TOP NEWS

Gyanesh Kumar: ಸಿಇಸಿ ವಿರುದ್ಧದ ಮಹಾಭಿಯೋಗ ಸದ್ಯಕ್ಕಿಲ್ಲ: ‘ವೋಟ್ ಚೋರಿ’ ವಿರುದ್ಧ ಬೀದಿ ಹೋರಾಟಕ್ಕೆ ‘ಇಂಡಿಯಾ’ ಒಕ್ಕೂಟ ನಿರ್ಧಾರ

Opposition Puts Fresh Impeachment Notice Against CEC on Back Burner to Target Electoral Malpractices

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (Gyanesh Kumar) ಅವರ ವಿರುದ್ಧ ಮತ್ತೆ ಮಹಾಭಿಯೋಗ (ಇಂಪೀಚ್‌ಮೆಂಟ್) ಪ್ರಕ್ರಿಯೆ ಮುಂದುವರಿಸುವ ಯೋಜನೆಯನ್ನು ‘ಇಂಡಿಯಾ’ ಒಕ್ಕೂಟ ಸದ್ಯಕ್ಕೆ ಬದಿಗಿರಿಸಲು ನಿರ್ಧರಿಸಿದೆ. ಮೋದಿಯವರ ನಾಯಕತ್ವದ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಜಂಟಿಯಾಗಿ ನಡೆಸುತ್ತಿವೆ ಎನ್ನಲಾದ ‘ವೋಟ್ ಚೋರಿ’ (ಮತ ಕಳವು) ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸುವುದು ಮತ್ತು ಜನ ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲು ವಿಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.

ಜನಾಂದೋಲನವೇ ಪರಿಣಾಮಕಾರಿ ಎಂದು ನಿರ್ಧಾರ

ಬುಧವಾರ ನಡೆದ ‘ಇಂಡಿಯಾ’ ಒಕ್ಕೂಟದ ಪ್ರಮುಖ ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ಈ ವಿಷಯ ಗಂಭೀರ ಚರ್ಚೆಗೆ ಬಂದಿದೆಯಾದರೂ, ಮಹಾಭಿಯೋಗ ನೋಟಿಸ್‌ಗಿಂತ ಜನಾಂದೋಲನವೇ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಾರ್ವಜನಿಕ ವೇದಿಕೆಯಲ್ಲಿ ವಿಷಯಗಳನ್ನು ಪ್ರಸ್ತಾಪಿಸಿ ಜನಾಭಿಪ್ರಾಯ ರೂಪಿಸುವುದು ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಚುರುಕುಗೊಳಿಸುವುದು ಸದ್ಯದ ಪ್ರಮುಖ ಗುರಿಯಾಗಿದೆ. ಸಂಸತ್ತಿನಲ್ಲಿ ಸಂಖ್ಯಾಬಲದ ಕೊರತೆ ಇರುವಾಗ ಇಂತಹ ನೋಟಿಸ್ ನೀಡುವುದು ಮೂಲ ಹೋರಾಟದ ಹಾದ ತಪ್ಪಿಸಬಹುದು ಎಂಬ ಎಚ್ಚರಿಕೆಯನ್ನು ನಾಯಕರು ವಹಿಸಿದ್ದಾರೆ. ಆದರೆ, ಈ ನಿರ್ಧಾರದಿಂದ ಮಹಾಭಿಯೋಗದ ಅಧ್ಯಾಯ ಸಂಪೂರ್ಣವಾಗಿ ಮುಗಿದಿದೆ ಎಂದಲ್ಲ; ಸದ್ಯದ ಮಟ್ಟಿಗೆ ಗಮನವನ್ನು ಜನಾಂದೋಲನದ ಕಡೆಗೆ ಕೇಂದ್ರೀಕರಿಸಲಾಗಿದೆ ಎಂದು ಒಕ್ಕೂಟದ ಮೂಲಗಳು ಸ್ಪಷ್ಟಪಡಿಸಿವೆ.

ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ನೂತನ ಮಾಹಿತಿಗಳೊಂದಿಗೆ ಜ್ಞಾನೇಶ್ ಕುಮಾರ್ ವಜಾಕ್ಕೆ ಹೊಸ ನೋಟಿಸ್ ನೀಡಲು ವಿಪಕ್ಷಗಳು ಸಿದ್ಧತೆ ನಡೆಸಿದ್ದವು. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್ ಅವರು ಹೊಸ ನೋಟಿಸ್ ನೀಡುವ ಕ್ರಮಕ್ಕೆ ತಡೆ ಒಡ್ಡಿದರು. ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಲ್ಲಿಕೆಯಾಗಿದ್ದ ಮೊದಲ ನೋಟಿಸ್ ತಿರಸ್ಕೃತಗೊಂಡಿರುವುದು ಹಾಗೂ ಎರಡನೇ ನೋಟಿಸ್ ಬಾಕಿ ಇರುವುದನ್ನು ನೆನಪಿಸಿದ ಅವರು, ಹೊಸ ನೋಟಿಸ್‌ನಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಹೋರಾಟ ತೀವ್ರಗೊಳಿಸಲು ಸಜ್ಜು

ಬದಲಾಗಿ, ಚುನಾವಣಾ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದು ಹಾಗೂ 2023ರ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಯನ್ನು ಪ್ರಶ್ನಿಸುವುದು ಸೂಕ್ತ ಎಂದು ಸಿಬಲ್ ಸಲಹೆ ನೀಡಿದರು. ಈ ಕಾಯ್ದೆಯು ಚುನಾವಣಾ ಆಯುಕ್ತರಿಗೆ ಜೀವಮಾನದ ಕಾನೂನು ರಕ್ಷಣೆ ನೀಡುವುದರಿಂದ ಅವರನ್ನು ನೇರವಾಗಿ ಬಂಧಿಸುವುದು ಅಥವಾ ತಕ್ಷಣದ ಕ್ರಮ ಕೈಗೊಳ್ಳುವುದು ಪ್ರಸ್ತುತ ಕಾನೂನಿನಲ್ಲಿ ಕಷ್ಟಕರವಾಗಿದೆ. ಆದ್ದರಿಂದ ಈ ಕಾಯ್ದೆಯ ವಿರುದ್ಧ ವಿಪಕ್ಷಗಳು ಜಂಟಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಕಾನೂನು ರಕ್ಷಣೆ ಇಲ್ಲದಿರುವ ಕೆಳಹಂತದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಕಾನೂನು ಹೋರಾಟ ಪ್ರಾರಂಭಿಸಬೇಕು ಎಂದು ಅವರು ಪ್ರಸ್ತಾಪಿಸಿದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಆಯೋಗದ ಐಟಿ ವಿಭಾಗದ ಮುಖ್ಯಸ್ಥೆ ಸೀಮಾ ಖನ್ನಾ ಅವರ ಬಂಧನಕ್ಕೆ ಆಗ್ರಹಿಸಿದ್ದು, ಸಭೆಯಲ್ಲಿ ಈ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಯುದ್ಧಗಳು ಹಾಗೂ ಹವಾಮಾನ ವೈಪರೀತ್ಯದ ಹೊಡೆತ: ಜಾಗತಿಕ ದಕ್ಷಿಣದ ದೇಶಗಳಿಗೆ ಕಾದಿದೆ ಭಾರಿ ಆಹಾರ ಮತ್ತು ಇಂಧನ ಬಿಕ್ಕಟ್ಟು

Leave a Reply

Your email address will not be published. Required fields are marked *