ನವದೆಹಲಿ: ಚುನಾವಣಾ ಆಯೋಗದ ಮೇಲಿನ ಜನರ ನಂಬಿಕೆಯೇ ಪ್ರಜಾಪ್ರಭುತ್ವದ ಅಡಿಪಾಯ. ಹೀಗಾಗಿ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ವರದಿಯಾಗಿರುವ ಗೊಂದಲಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ಸ್ಪಷ್ಟನೆ ನೀಡಿ ಸಾರ್ವಜನಿಕರ ಸಂಶಯಗಳನ್ನು ಪರಿಹರಿಸಬೇಕು ಎಂದು ಬಿಜೆಪಿ ಮಿತ್ರಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (Chirag Paswan) ಒತ್ತಾಯಿಸಿದ್ದಾರೆ.
ಏನಿದು ಎಸ್‌ಐಆರ್ ಗಲಾಟೆ?
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಸಾರ್ವಜನಿಕರಲ್ಲಿ ಮೂಡಿದ್ದ ಕಳವಳಗಳು ಚುನಾವಣಾ ಆಯೋಗದ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರಿವೆ ಎಂಬ ಸುದ್ದಿಗಳು ಹೊರಬಂದ ಬೆನ್ನಲ್ಲೇ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ನಡೆಸಿದ ತನಿಖಾ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಬಗ್ಗೆ ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಬೆಳವಣಿಗೆಯ ಕುರಿತು ಮಾತನಾಡಿದ ಚಿರಾಗ್ ಪಾಸ್ವಾನ್, “ಚುನಾವಣಾ ಆಯೋಗದಂತಹ ಸಂಸ್ಥೆಯ ವಿರುದ್ಧ ಇಂತಹ ಪ್ರಶ್ನೆಗಳು ಎದ್ದಾಗ, ಆಯೋಗವು ವಿಶೇಷವಾಗಿ ಮುಖ್ಯ ಚುನಾವಣಾ ಆಯುಕ್ತರು ತಮ್ಮ ನಿಲುವನ್ನು ಗಟ್ಟಿಯಾಗಿ ಸಾರ್ವಜನಿಕರ ಮುಂದೆ ಇಡುವುದು ಅವರ ಜವಾಬ್ದಾರಿಯಾಗಿದೆ. ವಿರೋಧ ಪಕ್ಷಗಳು ಏನು ಹೇಳುತ್ತವೆ ಎಂಬುದು ನನಗೆ ಮುಖ್ಯವಲ್ಲ, ಏಕೆಂದರೆ ರಾಜಕೀಯ ಮಾಡುವುದು ಅವರ ಕೆಲಸ. ಆದರೆ ಚುನಾವಣಾ ಪ್ರಕ್ರಿಯೆಯ ಕುರಿತಾಗಿಯೇ ಜನರ ಮನಸ್ಸಿನಲ್ಲಿ ಅನುಮಾನಗಳು ಮೂಡಿದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಆದ್ದರಿಂದ ಜನರ ಮನಸ್ಸಿನಲ್ಲಿ ಯಾವುದೇ ಸಂದೇಹ ಉಳಿಯದಂತೆ ಆಯೋಗವು ತನ್ನ ವಿವರಣೆಯನ್ನು ಸ್ಪಷ್ಟವಾಗಿ ನೀಡಬೇಕು” ಎಂದು ಹೇಳಿದರು.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವೇಳೆ ಹಲವು ಪ್ರಮುಖ ವಿಷಯಗಳನ್ನು ಎತ್ತಿ ತೋರಿಸಲಾಗಿತ್ತು. ಮತದಾರರ ಪಟ್ಟಿ ಡೇಟಾಬೇಸ್ ವೇದಿಕೆಯಾದ ‘ಇಆರ್‌ಒನೆಟ್’ (ERONet) ಅನ್ನು ವೇಗವಾಗಿ ಕೇಂದ್ರೀಕರಿಸುವುದು, ನಮೂನೆ 6 ರ ಹೊಸ ಮತದಾರರ ನೋಂದಣಿ ನಮೂನೆಗಳಲ್ಲಿ ಏಕಪಕ್ಷೀಯವಾಗಿ ಮಾಡಲಾದ ಬದಲಾವಣೆಗಳು ಹಾಗೂ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ನಿರ್ಧಾರಗಳ ಕುರಿತು ಆಯುಕ್ತರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ವರದಿ ಹೇಳಿತ್ತು.
ಚುನಾವಣಾ ಆಯೋಗ ಹೇಳಿದ್ದೇನು?
ಆದಾಗ್ಯೂ, ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು, ಬಹುವಿಧದ ಸದಸ್ಯರನ್ನು ಹೊಂದಿರುವ ಸಂಸ್ಥೆಯಲ್ಲಿ ಆಂತರಿಕ ತಾಂತ್ರಿಕ ಟಿಪ್ಪಣಿಗಳು ಮತ್ತು ಬರವಣಿಗೆಯ ಮೂಲಕ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ. ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಎಲ್ಲಾ ಅಂತಿಮ ನಿರ್ಧಾರಗಳು ಮೂವರೂ ಆಯುಕ್ತರ ಒಮ್ಮತದಿಂದಲೇ ಕೂಡಿವೆ ಮತ್ತು ಅವುಗಳಿಗೆ ಕಾನೂನುಬದ್ಧ ಅನುಮೋದನೆ ಇದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ಈ ವಿಚಾರವಾಗಿ ರಾಜಕೀಯ ವಾಗ್ದಾಳಿ ತೀವ್ರಗೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ, “ದೇಶದಲ್ಲಿ ಮತಗಳನ್ನು ಕದಿಯಲಾಗುತ್ತಿದೆ, ಇದರಿಂದಾಗಿ ಜನಪ್ರತಿನಿಧಿಗಳು ಮಾಡುವ ಕಾಯ್ದೆಗಳು ಅಮಾನ್ಯವಾಗುತ್ತವೆ” ಎಂದು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಟೀಕಿಸಿದ ಅವರು, ತಕ್ಷಣವೇ ಅವರ ರಾಜೀನಾಮೆಗೆ ಆಗ್ರಹಿಸಿದರು ಹಾಗೂ ದೇಶದ ಪ್ರಜಾಪ್ರಭುತ್ವ ಧ್ವಂಸವಾಗುವುದನ್ನು ಕಾಂಗ್ರೆಸ್ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು. ಇದರ ಜೊತೆಗೆ, ಕಾಕ್ರೋಚ್ ಜನತಾ ಪಾರ್ಟಿ ಕೂಡ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಮುಂದಿನ 48 ಗಂಟೆಗಳಲ್ಲಿ ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಹಿಂದಿ ಭಾಷೆ ಜಾರಿಗೆ ಆಯೋಗ ರಚನೆ ಕೋರಿದ್ದ ಅರ್ಜಿ ವಜಾ
