ಮುಂಬೈ: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ (Bollywood) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ದಿ ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವಂತೆಯೇ ದೊಡ್ಡ ಮಟ್ಟದ ಸಂಗೀತ ಕಳವು ವಿವಾದಕ್ಕೆ ಸಿಲುಕಿದೆ. ತಮ್ಮ ಅನುಮತಿಯಿಲ್ಲದೆ ತಮ್ಮದೇ ಸಂಯೋಜನೆಯ ‘ಐಗಿರಿ ನಂದಿನಿ’ ಹಾಡನ್ನು ಸಿನಿಮಾದ ಟ್ರೇಲರ್‌ನಲ್ಲಿ ಬಳಸಿಕೊಳ್ಳಲಾಗಿದೆ ಎಂದು ಗಾಯಕ ಹಾಗೂ ಸಂಗೀತ ಸಂಯೋಜಕ ಸರ್ಗಮ್ ವೈಶ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಟ್ರೇಲರ್ ಮತ್ತು ಸಿನಿಮಾದಿಂದ ತಕ್ಷಣವೇ ಆ ಹಾಡನ್ನು ತೆರವುಗೊಳಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಚಿತ್ರತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆಕ್ರೋಶ ವ್ಯಕ್ತಪಡಿಸಿರುವ ಸರ್ಗಮ್
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿರುವ ಸರ್ಗಮ್ ವೈಶ್, ತಾವು ಸುಮಾರು ಮೂರು ವರ್ಷಗಳಿಂದ ಶ್ರಮವಹಿಸಿ ಸಿದ್ಧಪಡಿಸಿದ್ದ ‘ಐಗಿರಿ ನಂದಿನಿ’ ಹಾಡಿನ ಸುಮಾರು 25 ಸೆಕೆಂಡುಗಳ ಭಾಗವನ್ನು ‘ದಿ ವಾನ್’ ಟ್ರೇಲರ್‌ನಲ್ಲಿ ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಟ್ರೇಲರ್‌ನ 1:08 ರಿಂದ 1:33 ನಿಮಿಷದವರೆಗಿನ ಭಾಗದಲ್ಲಿ ತಮ್ಮ ಮೂಲ ಮಾಸ್ಟರ್ ಫೈಲ್, ಮ್ಯೂಸಿಕ್ ಪ್ರೊಡಕ್ಷನ್ ಹಾಗೂ ಧ್ವನಿಯನ್ನು (ವೋಕಲ್ಸ್) ಇದ್ದಕ್ಕಿದ್ದಂತೆ ಯಾವುದೇ ಬದಲಾವಣೆಯಿಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಅವರು ವೀಡಿಯೋ ಸಾಕ್ಷಿ ಸಮೇತ ತೋರಿಸಿದ್ದಾರೆ. ತಾವು ಪ್ರಖ್ಯಾತ ಮ್ಯೂಸಿಕ್ ಲೇಬಲ್ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಕೃತ್ಯದಿಂದ ತಮಗೆ ತೊಂದರೆಯಾದರೆ ಅದಕ್ಕೆ ಚಿತ್ರತಂಡವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋ ಜೊತೆಗೆ ಸುದೀರ್ಘ ಸಾಲುಗಳನ್ನು ಬರೆದುಕೊಂಡಿರುವ ವೈಶ್, ‘ದಿ ವಾನ್’ ಟ್ರೇಲರ್‌ನಲ್ಲಿ ತಮ್ಮ ಅನುಮತಿಯಾಗಲಿ ಅಥವಾ ಸಮ್ಮತಿಯಾಗಲಿ ಇಲ್ಲದೆ ಹಾಡನ್ನು ಬಳಸಲಾಗಿದೆ. ಸಿನಿಮಾದ ಪ್ರಚಾರಕ್ಕಾಗಲಿ ಅಥವಾ ಟ್ರೇಲರ್‌ಗಾಗಲಿ ನಾನು ಯಾವುದೇ ಅನುಮತಿ ನೀಡಿಲ್ಲ. ಹಾಗಾಗಿ ತಕ್ಷಣವೇ ತಮ್ಮ ಹಾಡನ್ನು ಟ್ರೇಲರ್ ಹಾಗೂ ಸಿನಿಮಾದಿಂದ ತೆಗೆದುಹಾಕಬೇಕು. ಒಂದು ವೇಳೆ ಚಿತ್ರತಂಡದ ಬಳಿ ಅಧಿಕೃತ ಪರವಾನಗಿ ಅಥವಾ ಅನುಮತಿ ಪತ್ರವಿದ್ದರೆ ಅದನ್ನು ತಮಗೆ ತಕ್ಷಣವೇ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿನಿಮಾ ತಂಡಕ್ಕೆ ಹೊಸ ತಲೆನೋವು
ದೀಪಕ್ ಕುಮಾರ್ ಮಿಶ್ರಾ ಮತ್ತು ಅರುಣಾಭ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ದಿ ವಾನ್’ ಚಿತ್ರವು ಪ್ರಾಚೀನ ಅರಣ್ಯ ಹಾಗೂ ವನದೇವಿಯ ಪುರಾಣ ಕಥೆಗಳನ್ನು ಆಧರಿಸಿದ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಹಾಗೂ ‘ದಿ ವೈರಲ್ ಫೀವರ್’ (TVF) ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್, ಶೋಭಾ ಕಪೂರ್, ನೀರಜ್ ಕೊಠಾರಿ ಮತ್ತು ಅರುಣಾಭ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಧ್ಯ ಭಾರತದ ದಟ್ಟ ಕಾಡುಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಹಲವು ಬಾರಿ ಮುಂದೂಡಲ್ಪಟ್ಟ ನಂತರ ಸೆಪ್ಟೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಬಿಡುಗಡೆಯ ಹೊಸ್ತಿಲಲ್ಲೇ ಎದುರಾಗಿರುವ ಈ ಕೃತಿಸ್ವಾಮ್ಯ ವಿವಾದವು ಚಿತ್ರತಂಡಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಮೋದಿ ಹೊಗಳಿದ್ದಕ್ಕೆ ಪ್ರಶಸ್ತಿ ಸಿಕ್ತಾ?: ಟ್ರೋಲ್‌ಗೆ ನಟ ಅನಂತ್ ನಾಗ್ ಖಡಕ್ ತಿರುಗೇಟು!
