರೋಪಿಗಳು: ಅಭ್ಯರ್ಥಿಗಳಿಂದ ಹಣ ಪಡೆಯಲು ಆರೋಪಿಗಳು ಅತ್ಯಂತ ಚಾಣಾಕ್ಷ ಮತ್ತು ಸುರಕ್ಷಿತ ವಿಧಾನವನ್ನು ಅನುಸರಿಸುತ್ತಿದ್ದರು. ಒಟ್ಟು ಡೀಲ್ ಮೊತ್ತದ ಶೇಕಡಾ 70 ರಿಂದ 80 ರಷ್ಟನ್ನು ಪರೀಕ್ಷೆಗೆ ಮೊದಲೇ ನಗದು (Cash) ರೂಪದಲ್ಲಿ ಸ್ವೀಕರಿಸಲಾಗುತ್ತಿತ್ತು. ಕೆಲಸ ಸಿಕ್ಕ ನಂತರ ಉಳಿದ ಮೊತ್ತವನ್ನು ಪಾವತಿಸಲು ಗ್ಯಾರಂಟಿಯಾಗಿ ಅಭ್ಯರ್ಥಿಗಳು ಅಥವಾ ಅವರ ಪೋಷಕರಿಂದ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು (Blank Cheques) ವಶಕ್ಕೆ ಪಡೆದುಕೊಳ್ಳಲಾಗುತ್ತಿತ್ತು. ಉದ್ಯೋಗದ ಆದೇಶ ಕೈಸೇರಿದ ಮೇಲಷ್ಟೇ ಹಣ ಕೊಟ್ಟು ಚೆಕ್ ವಾಪಸ್ ಪಡೆಯುವ ಒಪ್ಪಂದ ಮಾಡಿಕೊಳ್ಳಲಾಗುತ್ತಿತ್ತು. ಇಡಿ ದಾಳಿಯ ವೇಳೆ ಕನ್ನಾಳೆಗೆ ಸೇರಿದ ಜಾಗಗಳಲ್ಲಿ ಇಂತಹ ನೂರಾರು ಸಹಿ ಮಾಡಿದ ಖಾಲಿ ಚೆಕ್‌‌ಗಳು ಪತ್ತೆಯಾಗಿವೆ.

ರೆಸಾರ್ಟ್‌ಗಳಲ್ಲಿ ‘ಹೈಟೆಕ್’ ಕಂಠಪಾಠ ತರಬೇತಿ: ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಅಕ್ರಮವಾಗಿ ಉತ್ತೀರ್ಣಗೊಳಿಸಲು ಅತ್ಯಂತ ರಹಸ್ಯ ತಂತ್ರ ಹೂಡಲಾಗಿತ್ತು. ಪರೀಕ್ಷೆಗೆ ಸರಿಯಾಗಿ ಒಂದು ದಿನ ಮುಂಚಿತವಾಗಿ ಖಾಸಗಿ ರೆಸಾರ್ಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ, ಆಯ್ಕೆಯಾದ ಅಭ್ಯರ್ಥಿಗಳನ್ನು ಅಲ್ಲಿಗೆ ಕರೆತರಲಾಗುತ್ತಿತ್ತು. ಜ್ಞಾನೇಂದ್ರ ಕುಮಾರ್ ಮೂಲಕ ಸೋರಿಕೆಯಾದ ಅಸಲಿ ಪ್ರಶ್ನೆಪತ್ರಿಕೆ ಮತ್ತು ಅದಕ್ಕೆ ಸಿದ್ಧಪಡಿಸಿದ ಸಿದ್ಧ ಉತ್ತರಗಳನ್ನು ನೀಡಲಾಗುತ್ತಿತ್ತು. ರಾತ್ರೋರಾತ್ರಿ ಅಭ್ಯರ್ಥಿಗಳಿಗೆ ಈ ಉತ್ತರಗಳನ್ನು ಕಂಠಪಾಠ ಮಾಡಿಸಿ, ಅಲ್ಲಿಯೇ ಮಾಕ್ ಎಕ್ಸಾಮ್ ಸಹ ಬರೆಸಲಾಗುತ್ತಿತ್ತು. ಪರೀಕ್ಷೆಯ ದಿನ ಬೆಳಿಗ್ಗೆ ಆರೋಪಿಗಳೇ ತಮ್ಮ ಸ್ವಂತ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುತ್ತಿದ್ದರು.

329 ಹುದ್ದೆಗಳಲ್ಲಿ ಅಕ್ರಮ: ಸೌಹಾರ್ದ ಬ್ಯಾಂಕ್ ಖಾತೆಗಳ ಮೇಲಿನ ತನಿಖೆ ಚುರುಕು: ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಕೇವಲ 1,400 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಕನಿಷ್ಠ ಕಟ್‌ಆಫ್ ಅಂಕಗಳನ್ನು ಪಡೆಯಲಾಗದೆ ಅನೇಕರು ಅನರ್ಹಗೊಂಡಿದ್ದರೂ, ಅಂತಿಮವಾಗಿ ಆಯ್ಕೆಯಾದ 329 ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಲಂಚ ನೀಡಿ ಅಕ್ರಮವಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ಬೀದರ್‌ನ ಸೌಹಾರ್ದ ಸಹಕಾರಿ ಬ್ಯಾಂಕ್ ಖಾತೆಗಳ ಮೂಲಕ ನಡೆದಿರುವುದು ಪತ್ತೆಯಾಗಿದೆ. ಪ್ರಸ್ತುತ ಇಡಿ ಮತ್ತು ಸಿಐಡಿ ಅಧಿಕಾರಿಗಳು ಜಂಟಿಯಾಗಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಹಾಗೂ ಸೀಜ್ ಮಾಡಿದ ದಾಖಲೆಗಳ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದು, ಅಕ್ರಮವಾಗಿ ಉದ್ಯೋಗ ಪಡೆದಿರುವ ಪಶುವೈದ್ಯಾಧಿಕಾರಿಗಳಿಗೂ ಜೈಲು ಶಿಕ್ಷೆ ಅನುಭವಿಸುವ ಭೀತಿ ಎದುರಾಗಿದೆ.

ಇದನ್ನೂ ಓದಿ: ರೇಷನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ‘ಅನ್ನ ಸೇವೆ’ ಆ್ಯಪ್ ಚಾಲನೆ

Leave a Reply

Your email address will not be published. Required fields are marked *