TOP NEWS

KPSC: ಕೆಪಿಎಸ್‌ಸಿ ಹಗರಣ ಬಯಲಾದರೆ ಕೆಲ ಸಚಿವರು ಜೈಲಿಗೆ: ವಿಧಾನ ಪರಿಷತ್ತಿನಲ್ಲಿ ಛಲವಾದಿ ನಾರಾಯಣಸ್ವಾಮಿ ಬಾಂಬ್

KPSC Recruitment Row Leader of Opposition Chalavadi Narayanaswamy Drops Ministers to Jail Bombshell in Council

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸತ್ಯಾಸತ್ಯತೆ ಹೊರಬಂದರೆ ರಾಜ್ಯ ಸರ್ಕಾರದ ಹಲವು ಸಚಿವರು ಜೈಲು ಪಾಲಾಗುವುದು ನಿಶ್ಚಿತ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಗುರುವಾರ ವಿಧಾನ ಪರಿಷತ್ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಕೆಪಿಎಸ್‌ಸಿ ಹಗರಣದ ವಿಷಯವನ್ನು ಪ್ರಸ್ತಾಪಿಸಿದ ಅವರು, ಪ್ರಕರಣದ ಕುರಿತು ಸದನದಲ್ಲಿ ತಕ್ಷಣವೇ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಈ ಹೇಳಿಕೆಯು ಸದನದಲ್ಲಿ ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಗದ್ದಲ ಮತ್ತು ವಾಗ್ವಾದಕ್ಕೆ ಕಾರಣವಾಯಿತು.

ಸಿಬಿಐಗೆ ತನಿಖೆ ಹಸ್ತಾಂತರಿಸುವಂತೆ ಮನವಿ

ಪ್ರಕರಣದ ಸ್ವರೂಪ ಮತ್ತು ಗಂಭೀರತೆಯನ್ನು ಎತ್ತಿಹಿಡಿದ ನಾರಾಯಣಸ್ವಾಮಿ, ಪ್ರಸ್ತುತ ನಡೆಯುತ್ತಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ತಕ್ಷಣವೇ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು. ಇದರ ಜೊತೆಗೆ, ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿ ಸಂಸ್ಥೆಯನ್ನು ಪ್ರಸ್ತುತ ಇರುವ ಯಾವ ಕಾನೂನಿನ ಚೌಕಟ್ಟಿನಲ್ಲಿ ಶಾಶ್ವತವಾಗಿ ಮುಚ್ಚಬಹುದು ಎಂಬ ಬಗ್ಗೆಯೂ ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ಸದನದ ಮುಂದೆ ವ್ಯಕ್ತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಗಂಭೀರ ವಿಚಾರವನ್ನು ಚರ್ಚೆಗೆಗೆ ಕೈಗೆತ್ತಿಕೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಅವರು ವಿಧಾನ ಪರಿಷತ್ ಉಪಸಭಾಪತಿ ಸಲೀಂ ಅಹ್ಮದ್ ಅವರನ್ನು ನೇರವಾಗಿ ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸದನ ನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ, ಕೆಪಿಎಸ್‌ಸಿ ನೇಮಕಾತಿ ವಿಚಾರವು ಪ್ರಸ್ತುತ ನ್ಯಾಯಾಲಯದ ಪರಿಶೀಲನೆಯಲ್ಲಿ (sub-judice) ಇರುವುದರಿಂದ, ನಿಯಮಾವಳಿಗಳ ಪ್ರಕಾರ ಈ ವಿಷಯದ ಕುರಿತು ಸದನದಲ್ಲಿ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ ನಾಯಕರು ಹೇಳಿದ್ದೇನು?

ಆಡಳಿತ ಪಕ್ಷದ ವಾದವನ್ನು ಪುಷ್ಟೀಕರಿಸಿದ ಸಭಾಪತಿ ಸಲೀಂ ಅಹ್ಮದ್, ಬಿಜೆಪಿ ನಾಯಕರ ಬೇಡಿಕೆಯನ್ನು ತಳ್ಳಿಹಾಕಿದರು. ಕಾರ್ಯಕಲಾಪ ಸಲಹಾ ಸಮಿತಿ (BAC) ಸಭೆಯಲ್ಲಿ ಕೆಪಿಎಸ್‌ಸಿ ಹಗರಣದ ಚರ್ಚೆಯ ಕುರಿತು ಯಾವುದೇ ಪ್ರಸ್ತಾಪ ಇರಲಿಲ್ಲ. ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸುವುದು ಮತ್ತು ಅಧಿವೇಶನದ ಅವಧಿಯನ್ನು ಹೆಚ್ಚುವರಿಯಾಗಿ ಒಂದು ದಿನ ವಿಸ್ತರಿಸುವ ವಿಷಯಗಳು ಮಾತ್ರ ಬಿಎಸಿ ಸಭೆಯಲ್ಲಿ ನಿರ್ಧಾರವಾಗಿದ್ದವು ಎಂದು ತಿಳಿಸಿದರು. ಅಲ್ಲದೆ, ಮುಖ್ಯಮಂತ್ರಿಗಳು ಸದನಕ್ಕೆ ಆಗಮಿಸಿದಾಗ ಈ ವಿಚಾರವನ್ನು ಅವರ ಗಮನಕ್ಕೆ ತರಬಹುದು ಎಂದು ಅವರು ಸಲಹೆ ನೀಡಿದರು.

ಸಭಾಪತಿಯವರ ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, ಪ್ರತಿಯೊಂದು ವಿಷಯವೂ ಬಿಎಸಿ ಸಭೆಯಲ್ಲೇ ಅಂತಿಮಗೊಳ್ಳಬೇಕೆಂದೇನೂ ಇಲ್ಲ. ಕೆಪಿಎಸ್‌ಸಿ ಹಗರಣವು ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ವಿಷಯವಾಗಿದ್ದು, ಇದರ ಮೇಲೆ ಸದನದಲ್ಲಿ ಚರ್ಚೆಯಾಗಲೇಬೇಕು. ಸಭಾಪತಿಯವರು ಯಾರ ಮುಲಾಜಿಗೂ ಒಳಗಾಗದೆ ಈ ಬಗ್ಗೆ ನೇರ ನಿರ್ಧಾರ ಕೈಗೊಂಡು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.

ಇದನ್ನೂ ಓದಿ:  ಮೈಸೂರು ದಸರಾದಲ್ಲಿ ‘ನೆಮ್ಮದಿ ಊಟ’ಕ್ಕೆ ಬ್ರೇಕ್: ಪಾಲಿಕೆ ವಿರುದ್ಧ ನಟ ದರ್ಶನ್ ಅಳಿಯ ಚಂದನ್ ಸತ್ಯಾಗ್ರಹ

Leave a Reply

Your email address will not be published. Required fields are marked *