ಮಹಾರಾಷ್ಟ್ರ: ಸಾಧಾರಣ ರೈಲು ಪ್ರಯಾಣಿಕರು ಪ್ರತಿದಿನ ಸೀಟಿಗಾಗಿ ಪರದಾಡುವುದು, ಕಿಕ್ಕಿರಿದು ತುಂಬಿದ ಬೋಗಿಗಳಲ್ಲಿ ಪ್ರಯಾಣಿಸುವುದು ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವುದು ತೀರಾ ಸಾಮಾನ್ಯ. ಇಂತಹ ಕುಂದುಕೊರತೆಗಳ ಬಗ್ಗೆ ರೈಲ್ವೆ ಆಡಳಿತ ಮಂಡಳಿ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಲೇ ಇರುತ್ತವೆ. ಆದರೆ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣದ ವಿಐಪಿ (VIP) ಕಾಯುವಿಕೆ ಕೊಠಡಿಯಲ್ಲಿ (Indian Railway) ತಿಗಣೆಗಳ ಕಾಟ ಕಾಣಿಸಿಕೊಂಡಿದ್ದು, ರೈಲ್ವೆ ಅಧಿಕಾರಿಗಳಿಗೆ ಇದೀಗ ನುಂಗಲಾರದ ಮುಳ್ಳಾಗಿ ಪರಿಣಮಿಸಿದೆ.
ಶೋಕಾಸ್ ನೋಟೀಸ್ ಜಾರಿ ಮಾಡಿದ ಮ್ಯಾಜಿಸ್ಟ್ರೇಟ್
ಛತ್ರಪತಿ ಸಂಭಾಜಿನಗರದ ರೈಲ್ವೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ನಂದೇಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಈ ಕುರಿತು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ಮೇ ತಿಂಗಳಿನಲ್ಲಿಯೇ ವಿಐಪಿ ಕೊಠಡಿಯಲ್ಲಿರುವ ಸೋಫಾಗಳಲ್ಲಿ ತಿಗಣೆಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಅವರು ಡಿಆರ್‌ಎಮ್‌ಗೆ ಪತ್ರ ಬರೆದು ದೂರು ನೀಡಿದ್ದರು. ಅಲ್ಲದೆ, ಕೊಠಡಿಯಲ್ಲಿ ತಕ್ಷಣವೇ ಕೀಟನಾಶಕ ಸಿಂಪಡಣೆ (ಪೆಸ್ಟ್ ಕಂಟ್ರೋಲ್) ಮಾಡಿಸಬೇಕು ಮತ್ತು ಹಳೆಯ ಸೋಫಾಗಳನ್ನು ತೆಗೆದು ಹೊಸ ಸೋಫಾಗಳನ್ನು ಹಾಕಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದ್ದರು.
ಆದರೆ, ಸೆಪ್ಟೆಂಬರ್ 19ರವರೆಗೂ ರೈಲ್ವೆ ಆಡಳಿತ ಮಂಡಳಿಯು ಈ ನಿರ್ದೇಶನಗಳನ್ನು ಜಾರಿಗೆ ತರದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಮೇ 20 ರಂದು ಕಳುಹಿಸಲಾಗಿದ್ದ ಪತ್ರಕ್ಕೆ ಯಾವುದೇ ಸೂಕ್ತ ಪ್ರತಿಕ್ರಿಯೆ ನೀಡದ ಮತ್ತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕೋರ್ಟ್ ಇದೀಗ ಗಂಭೀರವಾಗಿ ಪರಿಗಣಿಸಿದೆ. ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ 15ಕ್ಕೂ ಹೆಚ್ಚು ಹೈಕೋರ್ಟ್ ನ್ಯಾಯಮೂರ್ತಿಗಳು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ರೈಲು ಆಗಮನದ ವೇಳೆಗೆ ಈ ವಿಐಪಿ ಕೊಠಡಿಯಲ್ಲಿ ಕಾಯಬೇಕಾಗುತ್ತದೆ. ಆದರೆ, ತಿಗಣೆಗಳ ಕಾಟದಿಂದಾಗಿ ನ್ಯಾಯಮೂರ್ತಿಗಳು ಅಸಹ್ಯಕರ ವಾತಾವರಣ ಎದುರಿಸುವಂತಾಗಿದ್ದು, ಕೊಠಡಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ತಮ್ಮ ಕಾರುಗಳಲ್ಲೇ ಕುಳಿತು ಸಮಯ ಕಳೆಯುವಂತಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಲಯದ ಮುಂದೆ ಹಾಜರಾಗಲು ಸೂಚನೆ
ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಕಾರಣಕ್ಕಾಗಿ ನಂದೇಡ್ ವಿಭಾಗದ ಡಿಆರ್‌ಎಂ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯಡಿ (Contempt of Courts Act) ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಶ್ನಿಸಿದ್ದಾರೆ. ಸೆಪ್ಟೆಂಬರ್ 30, 2026 ರಂದು ಅಧಿಕಾರಿ ಸ್ವತಃ ನ್ಯಾಯಾಲಯದ ಮುಂದೆ ಹಾಜರಾಗಿ ಕಾರಣ ನೀಡಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘಿಸಿದರೆ ಮುಂದಿನ ನ್ಯಾಯಾಂಗ ನಿಂದನೆ ನಡಾವಳಿಗಳನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಈ ನೋಟಿಸ್‌ನ ಪ್ರತಿಯನ್ನು ದಕ್ಷಿಣ ಮಧ್ಯ ರೈಲ್ವೆಯ ಮಹಾಪ್ರಬಂಧಕರಿಗೂ (GM) ರವಾನಿಸಲಾಗಿದ್ದು, ಔರಂಗಾಬಾದ್‌ನ ಆರ್‌ಪಿಎಫ್ (RPF) ಇನ್‌ಸ್ಪೆಕ್ಟರ್‌ಗೆ ನೋಟಿಸ್ ತಲುಪಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಮೋದಿ ಮತ್ತು ಅವರ ತಾಯಿಗೆ ಅಪಮಾನ ಆರೋಪ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಭಾರಿ ಆಕ್ರೋಶ!
