ಬೆಂಗಳೂರು: ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಡಿಯಲ್ಲಿ ಬರುವ ‘ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ’ (KSDC) ಹಾಗೂ ‘ಕರ್ನಾಟಕ ರಾಜ್ಯ ವ್ಯಾಪಕ ಪ್ರದೇಶ ಜಾಲ’ (KSWAN) ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುಮಾರು 444 ಕೋಟಿ ರೂಪಾಯಿ ಮೌಲ್ಯದ ಈ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮತ್ತು ಹಿರಿಯ ಐಎಎಸ್ ಅಧಿಕಾರಿ ವಿರುದ್ಧ ಲೋಕಾಯುಕ್ತದಲ್ಲಿ ಅಧಿಕೃತ ದೂರು ದಾಖಲಾಗಿದೆ.
ಬಿಜೆಪಿ ಮುಖಂಡ ಎನ್‌ಆರ್ ರಮೇಶ್ ಅವರು ಲೋಕಾಯುಕ್ತ ಸಂಸ್ಥೆಗೆ ಅಗತ್ಯ ಸಾಕ್ಷ್ಯ ಮತ್ತು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದು, ಸಚಿವ ಯತೀಂದ್ರ ಸಿದ್ದರಾಮಯ್ಯ, ಇ-ಆಡಳಿತ ವಿಭಾಗದ ಸಿಇಒ ಹಾಗೂ ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಒಟ್ಟು ಮೂವರು ಪ್ರಮುಖ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಅರ್ಹತೆ ಇಲ್ಲದ ಹೈದರಾಬಾದ್ ಕಂಪನಿಗೆ ಟೆಂಡರ್: ದೂರಿನ ವಿವರಗಳ ಪ್ರಕಾರ, 2025ರಲ್ಲಿ ಈ ಇಲಾಖೆಯ ವತಿಯಿಂದ ಕರೆಯಲಾಗಿದ್ದ ಬೃಹತ್ ಟೆಂಡರ್ ಪ್ರಕ್ರಿಯೆಯಲ್ಲಿ ವ್ಯಾಪಕ ನಿಯಮಬಾಹಿರತೆ ಎಸಗಲಾಗಿದೆ. ನಿಯಮಾವಳಿಗಳ ಪ್ರಕಾರ ಕನಿಷ್ಠ ಅರ್ಹತೆಯನ್ನೇ ಹೊಂದಿಲ್ಲದ ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಟೆಂಡರ್ ನೀಡಲಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಗದಿತ ಮಾನದಂಡಗಳನ್ನು ಪೂರೈಸದ ಕಂಪನಿಗೆ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಯನ್ನು ವಹಿಸಲಾಗಿದೆ ಎಂದು ಎನ್‌ಆರ್ ರಮೇಶ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲೇ ಪ್ರಕ್ರಿಯೆ: ಈ ಭಾರಿ ಮೊತ್ತದ ಟೆಂಡರ್ ಪ್ರಕ್ರಿಯೆಯು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ನಡೆದಿದೆ ಎನ್ನಲಾಗಿದೆ. ಆ ಸಮಯದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR) ಇಲಾಖೆಯು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಸ್ತುವಾರಿಯಲ್ಲೇ ಇತ್ತು. ಇದನ್ನು ಬಂಡವಾಳ ಮಾಡಿಕೊಂಡ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಪ್ರಭಾವ ಬಳಸಿ, ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಈ ಟೆಂಡರ್ ಪ್ರಕ್ರಿಯೆಯನ್ನು ತಮ್ಮ ಅಣತಿಯಂತೆ ನಡೆಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಐಎಎಸ್ ಅಧಿಕಾರಿ ಭೂಬಾಲನ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಸಚಿವರ ಪರವಾಗಿ ಕೆಲಸ ಮಾಡಿ ಸರ್ಕಾರಿ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಹಗರಣದ ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ನೈಸ್ ಅಕ್ರಮದ ಆಡಿಯೋ ಬಾಂಬ್ ಸಿಡಿಸಿದ ಹೆಚ್‌ಡಿಕೆ: ಡಿಕೆ ಶಿವಕುಮಾರ್, ಅಶೋಕ್ ಖೇಣಿ ವಿರುದ್ಧ ಗಂಭೀರ ಆರೋಪ!
